ಚತ್ತೋಗ್ರಾಮ್: ಅಂತಿಮ ಟಿ 20 ಪಂದ್ಯದಲ್ಲಿ ಐರ್ಲೆಂಡ್ ತಂಡ ಆತಿಥೇಯ ಬಾಂಗ್ಲಾದೇಶಕ್ಕೆ 7 ವಿಕೆಟ್‌ಗಳ ಸೋಲುಣಿಸಿದೆ. ಇದು ಬಾಂಗ್ಲಾ ನೆಲದಲ್ಲಿ ಐರಿಷ್ ಪಡೆ ಸಾಧಿಸಿದ ಮೊದಲ ಗೆಲುವು.
ಮೊದಲೆರಡು ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿದ್ದ ಐರ್ಲೆಂಡ್ ಅಂತಿಮ ಮುಖಾ ಮುಖೀಯಲ್ಲಿ ತಿರುಗಿ ಬಿತ್ತು. ಬಾಂಗ್ಲಾವನ್ನು 10.2 ಓವರ್‌ಗಳಲ್ಲಿ 124ಕ್ಕೆ ಹಿಡಿದು ನಿಲ್ಲಿಸಿತು. ಇದನ್ನು ಬೆನ್ನಟ್ಟಿ ಹೋದ ಐರ್ಲೆಂಡ್ 14 ಓವರ್‌ಗಳಲ್ಲಿ 3 ವಿಕೆಟಿಗೆ 126 ರನ್ ಬಾರಿಸಿತು.
ಐರ್ಲೆಂಡ್ ಸಾಂಕ ಬೌಲಿಂಗ್ ಆಕ್ರಮಣದ ಮೂಲಕ ಯಶಸ್ಸು ಸಾಧಿಸಿತು. ದಾಳಿಗಿಳಿದ ಏಳೂ ಬೌಲರ್ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಮಾರ್ಕ್ ಅಡೈರ್ 3 ವಿಕೆಟ್ ಉರುಳಿಸಿ ಮಿಂಚಿದರು.
ಬಾಂಗ್ಲಾ ಸರದಿಯಲ್ಲಿ ಒಂದು ಶತಕಾರ್ಧ ದಾಖಲಾಯಿತು. 6ನೇ ಕ್ರಮಾಂಕದ ಬ್ಯಾಟರ್ ಶಮಿಮ್ ಹುಸೇನ್ 51 ರನ್ ಹೊಡೆದರು. ಚೇಸಿಂಗ್ ವೇಳೆ ಐರ್ಲೆಂಡ್ ನಾಯಕ ಪಾಲ್ ಸ್ಟರ್ಲಿಂಗ್ 77 ರನ್ ಬಾರಿಸಿ ಅಮೋಘ ಗೆಲುವು ತಂದಿತ್ತರು. ಈ ಸಾಧನೆಗಾಗಿ ಪಂದ್ಯಶ್ರೇಷ್ಠ ಗೌರವ ಒಲಿಯಿತು. ಸರಣಿಶ್ರೇಷ್ಠ ಪ್ರಶಸ್ತಿ ಟಸ್ಕಿನ್ ಅಹ್ಮದ್ ಪಾಲಾಯಿತು.