Advertisement

Arrested: ಭೂ ಅವ್ಯವಹಾರ; ಬೆಂ.ವಿ.ವಿ. ಪ್ರೊ.ಮೈಲಾರಪ್ಪ ಬಂಧನ

11:53 AM May 05, 2024 | Team Udayavani |

ಬೆಂಗಳೂರು: ಬೆಂಗಳೂರು ವಿವಿಯ ಪ್ರೊಫೆಸರ್‌ ಬಿ.ಸಿ. ಮೈಲಾರಪ್ಪ ಅವರ ಮೇಲೆ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಪಿತೂರಿ ಮತ್ತು ವಂಚನೆ ದೂರು ದಾಖಲಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಹೈದರಬಾದ್‌ನ ಜ್ಯುಬಿಲಿ ಹಿಲ್ಸ್‌ ಪೊಲೀಸ್‌ ಠಾಣೆಯಲ್ಲಿ ಕೆ. ಶಶಿಧರ್‌ ರೆಡ್ಡಿ ಎಂಬು ವರು 2023ರ ಫೆ. 15ರಂದು ನೀಡಿದ್ದ ದೂರಿನ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು 2024ರ ಮಾ.22ರಂದು ಮೈಲಾರಪ್ಪ ಸೇರಿದಂತೆ ಪ್ರಕರಣದ ಇತರ ಆರೋ ಪಿಗಳಾದ ಕೊರಟಗೆರೆ ಕೃಷ್ಣಪ್ರಸಾದ್‌, ಆರ್‌. ಜಗನ್ನಾಥ್‌, ಸುರೇಂದರ್‌ ರೆಡ್ಡಿ ಅವರನ್ನು ಬಂಧಿಸಿದ್ದರು. 14 ದಿನಗಳ ನ್ಯಾಯಾಂಗ ಬಂಧನದ ಬಳಿಕ ಹೈದರಾಬಾದ್‌ನ ಚೀಫ್ ಮೆಟ್ರೋಪಾಲಿಟನ್‌ ನ್ಯಾಯಾಲಯವು ಏ. 4 ರಂದು ಮೈಲಾರಪ್ಪ ಅವರನ್ನು ಬಿಡುಗಡೆ ಮಾಡಿದೆ.

ಈ ಮಧ್ಯೆ ಸರ್ಕಾರಿ ಅಧಿಕಾರಿಯಾಗಿರುವ ಮೈಲಾ ರಪ್ಪ ಅವರ ಬಂಧನದ ಬಳಿಕ ನಿಯಮಾನುಸಾರ ಜುಬಿಲಿ ಹಿಲ್ಸ್‌ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಬೆಂಗಳೂರು ವಿವಿಯ ಕುಲಪತಿ ಅವರಿಗೆ ಪತ್ರ ಬರೆದು ಬಂಧನದ ಮಾಹಿತಿಯನ್ನು ನೀಡಿದ್ದಾರೆ. ಆದರೆ ಈ ಬಗ್ಗೆ ಮಾಹಿತಿಯನ್ನು ಗೌಪ್ಯವಾಗಿಟ್ಟ ಕುಲಪತಿ ನಿಯಮಾನುಸಾರ ಬಂಧಿತ ವ್ಯಕ್ತಿಯನ್ನು ಅಮಾನತುಗೊಳಿಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ವರದಿಯನ್ನು ನೀಡಿಲ್ಲ ಎನ್ನಲಾಗಿದೆ.

ಏನಿದು ಪ್ರಕರಣ?: ತೆಲಂಗಾಣ ಪೊಲೀಸರು ಬೆಂಗಳೂರು ವಿವಿಗೆ ಬರೆದಿರುವ ಪತ್ರದಲ್ಲಿ ಪ್ರಕರಣದ ವಿವರಣೆಯನ್ನು ನೀಡಿದ್ದು, ಸಾಕ್ಷಿಗಳ ಹೇಳಿಕೆ ಮತ್ತು ದಾಖಲೆಗಳ ಆಧಾರದಲ್ಲಿ ತನಿಖಾಧಿಕಾರಿ ಆರೋಪಿ ಮೈಲಾರಪ್ಪ ಅವರನ್ನು ಬಂಧಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಸುರೇಂದರ್‌ ರೆಡ್ಡಿಯು ಇನ್ನೋರ್ವ ಆರೋಪಿ ಕೃಷ್ಣಪ್ರಸಾದ್‌ರನ್ನು ವಾಣಿಜ್ಯ ಮತ್ತು ವಸತಿ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುವ ಶ್ರಿವೆನ್‌ ಇನ್‌ಫ್ರಾ ಪ್ರಾಜೆಕ್ಟ್ ಸಂಸ್ಥೆಯ ಶಶಿಧರ್‌ ರೆಡ್ಡಿಗೆ ಪರಿಚಯಿಸಲಾಗಿತ್ತು. ಯಲಹಂಕದ ಹೊಸಹಳ್ಳಿಯಲ್ಲಿ 11.30 ಗುಂಟೆ ಜಮೀನಿಗೆ ಕೃಷ್ಣಪ್ರಸಾದ್‌ ಮಾಲೀಕರಾಗಿದ್ದು, ಈ ಜಮೀನು ಅಭಿವೃದ್ಧಿ ಪಡಿಸಲು ಸೂಕ್ತವಾಗಿದೆ ಎಂದು ತಿಳಿಸಿದ್ದರು. ಆ ಬಳಿಕ ಇನ್ನೊಮ್ಮೆ ಜಾಕೋನ್ಸ್‌ ಬಿಲ್ಡಿಂಗ್‌ ಟೆಕ್ನಾಲಜಿಯ ಪ್ರತಿನಿಧಿ ಎಂದು ಹೇಳಿಕೊಂಡ ಇನ್ನೊರ್ವ ಆರೋಪಿ ಜಗನ್ನಾಥ್‌ ಸಹ ಇವರ ಜೊತೆ ಸೇರಿಕೊಂಡು ಜಮೀನು ಖರೀದಿಗೆ ದೂರುದಾರರನ್ನು ಪುಸಲಾಯಿಸಿದ್ದರು. ದಾಖಲೆಗಳ ಫೋಟೋಕಾಪಿ ತೋರಿಸಿ ಮೂಲ ದಾಖಲೆಗಳನ್ನು ಆ ಬಳಿಕ ನೀಡುವುದಾಗಿ ಶಶಿಧರ್‌ ರೆಡ್ಡಿಯನ್ನು ನಂಬಿಸಿ 5.35 ಕೋಟಿ ರೂ. ಮುಂಗಡ ‌ ಪಡೆದಿದ್ದರು.

Advertisement

ಆ ಬಳಿಕ ಶಶಿಧರ್‌ ರೆಡ್ಡಿ ಅನ್ಯ ಮೂಲಗಳ ಮೂಲಕ ಜಮೀನಿನ ಹಿನ್ನೆಲೆಯನ್ನು ಪತ್ತೆಹಚ್ಚಿದ್ದಾಗ ಈ ಜಮೀನು ಕೃಷ್ಣಪ್ರಸಾದ್‌ ಅವರ ತಂದೆಗೆ ಮತ್ತು ಕೃಷ್ಣಪ್ರಸಾದ್‌ಗೆ ಸೇರಿಯೇ ಇಲ್ಲ ಎಂದು ತಿಳಿದುಬಂದಿತ್ತು. ತಕ್ಷಣ ಶಶಿಧರ್‌ ರೆಡ್ಡಿ ತಾನು ನೀಡಿರುವ ಮುಂಗಡವನ್ನು ವಾಪಸ್‌ ನೀಡುವಂತೆ ಒತ್ತಡ ಹೇರಿದಾಗ ಮೈಲಾರಪ್ಪ ಕರೆ ಮಾಡಿ ತನಗೆ ಸರ್ಕಾರದ ಮಟ್ಟದಲ್ಲಿ ಉತ್ತಮ ಸಂಪರ್ಕವಿದೆ, ಹಣಕ್ಕಾಗಿ ಆರೋಪಿಗಳ ಮೇಲೆ ಒತ್ತಡ ಹೇರಬೇಡಿ ಎಂದು ಬೆದರಿಕೆ ಹಾಕಿದ್ದರು. ಆ ಬಳಿಕ ಈ ಜಮೀನನ್ನು ಸರ್ಕಾರವು ವೈಎಎಸ್‌ ಚಾರಿಟಬಲ್‌ ಟ್ರಸ್ಟ್‌ ಮತ್ತು ಕೊಡವ ಸಮಾಜಕ್ಕೆ ಹಂಚಿಕೆ ಮಾಡಿರುವುದು ಶಶಿಧರ್‌ ರೆಡ್ಡಿ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಹಣವನ್ನು ವಾಪಸ್‌ ನೀಡುವಂತೆ ಕೇಳಿದಾಗ ಬೆದರಿಕೆ ಮತ್ತು ನಿರ್ಲಕ್ಷ್ಯ ತೋರಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಾಹಿತಿ ಕೇಳಿರುವ  ಉನ್ನತ ಶಿಕ್ಷಣ ಇಲಾಖೆ :

ಮೈಲಾರಪ್ಪ ಅವರ  ಮೇಲೆ ಆರೋಪ ದಾಖಲಾಗಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರೂ ತನಗೆ ಈ ಬಗ್ಗೆ ಮಾಹಿತಿ ನೀಡದಿರುವ ಬೆಂಗಳೂರು ವಿವಿಯ ಕುಲಪತಿ ಕ್ರಮದ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣವನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಇಲಾಖೆ ಸೂಚಿಸಿದೆ. ಈ ಮಧ್ಯೆ ವಿವಿಯ ಕುಲಪತಿ ಜಯಕರ್‌ ಎಸ್‌. ಎಂ. ಅವರನ್ನು ಪ್ರತಿಕ್ರಿಯೆಗಾಗಿ “ಉದಯವಾಣಿ’ ನಿರಂತರವಾಗಿ ಸಂಪರ್ಕಿಸಿದರೂ ಅವರು ಕರೆ ಸ್ವೀಕರಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next