Advertisement

ಹೈವೇ ಹೆದ್ದಾರಿಯತ್ತ ತಿರುಗಿದ ಟಾರ್ಗೆಟ್‌!

03:45 PM Jul 19, 2023 | Team Udayavani |

ರಾಮನಗರ: ಟಾರ್ಗೆಟ್‌ ಹೆಸರಿನಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರ ಮೇಲೆ ದಂಡ ವಿಧಿಸುತ್ತಿದ್ದ ಪೊಲೀಸ್‌ ಇಲಾಖೆ, ಇದೀಗ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಚಾರ ನಿಯಮ ಪಾಲನೆ ಮಾಡಲು ದಂಡಾಸ್ತ್ರ ಹಿಡಿದು ನಿಂತಿದ್ದು, ನಮ್ಮ ಟಾರ್ಗೆಟ್‌ ಮಿಸ್‌ ಆಯಿತಲ್ಲ ಎಂದು ಸ್ಥಳೀಯ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

Advertisement

ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ದಂಡ ಹಾಕುವಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಬ್ಯುಜಿಯಾಗಿದೆ. ಇನ್ನು ಇಲಾಖೆ ಹಿರಿಯ ಅಧಿಕಾರಿಗಳು ಟಾರ್ಗೆಟ್‌ ನೀಡಿದ್ದಾರೆ ಎಂಬ ಕಾರಣ ನೀಡಿ, ರಸ್ತೆಯಲ್ಲಿ ಸಂಚರಿಸುವ ವಾಹನ ಅಡ್ಡಹಾಕಿ ದಂಡ ವಿಧಿಸುವ ಪ್ರಕ್ರಿಯೆ ನಗರ ಪ್ರದೇಶದಲ್ಲಿ ಕಡಿಮೆಯಾಗಿದ್ದು, ರಾಮನಗರ, ಚನ್ನಪಟ್ಟಣದ ಸ್ಥಳೀಯ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.

ಇದುವರೆಗೆ ಹಳೆ ಬೆಂ-ಮೈ ಹೆದ್ದಾರಿ, ರಾಮನಗರ ಮತ್ತು ಚನ್ನಪಟ್ಟಣ ನಗರ ಪ್ರದೇಶದ ಪ್ರಮುಖ ವೃತ್ತಗಳಲ್ಲಿ ನಿಂತು ಪೊಲೀಸರು ವಾಹನ ಸವಾರರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿ ಯಾವುದಾದರೂ ಒಂದು ಕಾರಣ ಹುಡುಕಿ ದಂಡ ವಿಧಿಸುತ್ತಿದ್ದರು. ಇದನ್ನು ಪ್ರಶ್ನಿಸಿದರೆ ನಮಗೆ ಟಾರ್ಗೆಟ್‌ನೀಡಿದ್ದಾರೆ. ಮೇಲಧಿಕಾರಿಗಳ ಮಾತನ್ನು ನಾವು ಕೇಳಲೇ ಬೇಕು ಎಂದು ಪೊಲೀಸ್‌ ಸಿಬ್ಬಂದಿ ಪ್ರತಿಕ್ರಿಯಿಸುತ್ತಿದ್ದರು.

ದಂಡಾಸ್ತ್ರ ಪ್ರಯೋಗ: ಎಕ್ಸ್‌ಪ್ರೆಸ್‌ ಹೈವೇನಲ್ಲಿ ಅಪಘಾತ ಗಳ ಸಂಖ್ಯೆ ತೀವ್ರವಾಗಿರುವ ಹಿನ್ನೆಲೆ ಎಚ್ಚೆತ್ತ ಪೊಲೀಸ್‌ ಇಲಾಖೆ, ಹೆದ್ದಾರಿಯಲ್ಲಿ ನಿಂತು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರ ವಿರುದ್ಧ ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ. ಹೈವೇ ಮೇಲೆ ಪೊಲೀ ಸರು ಗಮನಹರಿಸಿರುವುದು ಸ್ಥಳೀಯ ಪ್ರಯಾಣಿಕರ ಮೇಲಿನ ದಂಡದ ಟಾರ್ಗೆಟ್‌ ಮಿಸ್‌ ಆಗಿದೆ.

ಭರಪೂರಾ ಟಾರ್ಗೆಟ್‌: ರಸ್ತೆ ಸುರಕ್ಷತೆ ನೆಪದಲ್ಲಿ ಪೊಲೀಸ್‌ ಇಲಾಖೆ ಪ್ರತಿ ಪೊಲೀಸ್‌ ಠಾಣೆಯೂ ಭಾರತೀಯ ಮೋಟರ್‌ ವಾಹನ ಕಾಯಿದೆಯಡಿ ಪ್ರತಿ ತಿಂಗಳು ಇಂತಿಷ್ಟು ಪ್ರಕರಣ ದಾಖಲಿಸಬೇಕು ಎಂದು ಟಾರ್ಗೆಟ್‌ ನೀಡಿರುವುದು ಗುಟ್ಟಾಗಿರುವ ವಿಷಯವಲ್ಲ. ಈ ಬಗ್ಗೆ ಇಲಾಖಾ ಮಟ್ಟದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುತ್ತದೆ ಆದರೂ ಸಾರ್ವಜನಿಕವಾಗಿ ಯಾವುದೇ ದಾಖಲೆ ಬಹಿರಂಗಗೊಳ್ಳುವುದಿಲ್ಲ. ಆದರೆ, ಆಫ್‌ ದಿ ರೆಕಾರ್ಡ್‌ನಲ್ಲಿ ಎಲ್ಲಾ ಪೊಲೀಸ್‌ ಅಧಿಕಾರಿಗಳು ಇದನ್ನು ಖಚಿತ ಪಡಿಸುತ್ತಾರೆ. ಇತ್ತೀಚಿಗೆ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೇ ಪೊಲೀಸರು ಟಾರ್ಗೆಟ್‌ ರೀಚ್‌ ಮಾಡಲು ದಂಡ ಹಾಕುತ್ತೀರಾ ಎಂದು ಬಹಿರಂಗವಾಗಿ ಹೇಳಿದ್ದರು.

Advertisement

ಪೊಲೀಸ್‌ ಇಲಾಖೆ ಮೂಲಗಳ ಪ್ರಕಾರ ಪ್ರತಿ ಪೊಲೀಸ್‌ ಠಾಣೆ ಪ್ರತಿದಿನ ಕನಿಷ್ಠ 10, ವಾರಕ್ಕೆ ನೂರು ಐಎಂವಿ ಪ್ರಕರಣ ದಾಖಲಿಸಬೇಕು. ಇದಕ್ಕಾಗಿ ಇಡೀ ಪೊಲೀಸ್‌ ಇಲಾಖೆ ರಸ್ತೆಗೆ ಇಳಿಯುತ್ತಿದೆ. ಆದರೆ, ಇದೀಗ ಹೈವೇನಲ್ಲಿ ಇಡೀ ಪೊಲೀಸ್‌ ತಂಡ ನಿಂತಿದ್ದು, ಎಕ್ಸ್‌ಪ್ರೆಸ್‌ ವೇನಲ್ಲಿ ಹೆಚ್ಚಿನ ದಂಡ ವಸೂಲಿಯಾಗುತ್ತಿದೆ. ಐಎಂವಿ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದ್ದು ಇಲಾಖೆ ನೀಡಿರುವ ಟಾರ್ಗೆಟ್‌ ತಲುಪುತ್ತಿರುವ ಹಿನ್ನೆಲೆ ಪೊಲೀಸರು ಸ್ಥಳೀಯವಾಗಿ ಪ್ರಕರಣ ದಾಖಲಿಸುವುದನ್ನು ಕಡಿಮೆ ಮಾಡಿದ್ದಾರೆ. ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಪೊಲೀಸರು ದಂಡದ ರಶೀದಿ ಪುಸ್ತಕ ಹಿಡಿದು ನಿಲ್ಲುತ್ತಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ.

11 ದಿನ, 2261 ಕೇಸ್‌, 16.50 ಲಕ್ಷ ರೂ. ದಂಡ: ರಾಮನಗರ ಜಿಲ್ಲೆಯ ಚನ್ನಪಟ್ಟಣ ಸಂಚಾರ, ರಾಮನಗರ ಸಂಚಾರ, ಬಿಡದಿ ಮತ್ತು ಕುಂಬಳ ಗೋಡು ಪೊಲೀಸ್‌ ಠಾಣೆ ಅಧಿಕಾರಿಗಳು ಬೆಂ-ಮೈ ಹೆದ್ದಾರಿಯಲ್ಲಿ ದಂಡ ವಿಧಿಸುತ್ತಿದ್ದಾರೆ. ಕಳೆದ 11 ದಿನಗಳಿಂದ 2261 ಪ್ರಕರಣ ದಾಖ ಲಾಗಿದ್ದು ಇದುವರೆಗೆ 16.50ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಸ್ಥಳೀಯ ಪ್ರಯಾಣಿಕರಿಂದ 2-3 ತಿಂಗಳಾದರೂ ಈ ಮೊತ್ತ ಸಂಗ್ರಹಿಸಲು ಹೆಣಗಾಡುತ್ತಿದ್ದ ಪೊಲೀಸರು ಇದೀಗ 10 ದಿನಗಳಲ್ಲಿ ಭರಪೂರ ಪ್ರಕರಣ ದಾಖಲಿಸಿ ದಂಡ ಸಂಗ್ರಹಿಸಿದ್ದಾರೆ. ಹೆದ್ದಾರಿಯತ್ತ ಪೊಲೀಸರು ಗಮನ ಕೇಂದ್ರೀಕರಿಸಿರುವ ಹಿನ್ನೆಲೆ ಸ್ಥಳೀಯ ಪ್ರಯಾಣಿಕರು ಪೊಲೀಸರು ಸಮಸ್ಯೆ ತಪ್ಪಿತು ಎಂದು ನೆಮ್ಮದಿಯಾಗಿ ತಿರುಗಾಡುತ್ತಿದ್ದಾರೆ.

ಚನ್ನಪಟ್ಟಣ ನಗರದಲ್ಲಿ 4-5 ಕಡೆ ಪೊಲೀಸರು ದಂಡ ಹಾಕುತ್ತಿದ್ದರು. ಇದೀಗ ಎಲ್ಲರ ಗಮನ ಹೆದ್ದಾರಿಯತ್ತ ಹರಿದಿದೆ. ಹೀಗಾಗಿ ನಾವು ನೆಮ್ಮದಿಯಾಗಿ ತಿರುಗಾಡುವಂತಾಗಿದೆ. ಸ್ಥಳೀಯ ಪ್ರಯಾಣಿಕರು ಪೊಲೀಸರ ದಂಡದಿಂದ ಪಾರಾಗುವಂತಾಗಿದೆ. ●ಯೋಗೀಶ್‌ ರಾಂಪುರ, ಸಾರ್ವಜನಿಕ

●ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next