Advertisement

ಬಂಗಾರಪೇಟೆ; ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೆಚ್ಚು ರಾಗಿ ಖರೀದಿ

04:48 PM Jun 22, 2022 | Team Udayavani |

ಬಂಗಾರಪೇಟೆ: ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ತೆರೆಯಲಾಗಿದ್ದ ರಾಗಿ ಖರೀದಿ ಕೇಂದ್ರ ಗಳಲ್ಲಿ ಉತ್ತಮ ಬೆಲೆ ನಿಗದಿ ಮಾಡಿರುವ ಕಾರಣ ರೈತರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರಕಿದೆ.

Advertisement

ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಿದೆ. ಅದರಂತೆ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಗಳಲ್ಲಿ ರಾಗಿಯನ್ನು ಮಾರಾಟ ಮಾಡಲು ಕಳೆದ 2 ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮುಂದೆ ಬಂದಿದ್ದಾರೆ. ರಾಗಿ ಕೇಂದ್ರಗಳಲ್ಲಿ ಮುಕ್ತ ಮಾರುಕಟ್ಟೆಗಿಂತಲೂ ಸುಮಾರು ಎರಡು ಪಟ್ಟು ಬೆಲೆ ನಿಗದಿಯಾಗಿರುವ ಕಾರಣ ಮಧ್ಯವರ್ತಿ ಗಳ ನೆರವಿಲ್ಲದೆ ರೈತರು ರಾಗಿ ಕೇಂದ್ರಕ್ಕೆ ಬಂದು ತಮ್ಮ ದಾಖಲೆಗಳನ್ನು ನೀಡಿ ನೋಂದಾಯಿಸಿ ಕೊಂಡು ರಾಗಿ ಪೂರೈಕೆ ಮಾಡುತ್ತಿದ್ದಾರೆ.

ಸರ್ಕಾರದಿಂದ ಪ್ರತಿ ಕ್ವಿಂಟಲ್‌ ರಾಗಿಗೆ ಕಳೆದ ವರ್ಷ 3,295 ರೂ.ಗಳಷ್ಟು ದರವನ್ನು ನಿಗದಿಪಡಿಸ ಲಾಗಿದ್ದು, ಈ ವರ್ಷ 3,377 ರೂಗಳನ್ನು ಪ್ರತಿ ಕ್ವಿಂಟಾಲ್‌ಗೆ ನಿಗದಿ ಮಾಡಿ ಬೆಲೆ ಏರಿಕೆ ಮಾಡಿರುವುದರಿಂದ ರೈತರಿಗದ ತಂದಿದೆ. ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಟ 20 ಕ್ವಿಂಟಲ್‌ವರೆಗೆ ರಾಗಿ ಖರೀದಿಗೆ ಸರ್ಕಾರ ಅವಕಾಶ ಕಲ್ಪಿಸಿರುವ ಕಾರಣ ಹೆಚ್ಚಾಗಿ ಬೆಳೆದ ದೊಡ್ಡ ರೈತರಿಗೆ ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಲು ಅವಕಾಶ ಇಲ್ಲದಂತಾಗಿದೆ.

ಕಳೆದ ಸಾಲಿನಲ್ಲಿ ಪ್ರತಿ ರೈತರಿಂದ ಐದು ಎಕರೆ ಜಮೀನಿಗೆ ಗರಿಷ್ಠ 50 ಕ್ವಿಂಟಲ್‌ ರಾಗಿ ಮಾರಾಟ ಮಾಡಲು ಅವಕಾಶ ನೀಡಿದ್ದರು. ಈ ಬಾರಿ ಪ್ರತಿಯೊಬ್ಬರ ರೈತರಿಗೆ ಎರಡು ಎಕರೆ ಜಮೀನು ಹಾಗೂ ಗರೀಷ್ಠ 20 ಕ್ವಿಂಟಾಲ್‌ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಯಾವುದೇ ರೈತರು ಐದು ಎಕರೆ ಜಮೀನು ಹೊಂದಿದ್ದಲ್ಲಿ ದೊಡ್ಡ ರೈತರೆಂದು ಬ್ಲಾಕ್‌ ಮಾಡಲಾಗಿರುವುದರಿಂದ ಹೆಚ್ಚು ರಾಗಿ ಮಾರಾಟ ಮಾಡಲು ರೈತರಿಗೆ ಅವಕಾಶ ಇಲ್ಲದೇ
ಇರುವುದರಿಂದ ಅತಿ ಹೆಚ್ಚು ರಾಗಿ ಬೆಳೆದಿರುವ ರೈತರಿಗೆ ಸಂಕಷ್ಟ ಎದುರಾಗಿರುವುದರಿಂದ ಕಡಿಮೆ ಜಮೀನು ಹೊಂದಿರುವ ಬೇರೆ ರೈತರ ಹೆಸರಿನಲ್ಲಿ ರಾಗಿ ಮಾರಾಟ ಮಾಡಲಾಗುತ್ತಿದೆ.

ಸರ್ಕಾರ ಖರೀದಿ ಕೇಂದ್ರಗಳನ್ನು ಆರಂಭಿಸುವುದಕ್ಕೂ ಮುಂಚೆ ರೈತರು ಮುಕ್ತ ಮಾರುಕಟ್ಟೆಯಲ್ಲಿ ರಾಗಿಯನ್ನು ಕನಿಷ್ಠ 1,500 ರಿಂದ ಗರಿಷ್ಠ 1,800 ರೂಗಳಿಗೆ ಮಾರಾಟ ಮಾಡುತ್ತಿದ್ದರು. ಸರ್ಕಾರದಿಂದ ಪ್ರತಿ ಕ್ವಿಂಟಲ್‌ ರಾಗಿಗೆ ಈ ವರ್ಷ 3,377 ರೂ.ಗಳಷ್ಟು ಧರವನ್ನು ನಿಗದಿಪಡಿಸಲಾಗಿದ್ದು, ರೈತರು ಅವಕಾಶ ಕೇಳಿದ ಕಾರಣದಿಂದ ಎರಡು ಬಾರಿ ರಾಗಿ ಖರೀದಿಗೆ ಅವಕಾಶ ಕಲ್ಪಿಸಿದ್ದರು.

Advertisement

ರೈತರಿಂದ ಖರೀದಿ ಮಾಡಿದ ರಾಗಿಗೆ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡುವ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳತ್ತ ರೈತರು ಮುಖ ಮಾಡುತ್ತಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ರೈತರಿಂದ ರಾಗಿ ಖರೀದಿಸಲು ಜಾರಿಗೆ ತಂದಿರುವ ನಿಯಮಗಳನ್ನು ಸಡಿಲಗೊಳಿಸದೇ ಇರುವುದರಿಂದ ಕೆಲವು ರೈತರಿಗೆ ಅನ್ಯಾಯವಾಗುತ್ತಿದೆ. ಇಡೀ ಕೋಲಾರ ಜಿಲ್ಲೆಯಲ್ಲಿಯೇ ಬಂಗಾರಪೇಟೆ ತಾಲೂಕಿನಲ್ಲಿ ಅತೀ ಹೆಚ್ಚು ರೈತರು ರಾಗಿ ಮಾರಾಟಕ್ಕಾಗಿ ನೊಂದಣಿ ಮಾಡಿಸಿ ಅತೀ ಹೆಚ್ಚು ರಾಗಿಯನ್ನು ಮಾರಾಟ ಮಾಡಿದ್ದಾರೆ.

ಇದುವರೆಗೂ 56,606ಕ್ವಿಂಟಲ್‌ ರಾಗಿ ಖರೀದಿ
ತಾಲೂಕಿನಲ್ಲಿ 2019-2020ರಲ್ಲಿ ಸುಮಾರು 500 ರೈತರು ಕೇವಲ 7,242 ಕ್ವಿಂಟಾಲ್‌ ರಾಗಿಯನ್ನು ಮಾತ್ರ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರು. 2020-21 ನೇ ಸಾಲಿನಲ್ಲಿ ಉತ್ತಮ ಮಳೆ ಬಂದಿದ್ದರಿಂದ ರೈತರು 44829 ಕ್ವಿಂಟಲ್‌ ರಾಗಿಯನ್ನು 3,290 ರೂ.ಗಳಿಗೆ ಮಾರಾಟ ಮಾಡಿದ್ದರು. 2021-22 ನೇ ಸಾಲಿನಲ್ಲಿ 4,240 ರೈತರು ರಾಗಿ ಮಾರಾಟಕ್ಕೆ ನೊಂದಣಿ ಮಾಡಿಸಿ, 4,071 ರೈತರು 56,606 ಕ್ವಿಂಟಲ್‌ ರಾಗಿಯನ್ನು ಇದೂವರೆಗೂ ಮಾರಾಟ ಮಾಡಿದ್ದಾರೆ ಎಂದು ಕೆಸಿಎಸ್‌ಎಫ್ಸಿ ಗೋಡೌನ್‌ನ ವ್ಯವಸ್ಥಾಪಕ ಖಲೀಮುಲ್ಲಾಖಾನ್‌ ತಿಳಿಸಿದರು.

●ಎಂ.ಸಿ.ಮಂಜುನಾಥ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next