ಬೆಂಗಳೂರು: ಬೆಂಗಳೂರು ಕೇವಲ ಭಾರತದ ಸಿಲಿಕಾನ್ ವ್ಯಾಲಿ ಅಲ್ಲ, ವಿಶ್ವದ ಸಿಲಿಕಾನ್ ವ್ಯಾಲಿಯಾಗಿ ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರು ಟೆಕ್ ಸಮ್ಮಿಟ್ ಬೆಳ್ಳಿಹಬ್ಬದ ಅಂಗವಾಗಿ ಕರ್ನಾಟಕ ರಾಜ್ಯದ ಐಟಿ, ಬಿಟಿ ವಲಯಕ್ಕೆ ಮಹತ್ತರ ಕೊಡುಗೆ ನೀಡಿದ ವಿವಿಧ ಕಂಪೆನಿಗಳ ಮುಖ್ಯಸ್ಥರನ್ನು ಅವರು ಸನ್ಮಾನಿಸಿ ಮಾತನಾಡಿದರು.
ಈ ಸಮಿಟ್ ನಲ್ಲಿ ನಿಗದಿತ ಗುರಿಗಳನ್ನು ಸಾಧಿಸುವ ಸಂಕಲ್ಪವನ್ನು ಮಾಡಬೇಕು. ಐಟಿ ಸಾಧನೆಯನ್ನು ಬೆಂಗಳೂರು ಡಿಕ್ಲೇರೇಷನ್ ಅಂತ ಘೊಷಣೆ ಮಾಡಬೇಕು ಎಂದು ತಿಳಿಸಿದರು.
25 ವರ್ಷ ಸಾಧನೆ ಮಹತ್ವದ್ದು: ಬೆಳ್ಳಿ ಹಬ್ಬ ಆಚರಣೆ ಬಹುತೇಕ ಸಿನೆಮಾ ಓಡಿದಾಗ ಆಚರಿಸುತ್ತಾರೆ. ವಿಜ್ಞಾನ ಹಾಗೂ ತಂತ್ರಜ್ಞಾನ ಐಟಿ ಇಪ್ಪತ್ತೈದು ವರ್ಷ ಸಾಧನೆ ಮಹತ್ವದ್ದು, ಐಟಿ ಉದ್ಯಮ ಇಷ್ಟೊಂದು ಬೆಳೆದರೂ ಉದ್ಯಮಿಗಳಲ್ಲಿ ಇನ್ನೂ ಸಾಕಷ್ಟು ಉತ್ಸಾಹ ಇದೆ ಎಂದರು.
Related Articles
ಪರಿಸರದಲ್ಲಿ ಮನುಷ್ಯ ಅತಿ ಹೆಚ್ಚು ವರ್ಷ ಬದುಕುವ ಜೀವಿ. ಮನುಷ್ಯ ಸಹರಾ ಮರಭೂಮಿಯಲ್ಲಿ, ಚಳಿ ಪ್ರದೇಶ ಅರಣ್ಯ ಎಲ್ಲ ಪ್ರದೇಶದಲ್ಲಿಯೂ ಬದುಕುತ್ತಾನೆ. ಮೂಲ ವಿಜ್ಞಾನವನ್ನು ಏಕ ವ್ಯಕ್ತಿಗಳು ಸಂಶೋಧನೆ ಮಾಡುತ್ತಾರೆ. ಐಟಿ ಬಿಟಿಯಲ್ಲಿ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿರುತ್ತದೆ. ಐಟಿ ಉದ್ಯಮದಲ್ಲಿ ಗಣಿತದ ಪಾತ್ರ ಮುಖ್ಯವಾಗಿರುತ್ತದೆ. ಭಾರತೀಯರು ಗಣಿತದಲ್ಲಿ ಪರಿಣಿತರು. ಐಟಿ ಕ್ಷೇತ್ರದಲ್ಲಿ ಚರ್ಚೆ ನಡೆದಷ್ಟು ಉತ್ತಮ ಫಲಿತಾಂಶ ಹೊರ ಬರುತ್ತದೆ. ನಮ್ಮ ಜೀವನದಲ್ಲಿ ನೆಟ್ವರ್ಕಿಂಗ್ ಅತ್ಯಂತ ಮುಖ್ಯ. ಐಟಿಯಲ್ಲಿಯೂ ಅದೇ ಮುಖ್ಯ. ಕೆಲವರು ನಮ್ಮನ್ನು ಅನುಕರಣೆ ಮಾಡಬಹುದು. ಆದರೆ, ನಮ್ಮನ್ನು ಓವರ್ ಟೇಕ್ ಮಾಡಲು ಆಗುವುದಿಲ್ಲ ಎಂದರು.
ಸಾಧನೆಯ ಬಗ್ಗೆ ಹೆಮ್ಮೆ ಇದೆ: ಐಟಿ ಉದ್ಯಮಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವ ಕೆಲಸ ಅತ್ಯಂತ ಮುಖ್ಯವಾದದ್ದು, ರಾಜ್ಯ ಸರ್ಕಾರ ನಿಮ್ಮ ಶ್ರಮವನ್ನು ಗುರುತಿಸಿ ಗೌರವಿಸಿದೆ. ಅನೇಕ ಯುವಕರು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಗುರುತಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಮಗೆ ಹಸಿವಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಹಸಿದವನು ಮಾತ್ರ ಏನಾದರೂ ಮಾಡಲು ಸ್ಪೂರ್ತಿ ಸಿಗುತ್ತದೆ.
ಸಾರ್ಟ್ ಅಪ್ ಗಳ ಉದಯ ಐಟಿ ಕಂಪನಿಗಳಿಗೆ ಸ್ಪರ್ಧಿಗಳಂತೆ ಕಾಣಿಸುತ್ತಿರಬಹುದು. ಆದರೆ, ಸ್ಪರ್ಧಿಗಳು ಇರುವುದು ಒಳ್ಳೆಯದು. ಬೆಂಗಳೂರು, ಬಿ ಅಂದ್ರೆ ಬಿಗ್ ಸ್ಯಾನ್ ಫ್ರಾನ್ಸಿಸ್ಕೊ. ಎಸ್ ಅಂದರೆ ಸ್ಮಾಲ್. ನಮ್ಮ ಸಾಧನೆಯ ಬಗ್ಗೆ ಹೆಮ್ಮೆಯಿದೆ, ಇನ್ನು ಹೆಚ್ಚಿನ ಸಾಧನೆ ಮಾಡುವ ಕನಸು ಕಾಣಬೇಕು ಎಂದರು.
ಸಮಾರಂಭದಲ್ಲಿ ಐಟಿ, ಬಿಟಿ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಐಟಿ ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಕ್ರಿಸ್ ಗೋಪಾಲಕೃಷ್ಣನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.