Advertisement

ಕಾಂಗ್ರೆಸ್‌, ಬಿಜೆಪಿ ಯಿಂದ ಬೆಂಗಳೂರು ಉಳಿಸಬೇಕಿದೆ

01:05 PM Mar 26, 2018 | |

ಬೆಂಗಳೂರು: ರಾಜ್ಯದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರಗಳಿಂದ ಬೆಂಗಳೂರು ಉಳಿಸಬೇಕಿದ್ದು, ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆಯಲ್ಲಿ ಭಾನುವಾರ ಜೆಡಿಎಸ್‌ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ಒಂದೆಡೆ ಕಾಂಗ್ರೆಸ್‌ ಸರ್ಕಾರದಿಂದ ಬೆಂಗಳೂರು ರಕ್ಷಿಸಿ ಎಂದು ಬಿಜೆಪಿಯವರು ಪಾದಯಾತ್ರೆ ಮಾಡುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿಯಿಂದ ಬೆಂಗಳೂರು ಉಳಿಸಿ ಎಂದು ಕಾಂಗ್ರೆಸ್‌ ನವರು ಯಾತ್ರೆ ಕೈಗೊಂಡಿದ್ದಾರೆ. ಆದರೆ, ನಿಜವಾಗಿಯೂ ಈ ಎರಡೂ ಪಕ್ಷಗಳಿಂದ ಬೆಂಗಳೂರನ್ನು ಉಳಿಸುವ ಕೆಲಸ ಆಗಬೇಕಿದ್ದು, ಅದು ಜೆಡಿಎಸ್‌ನಿಂದ ಮಾತ್ರ ಸಾಧ್ಯ ಎಂದರು.

ಹಿಂದೆ ಎಚ್‌.ಡಿ.ದೇವೇಗೌಡರು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದಾಗ ಮತ್ತು ನಾನು 20 ತಿಂಗಳು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಯೋಜನೆ ಜಾರಿಗೆ ತರಲಾಗಿತ್ತು. ಮೂಲ ಸೌಕರ್ಯ ವಿಚಾರದಲ್ಲಿ ಬೆಂಗಳೂರು ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿತ್ತು. ಆದರೆ, ನಂತರ ಬಂದ ಬಿಜೆಪಿ ಮತ್ತು ಕಾಂಗ್ರೆಸ್‌ ಸರ್ಕಾರಗಳು ಬೆಂಗಳೂರನ್ನು ಹಾಳು ಮಾಡಿವೆ. ಅಂಥವರಿಂದ ಬೆಂಗಳೂರು ಉಳಿಸುವ ಕೆಲಸವನ್ನು ಜನಸಾಮಾನ್ಯರು ಮಾಡಬೇಕಾಗಿದೆ ಎಂದರು.

ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ ಮನೆ, ತಾಯಿ-ಮಕ್ಕಳ ಕ್ಷೇಮಕ್ಕಾಗಿ ವಿಶೇಷ ಯೋಜನೆ, ಹಿರಿಯ ನಾಗರಿಕರಿಗೆ ಗೌರವಯುತವಾಗಿ ಬದುಕಲು ಅಗತ್ಯವಿರುವ ಗೌರವಧನ ಮಂಜೂರು ಮಾಡಲಾಗುವುದು.

ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಿ ಎಲ್‌ ಕೆಜಿಯಿಂದಲೇ ಶಿಕ್ಷಣ ಒದಗಿಸುವ ಮೂಲಕ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ಒದಗಿಸಲಾಗುವುದು. ಬಡವರ ಆರೋಗ್ಯ ವೆಚ್ಚವನ್ನು ಪೂರ್ಣ ಪ್ರಮಾಣದಲ್ಲಿ ಸರ್ಕಾರದಿಂದಲೇ ಭರಿಸಲು ಕಾರ್ಯಕ್ರಮ ರೂಪಿಸಲಾಗುವುದು. ಜತೆಗೆ ಯುವಕರಿಗೆ ಉದ್ಯೋಗ ಕಲ್ಪಿಸಲು ಪ್ರತ್ಯೇಕ ಯೋಜನೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

Advertisement

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿ ಕಾರಿದ ಕುಮಾರಸ್ವಾಮಿ, ಸದಾ ಸಿದ್ಧ ಸರ್ಕಾರ ಎನ್ನುವ ಜಾಹೀರಾತುಗಳಿಗೆ ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಇದೆಲ್ಲವೂ ಜನರ ತೆರಿಗೆ ಹಣವಾಗಿದ್ದು, ಯಾವುದೇ ಕೆಲಸ ಮಾಡದ ಸರ್ಕಾರ ಈ ಹಣವನ್ನು ಜಾಹೀರಾತಿಗೆ ಪೋಲು ಮಾಡುತ್ತಿದೆ. ಇದರ ಬದಲು ಹಣವನ್ನು ಸರ್ಕಾರ ಅಭಿವೃದ್ಧಿಗೆ ಬಳಸಿಕೊಂಡಿದ್ದರೆ, ನಗರದಲ್ಲಿ ಸಾವಿರಾರು ಕುಟುಂಬಗಳಿಗೆ ಮನೆ ಅಥವಾ ನಿವೇಶನ ಒದಗಿಸಬಹುದಿತ್ತು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌ .ಡಿ.ದೇವೇಗೌಡ, ಯಶವಂತಪುರ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜವರಾಯೀ ಗೌಡ ಮತ್ತಿತರರು ಇದ್ದರು. 

ಬಲಿಪಶು ರಾಜಕಾರಣ ಅಗತ್ಯವಿಲ್ಲ ಯಾರನ್ನೋ ಬಲಿಪಶು ಮಾಡಿ ರಾಜಕೀಯ ಮಾಡುವ ಅವಶ್ಯಕತೆ ತಮಗಾಗಲೀ, ಜೆಡಿಎಸ್‌
ಪಕ್ಷಕ್ಕಾಗಲೀ ಇಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ.ದೇವೇಗೌಡ ಹೇಳಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆಯಲ್ಲಿ ಭಾನುವಾರ ಜೆಡಿಎಸ್‌ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಬಿ.ಎಂ.ಫಾರೂಕ್‌ ಅವರನ್ನು ನಾವು ಬಲಿಪಶು ಮಾಡಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಯಾರನ್ನೋ ಬಲಿಪಶುಮಾಡಿ
ರಾಜಕಾರಣ ಮಾಡುತ್ತಿದ್ದರೆ ಆರೋಪ ಮಾಡಿದವರು ಈ ಮಟ್ಟಕ್ಕೆ ಬರುತ್ತಿರಲಿಲ್ಲ. ಬಲಿಪಶು ರಾಜಕಾರಣ ನಮಗೆ ಅಗತ್ಯವೂ ಇಲ್ಲ ಎಂದು ಎಚ್‌ಡಿಕೆ ಹೇಳಿದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಯಾರ ಮನೆಯನ್ನೂ ಒಡೆದಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ
ಸಿದ್ದರಾಮಯ್ಯ ವಿರುದ್ಧವೂ ಕಿಡಿ ಕಾರಿದ ದೇವೇಗೌಡರು, ಯಾರೇನೇ ಮಾಡಿದರೂ ಜೆಡಿಎಸ್‌ ಪಕ್ಷವನ್ನು ನಾಶ ಮಾಡಲು ಸಾಧ್ಯವಿಲ್ಲ. ಜೆಡಿಎಸ್‌ ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಗಟ್ಟಿಯಾಗಲಿದ್ದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next