ಢಾಕಾ: ಸ್ವಾತಂತ್ರ್ಯ ಯೋಧರ ಕುಟುಂಬಸ್ಥರಿಗೆ ನೀಡಲಾಗಿರುವ ಶೇ.30ರ ಮೀಸಲಾತಿ ವಿವಾದದ ಕಿಚ್ಚಿನಿಂದಾಗಿ ಬಾಂಗ್ಲಾದೇಶ (Bangladesh) ಹೊತ್ತಿ ಉರಿದಿದೆ.
ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ (Sheikh Hasina) ರಾಜೀನಾಮೆ ಕೊಟ್ಟು ಭಾರತಕ್ಕೆ ಪರಾರಿಯಾದ ಬೆನ್ನಲ್ಲೇ ಅವಾಮಿ ಲೀಗ್ ಪಕ್ಷದ ಮುಖಂಡರನ್ನು ಸಿಕ್ಕ ಸಿಕ್ಕಲ್ಲಿ ಹಲ್ಲೆಗೈದು ಹತ್ಯೆ ಮಾಡಲಾಗುತ್ತಿದೆ. ನೂರಾರು ಮಂದಿ ಪ್ರಾಣ ಕಳೆದುಕೊಂಡರೂ, ಪ್ರತಿಭಟನೆಯ ಕಾವು ಕಡಿಮೆಯಾಗಿಲ್ಲ.
ಖ್ಯಾತ ಜನಪದ ಗಾಯಕ ರಾಹುಲ್ ಆನಂದ್ ಮನೆಗೆ ಬೆಂಕಿ ಹಚ್ಚಿದ್ದರಿಂದ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಈ ನಡುವೆ ಪ್ರತಿಭಟನಾಕಾರರು ಬಾಂಗ್ಲಾದೇಶ ಚಿತ್ರರಂಗದ ನಟ ಹಾಗೂ ಅವರ ತಂದೆಯನ್ನು ನಡುಬೀದಿಯಲ್ಲೇ ಹೊಡೆದು ಹತ್ಯೆಗೈದಿದ್ದಾರೆ ಎಂದು ವರದಿಯಾಗಿದೆ.
ಸೋಮವಾರ(ಆ.5ರಂದು) ರಾತ್ರಿ ಬಾಂಗ್ಲಾದೇಶದ ಚಿತ್ರ ನಿರ್ಮಾಪಕ ಸಲೀಂ ಖಾನ್ (Selim Khan) ಹಾಗೂ ಆತನ ಮಗ ಹೀರೊ ಶಾಂತೋ ಖಾನ್ (Bangladeshi actor Shanto Khan) ಅವರನ್ನು ನಡುರಸ್ತೆಯಲ್ಲೇ ಉದ್ರಿಕ್ತರ ಗುಂಪು ಕಟ್ಟಿಗೆಗಳಿಂದ ಹಲ್ಲೆಗೈದು ಹತ್ಯೆ ಮಾಡಲಾಗಿದೆ ʼಪಿಟಿಐʼ ವರದಿ ತಿಳಿಸಿದೆ.
ನಿರ್ಮಾಪಕರೆಂದು ಗುರುತಿಸಿಕೊಂಡಿದ್ದ ಸಲೀಂ ಖಾನ್ ಅವಾಮಿ ಲೀಗ್‌ನ (Awami League) ಉಚ್ಛಾಟಿತ ನಾಯಕರಾಗಿದ್ದರು. ಅವಾಮಿ ಲೀಗ್ ಶೇಕ್ ಹಸೀನಾ ಅವರ ಪಕ್ಷವಾಗಿದ್ದು, ಪ್ರತಿಭಟನಾಕಾರರು ಅವಾಮಿ ಲೀಗ್ ಪಕ್ಷದ ಮುಖಂಡರನ್ನು ಸಿಕ್ಕ ಸಿಕ್ಕಲ್ಲಿ ಹಲ್ಲೆಗೈದು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿ ಕೇಳಿ ಕೋಲ್ಕತ್ತಾ ಚಿತ್ರರಂಗದ ನಟ ರಾಜತಬಾ ದತ್ತಾ ಆಘಾತ ವ್ಯಕ್ತಪಡಿಸಿದ್ದಾರೆ. ಶಾಂತೋ ಖಾನ್ ಅವರ ‘ಬಿಕ್ಖೋವ್’ ಎನ್ನುವ ಚಿತ್ರದಲ್ಲಿ ರಾಜತಬಾ ದತ್ತಾ ನಟಿಸಿದ್ದರು.
ಬಾಂಗ್ಲಾ ಚಿತ್ರರಂಗದಲ್ಲಿ ನಟನಾಗಿ ಗುರುತಿಸಿಕೊಂಡಿದ್ದ ಶಾಂತೋ ಖಾನ್ 2019 ರಲ್ಲಿ ‘ಪ್ರೇಮ್ ಚೋರ್’ ಮೂಲಕ ಪಾದಾರ್ಪಣೆ ಮಾಡಿದರು. 2021 ರಲ್ಲಿ ‘ಪಿಯೆ ರೇ’, 2023 ರಲ್ಲಿ ‘ಬುಬುಜಾನ್’ ಮತ್ತು 2024 ರಲ್ಲಿ ‘ಆಂಟೊ ನಗರ್’ ನಲ್ಲಿ ಕೆಲಸ ಮಾಡಿದ್ದರು.
ಶಾಂತೋ ಖಾನ್ 2021ರಲ್ಲಿ ಬಂದ ‘ತುಂಗಿಪರಾರ್ ಮಿಯಾ ಭಾಯಿ’ ಚಿತ್ರದಲ್ಲಿ ಶೇಖ್ ಮುಜಿಬುರ್ ರೆಹಮಾನ್ ಅವರ ಪಾತ್ರದಲ್ಲಿ ನಟಿಸಿದ್ದರು. ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಶೇಕ್ ಹಸೀನಾ ಅವರ ತಂದೆಯಾಗಿದ್ದರು.
ಬಾಂಗ್ಲಾದೇಶದಲ್ಲಿ ಅರಾಜಕತೆ ಮುಂದವರಿದಿರುವಂತೆಯೇ ಗುರುವಾರ (ಆ.8) ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನುಸ್ ನೇತೃತ್ವದ 15 ಸದಸ್ಯರ ಸರ್ಕಾರ ಪ್ರಮಾಣ ವಚನ ಸ್ವೀಕರಿಸಲಿದೆ ಎಂದು ಬಾಂಗ್ಲಾ ಸೇನಾ ಮುಖ್ಯಸ್ಥ ಜ. ವಕಾರ್-ಉಜ್-ಜಮಾನ್ ಹೇಳಿದ್ದಾರೆ.