ಬೆಂಗಳೂರು: ರಾಜಧಾನಿಯ ಐತಿಹಾಸಿಕ ಕರಗಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯೂ ಸತತ ಏಳನೇ ಬಾರಿಗೆ ಜ್ಞಾನೇಂದ್ರ ಕರಗ ಹೊರಲಿದ್ದಾರೆ. ಕರಗ ಮಹೋತ್ಸವದ ಪ್ರಕ್ರಿಯೆ ಹಾಗೂ ಪೂಜಾ ವಿಧಿ-ವಿಧಾನಗಳಿಗೆ ಸೋಮವಾರವೇ ಚಾಲನೆ ದೊರೆತಿದ್ದು, ಬುಧವಾರ ಶಕ್ತಿಪೀಠದ ಪೂಜೆ ನೆರವೇರಿತು.
ಕರಗ ಮಹೋತ್ಸವ ಅಂಗವಾಗಿ ತಿಗಳರಪೇಟೆಯಲ್ಲಿರುವ ಶ್ರೀಧರ್ಮರಾಯ ಸ್ವಾಮೀ ದೇವಾಲಯದ ಸುತ್ತ ಮುತ್ತಲ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ರಾತ್ರಿ ವೇಳೆ ದೇವಾಲಯ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ಏಪ್ರಿಲ್ 8 ರಂದು ಹಸಿ ಕರಗ ನಡೆಯಲಿದ್ದು ನಂತರ ಏಪ್ರಿಲ್ 11ರಂದು ಹೂವಿನ ಕರಗ ನೆರವೇರಲಿದೆ.
ಏಪ್ರಿಲ್ 3ರಿಂದ ಆರಂಭವಾಗಿರುವ ಕರಗ ಮಹೋತ್ಸವದ ಪೂರ್ವಭಾವಿ ಧಾರ್ಮಿಕ ವಿಧಿ-ವಿಧಾನಗಳು ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಭರದಿಂದ ಸಾಗಿವೆ. ಕಳೆದ ಮೂರುದಿನಗಳಿಂದ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತಿದ್ದು ನಿತ್ಯ ಮುಂಜಾನೆ ದೇವರಿಗೆ, ಹಾಲು, ತುಪ್ಪ ಅಭಿಷೇಕ , ವಿಶೇಷ ಅಲಂಕಾರ ನಡೆಯುತ್ತಿದೆ. ಈ ಬಾರಿಯೂ ಹೂವಿನ ಕರಗವನ್ನು ಪೂಜಾರಿ ಎ.ಜ್ಞಾನೇಂದ್ರ ಹೊರಲಿದ್ದಾರೆ.
ಇದುವರೆಗೆ ಆರು ಬಾರಿ ಕರಗ ಹೊತ್ತ ಅನುಭವ ಇರುವ ಜ್ಞಾನೇಂದ್ರ ಈ ಬಾರಿ 7ನೇ ಬಾರಿಗೆ ಕರಗ ಹೊರಲಿದ್ದಾರೆ. ಏಪ್ರಿಲ್ 11ರಂದು ನಡೆಯಲಿರುವ ಹೂವಿನ ಕರಗ ಪದ್ಧತಿ ಮುಗಿಸುವ ತನಕ, ಪೂಜಾರಿ ಜ್ಞಾನೇಂದ್ರ 9 ದಿನಗಳ ಕಾಲ ವ್ರತ ನಿಷ್ಠೆ ಪಾಲಿಸಲಿದ್ದಾರೆ. ಅಷ್ಟೂ ದಿನ ದೇವಾಲಯದಲ್ಲಿಯೇ ಉಳಿದುಕೊಂಡು, ಧಾರ್ಮಿಕ ವಿಧಾನಗಳನ್ನು ಪೂರೈಸಲಿದ್ದಾರೆ.
ಉತ್ಸವದಲ್ಲಿ ಇಂದು ಏನು?
ಗುರುವಾರ ಮಧ್ಯಾಹ್ನ 12-30ಕ್ಕೆ ಲಾಲ್‌ಭಾಗ್‌ನ ಮುನೇಶ್ವರ ದೇವಾಲಯ ಸೇರಿದಂತೆ ನಗರದ ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ ಇದೆ.