ರಾವಲ್ಪಿಂಡಿ: ಪ್ರವಾಸಿ ಬಾಂಗ್ಲಾದೇಶ (Bangladesh) ವಿರುದ್ದ ಟೆಸ್ಟ್ ಸರಣಿಯ ಎರಡೂ ಪಂದ್ಯಗಳನ್ನು ಸೋತ ಪಾಕಿಸ್ತಾನವು (Pakistan) ತವರು ಅಭಿಮಾನಿಗಳ ವಿರುದ್ದ ಅವಮಾನ ಅನುಭವಿಸಿದೆ. ಪಾಕಿಸ್ತಾನ ವಿರುದ್ದ ಬಾಂಗ್ಲಾದೇಶವು 2-0 ಅಂತರದಿಂದ ಟೆಸ್ಟ್ ಸರಣಿ ವೈಟ್ ವಾಶ್ ಮಾಡಿ ಇತಿಹಾಸ ಬರೆದಿದೆ.
ರಾವಲ್ಪಿಂಡಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಆರು ವಿಕೆಟ್ ಅಂತರದ ಗೆಲುವು ಕಂಡಿದೆ. ಪಾಕಿಸ್ತಾನ ನೀಡಿದ 185 ರನ್ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶವು ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಮೂಲಕ ಪಾಕಿಸ್ತಾನ ವಿರುದ್ದ ಮೊದಲ ಬಾರಿಗೆ ಟೆಸ್ಟ್ ಸರಣಿ ಜಯಿಸಿದೆ.
ಝಾಕಿರ್ ಹಸನ್ (40), ನಜ್ಮುಲ್ ಹೊಸೈನ್ ಶಾಂಟೊ (38) ಮತ್ತು ಮೊಮಿನುಲ್ ಹಕ್ (34) ಅವರು ಪಾಕಿಸ್ತಾನ ನೆಲದಲ್ಲಿ ಬಾಂಗ್ಲಾ ಗೆಲುವು ಸಾಧಿಸಲು ಪ್ರಮುಖ ಕೊಡುಗೆ ನೀಡಿದರು. ಬಾಂಗ್ಲಾದೇಶವು ಸತತ ಆರು ಸೋಲುಗಳನ್ನು ಎದುರಿಸಿದ ನಂತರ ಪಾಕಿಸ್ತಾನದ ವಿರುದ್ಧ ತಮ್ಮ ಮೊದಲ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತು. ಮಳೆಯಿಂದಾಗಿ ಮೊದಲ ದಿನ ಸಂಪೂರ್ಣ ರದ್ದಾಗಿದ ನಂತರ, ಅಲ್ಲದೆ ಒಂದು ಹಂತದಲ್ಲಿ ಬಾಂಗ್ಲಾ ಕೇವಲ 26 ರನ್ ಗೆ ಆರು ವಿಕೆಟ್ ಕಳೆದುಕೊಂಡ ಪರಿಸ್ಥಿತಿಯಿಂದ ಪುಟಿದ ಬಾಂಗ್ಲಾ ಅಭೂತಪೂರ್ವ ಗೆಲುವು ಕಂಡಿತು.
ಬಾಂಗ್ಲಾ ವಿಕೆಟ್ ಕೀಪರ್ ಲಿಟನ್ ದಾಸ್ ಅವರು ಮೊದಲ ಇನ್ನಿಂಗ್ಸ್ ನಲ್ಲಿ 138 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. ಇವರೊಂದಿಗೆ ಆಲ್ ರೌಂಡರ್ ಮೆಹದಿ ಹಸನ್ 78 ರನ್ ಗಳಿಸಿದ್ದರು. ಇವರಿಬ್ಬರು ಏಳನೇ ವಿಕೆಟ್ ಗೆ 165 ರನ್ ಒಟ್ಟು ಮಾಡಿದ್ದರು.
ಲಿಟನ್ ದಾಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಮೆಹದಿ ಹಸನ್ ಮಿರಾಜ್ ಸರಣಿ ಶ್ರೇಷ್ಠ ಪ್ರಶಸ್ತಿ ಗಳಿಸಿದರು.