Advertisement

ಬೆಂಗಳೂರು ಹೊಸ ರೈಲಿಗೆ ಇಂದು ಚಾಲನೆ

12:30 AM Feb 21, 2019 | |

ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16585/86) ಹೊಸ ರೈಲ್ವೇ ಸೇವೆಗೆ ಗುರುವಾರದಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಚಾಲನೆ ದೊರೆಯಲಿದೆ. ಫೆ. 22ರಿಂದ ಈ ರೈಲು ತನ್ನ ಸೇವೆ ಆರಂಭಿಸಲಿದೆ.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು ನೂತನ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದು, ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಡಾ| ವೈ. ಭರತ್‌ ಶೆಟ್ಟಿ, ಮೇಯರ್‌ ಭಾಸ್ಕರ್‌ ಕೆ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಬರುವಾಗ 2 ತಾಸು ವಿಳಂಬ 364 ಕಿ.ಮೀ. ಪ್ರಯಾಣಕ್ಕೆ ಪ್ರಸ್ತಾವಿತ ಸಮಯದ ಪ್ರಕಾರ ಬೆಂಗಳೂರಿನಿಂದ ಮಂಗಳೂರಿಗೆ 11.30 ಗಂಟೆ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ 9.30 ಗಂಟೆ ತಗಲಲಿದೆ. ಘಾಟಿ ಪ್ರದೇಶದಲ್ಲಿ ರೈಲ್ವೇ ಸುರಕ್ಷತೆ ಹಿನ್ನೆಲೆ ಹಾಗೂ ಇತರ ರೈಲುಗಳ ಕ್ರಾಸಿಂಗ್‌ ಇರುವ ಕಾರಣದಿಂದ ಬೆಂಗಳೂರಿನಿಂದ ಹೊರಟ ರೈಲು ತಡವಾಗಿ ಮಂಗಳೂರಿಗೆ ತಲುಪುವಂತಾಗುತ್ತದೆ. ಸಂಜೆ 4ರ ಸುಮಾರಿಗೆ ರೈಲು ಹೊರಡುವ ಸಮಯ ಸೇರಿದಂತೆ ಹೊಸ ರೈಲಿನ ವೇಳಾಪಟ್ಟಿಯು ಕರಾವಳಿಗರಿಗೆ ಅನುಕೂಲಕರವಾಗಿಲ್ಲ ಹಾಗೂ ಸಮಯದಲ್ಲಿ ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಕೂಡ ಇದೇ ವೇಳೆ ಕೇಳಿಬಂದಿದೆ.

ಪ್ರಸಕ್ತ ಮಂಗಳೂರು ಸೆಂಟ್ರಲ್‌ನಿಂದ ಪ್ರತೀ ದಿನ ಯಶವಂತಪುರ ಎಕ್ಸ್‌ಪ್ರೆಸ್‌ ರಾತ್ರಿ 8.55ಕ್ಕೆ ಹೊರಟು ಮರುದಿನ ಬೆಳಗ್ಗೆ 7.30ಕ್ಕೆ ಬೆಂಗಳೂರು ತಲುಪುತ್ತದೆ. ಇದು ಮೂರು ದಿನ ಮೈಸೂರು ಹಾಗೂ 4 ದಿನ ಶ್ರವಣಬೆಳಗೋಳ ಮಾರ್ಗವಾಗಿ ಸಂಚರಿಸುತ್ತಿದೆ. ಇನ್ನೊಂದೆಡೆ, ಮಂಗಳೂರು ಜಂಕ್ಷನ್‌ನಿಂದ ಪ್ರತೀ ದಿನ (ರವಿವಾರ ಹೊರತುಪಡಿಸಿ) ಬೆಳಗ್ಗೆ 11.30ಕ್ಕೆ ಹೊರಡುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ರಾತ್ರಿ 8.30ರ ಸುಮಾರಿಗೆ ಬೆಂಗಳೂರು ತಲುಪುತ್ತದೆ. ಇದು ಶ್ರವಣಬೆಳಗೊಳ ಮಾರ್ಗವಾಗಿ ಸಂಚರಿಸುತ್ತಿದೆ.

ವೇಳಾಪಟ್ಟಿ
ನೂತನ ರೈಲು ಸೋಮವಾರ, ಬುಧವಾರ, ಶುಕ್ರವಾರ – ಮಂಗಳೂರಿನಿಂದ ಬೆಂಗಳೂರಿಗೆ, ರವಿವಾರ, ಮಂಗಳವಾರ, ಗುರುವಾರ – ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸಲಿದೆ.

Advertisement

ಬೆಂಗಳೂರಿನಿಂದ ಸಂಜೆ 4.30ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 4ರ ಸುಮಾರಿಗೆ ಮಂಗಳೂರು ತಲುಪಲಿದೆ ಹಾಗೂ ರಾತ್ರಿ 7 ಗಂಟೆಗೆ ಮಂಗಳೂರಿನಿಂದ ಹೊರಡುವ ರೈಲು ಮರುದಿನ ಮುಂಜಾನೆ 4.30ಕ್ಕೆ ಬೆಂಗಳೂರು ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next