ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಎಳನೀರು ಸಮೀಪದ ಬಂಗಾರ ಪಲ್ಕೆ ಫಾಲ್ಸ್ ಬಳಿ ಕಳೆದ ಜ.25 ರಂದು ನಡೆದ ಗುಡ್ಡ ಕುಸಿತಗೊಂಡ ಸ್ಥಳಕ್ಕೆ ಗುರುವಾರ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಭೇಟಿ ನೀಡಿದ್ದಾರೆ.
ದುರಂತ ನಡೆದು 18 ದಿನಗಳಾಗಿದ್ದು, ಯುವಕನ ದೇಹ ಪತ್ತೆಯಾಗದ ಹಿನ್ನೆಲೆ ಗುರುವಾರ ಒಂದು ದಿನ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಈ ಹಿನ್ನೆಲೆ ಅಧಿಕಾರಿ ವರ್ಗ ಸ್ಥಳ ಪರಿಶೀಲನೆ ನಡೆಸಿ ಸ್ಥಳೀಯರು, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿತು.
ಇದಕ್ಕೂ ಮುನ್ನ ಸನತ್ ಶೆಟ್ಟಿ ಮನೆಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಸನತ್ ಶೆಟ್ಟಿ ಪೋಷಕರಿಗೆ ಸಾಂತ್ವನದ ನುಡಿಗಳನ್ನು ಹೇಳಿದ ಅವರು ಶಕ್ತಿ ಮೀರಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಸರಕಾರಿ ಇಲಾಖೆಗಳ ಸಿಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ: ಮುಂದುವರಿದ ರಾಗಿಂಗ್ ಹಾವಳಿ: ಮಂಗಳೂರಿನಲ್ಲಿ 11 ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗಿದೆ. ಮುಂದೆ ಹೆಚ್ಚಿನ ಸಹಾಯ ಬೇಕಿದ್ದಲ್ಲಿ ಅದಕ್ಕೂ ಅವಕಾಶ ಕಲ್ಪಿಸಲು ಸಿದ್ಧ. ಪೋಷಕರಾದ ತಾವು ಧೈರ್ಯದಿಂದ ಇರಬೇಕು. ಸ್ಥಳಕ್ಕೆ ಭೇಟಿ ನೀಡಿ ಮಾಡಬಹುದಾದ ಕಾರ್ಯಾಚರಣೆಗಳ ಕುರಿತು ಚಿಂತಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಮಣಿಪಾಲ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮಾವಿನ ಮರಕ್ಕೆ ತಗಲಿದ ಬೆಂಕಿ | Udayavani
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ., ಡಿ.ವೈ.ಎಸ್.ಪಿ. ವೆಲೆಂಟೈನ್ ಡಿಸೋಜ, ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್, ಬೆಳ್ತಂಗಡಿ ವೃತ್ತನಿರೀಕ್ಷಕ ಸಂದೇಶ್ ಪಿ.ಜಿ., ಮಲವಂತಿಗೆ ಗ್ರಾ.ಪಂ. ಅಧ್ಯಕ್ಷೆ ಅನಿತಾ, ಉಪಾಧ್ಯಕ್ಷ ದಿನೇಶ್ ಗೌಡ, ಸದಸ್ಯ ಪ್ರಕಾಶ್ ಕುಮಾರ್ ಜೈನ್, ರವಿಚಕ್ಕಿತ್ತಾಯ ಮೊದಲಾದವರು ಇದ್ದರು.