ಬೆಂಗಳೂರು: ಎಲ್ಲವೂ ಅಂದುಕೊಂಡಂರಾದರೆ ಇಷ್ಟರಲ್ಲೇ ಬೆಂಗಳೂರು-ಮೈಸೂರು ನಡುವೆ ದೇಶದ ಮೊದಲ ಎಲೆಕ್ಟ್ರಿಕ್ ಬಸ್ ಸಂಚರಿಸಲಿದೆ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಟಿಸಿ ಯೋಜನೆ ರೂಪಿಸಿದೆ.
ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆಗಳ ಸಚಿವಾಲಯದ ಯೋಜನೆಯಡಿ ಎಲೆಕ್ಟ್ರಿಕ್ ಬಸ್ ಖರೀದಿಗೆ ಒಂದು ಕೋಟಿ ರೂ.ವರೆಗೂ ಸಬ್ಸಿಡಿ ನೀಡುತ್ತಿದೆ. ಆದರೆ, ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಎಲೆಕ್ಟ್ರಿಕ್ ಬಸ್‌ಗಳಿಗಷ್ಟೇ ಸೀಮಿತವಾಗಿರುವ ಸಬ್ಸಿಡಿಯನ್ನು, ಅಂತರ ನಗರಗಳ ಸೇವೆಗೂ ನೀಡುವಂತೆ ಕೆಎಸ್‌ಆರ್‌ಟಿಸಿ ಪ್ರಸ್ತಾವನೆ ಸಲ್ಲಿಸಿದೆ.
ಪ್ರಸ್ತಾವನೆಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿದರೆ ಕೆಲವೇ ತಿಂಗಳಲ್ಲಿ ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್ ಸಂಚರಿಸಲಿದೆ. ಮೈಸೂರಿಗೆ ಮಾತ್ರವಲ್ಲದೆ, ತುಮಕೂರು, ಕೋಲಾರ, ಹಾಸನ ಸೇರಿ ಬೆಂಗಳೂರಿನಿಂದ 200 ಕಿ.ಮೀ ವ್ಯಾಪ್ತಿಯಲ್ಲಿನ ಪ್ರಮುಖ ನಗರಗಳಿಗೂ ಎಲೆಕ್ಟ್ರಿಕ್ ಬಸ್ ಸೇವೆ ಕಲ್ಪಿಸಲು ನಿಗಮ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ 50 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ.
ಅಂತರ ನಗರ ಬಸ್ ಖರೀದಿಗೂ ಬೇಕು ಸಬ್ಸಿಡಿ: “ಎಲೆಕ್ಟ್ರಿಕ್ ಬಸ್‌ಗಳು ಪರಿಸರ ಸ್ನೇಹಿಯಾಗಿದ್ದು, ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚ ಕೂಡ ಕಡಿಮೆ. ಆದರೆ, ಇವುಗಳನ್ನು 200 ಕಿ.ಮೀ. ವ್ಯಾಪ್ತಿಯಲ್ಲಷ್ಟೇ ಓಡಿಸಬೇಕು. ಇನ್ನು ನಿಗಮ ನಗರ ಸಾರಿಗೆ ಸೇವೆ ಒದಗಿಸುತ್ತಿರುವ ನಗರಗಳ ವ್ಯಾಪ್ತಿ ಚಿಕ್ಕದಿರುವ ಕಾರಣ, ಅಂತರ ನಗರ ಸೇವೆಗೆ ಖರೀದಿಸುವ ಎಲೆಕ್ಟ್ರಿಕ್ ಬಸ್‌ಗಳಿಗೆ ಸಬ್ಸಿಡಿ ಸೌಲಭ್ಯ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಒಂದು ಎಲೆಕ್ಟ್ರಿಕ್ ಬಸ್‌ನ ಬೆಲೆ 2.50 ಕೋಟಿ ರೂ. ಇದ್ದು, ಅದರಲ್ಲಿ ಕೇಂದ್ರದಿಂದ ಒಂದು ಕೋಟಿ ರೂ.ವರೆಗೆ ಸಬ್ಸಿಡಿ ರೂಪದಲ್ಲಿ ಸಿಕ್ಕರೆ, ರಾಜ್ಯ ಸರ್ಕಾರದಿಂದ ಶೇ.30ರಿಂದ ಶೇ.40ರಷ್ಟು ಅನುದಾನ ನಿರೀಕ್ಷಿಸಲಾಗಿದೆ,’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ತಿಳಿಸಿದ್ದಾರೆ.
“ನಿಗಮದ ಸಿಬ್ಬಂದಿಗೆ ಎಲೆಕ್ಟ್ರಿಕ್ ಬಸ್‌ಗಳ ನಿರ್ವಹಣೆ ತರಬೇತಿ ನೀಡಲಾಗುವುದು. ಜತೆಗೆ ಪ್ರಮುಖ ಡಿಪೋಗಳಲ್ಲಿ ಬಸ್‌ಗಳ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಿ, ಅಗತ್ಯ ಪ್ರಮಾಣದ ವಿದ್ಯುತ್ ಅನ್ನು ಇಂಧನ ಇಲಾಖೆಯಿಂದ ಸಬ್ಸಿಡಿ ರೂಪದಲ್ಲಿ ಪಡೆಯುವ ಸಂಬಂಧ ಚರ್ಚಿಸಬೇಕಿದೆ,’ ಎಂದೂ ಅವರು ಮಾಹಿತಿ ನೀಡಿದರು.
ಕೇಂದ್ರ ಒಪ್ಪದಿದ್ದರೆ “ಖಾಸಗಿ’ ಒಲವು: ಈ ಮಧ್ಯೆ ಬಿಎಂಟಿಸಿ ಕೂಡ ಎಲೆಕ್ಟ್ರಿಕ್ ಬಸ್‌ಗಳ ಸೇವೆ ಆರಂಭಿಸಲು ಉದ್ದೇಶಿಸಿದೆ. ಆದರೆ, ಬಸ್‌ಗಳ ಬೆಲೆ ದುಬಾರಿ. ನಿಗಮ ನಷ್ಟದಲ್ಲಿರುವಾಗ ಇಷ್ಟೊಂದು ದುಬಾರಿ ಬಸ್‌ಗಳ ಖರೀದಿ ಬೇಡ ಎಂಬ ಅಭಿಪ್ರಾಯ ಅಧಿಕಾರಿಗಳಿಂದ ವ್ಯಕ್ತವಾಗಿದೆ. ಹೀಗಾಗಿ, ಖಾಸಗಿ ಕಂಪನಿಗಳು ಮುಂದೆಬಂದರೆ, ಅವುಗಳ ಮೂಲಕವೇ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ ನಡೆಸುವ ಚಿಂತನೆಯಿದೆ ಎಂದು ಮೂಲಗಳು ತಿಳಿಸಿವೆ.