ಬೆಂಗಳೂರು: ಜಗತ್ತಿನ ಉದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಸಿಲಿಕಾನ್ ಸಿಟಿ ಬೆಂಗಳೂರು ಅತ್ಯಂತ ಪ್ರಶಸ್ತ ಮತ್ತು ಸುರಕ್ಷಿತ ತಾಣ ಆಗಿರಬಹುದು. ಆದರೆ, ಇತ್ತಿಚಿನ ದಿನಗಳಲ್ಲಿ ನಡೆದ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ಪ್ರಕರಣವನ್ನು ಗಮನಿಸಿದರೆ ಮಕ್ಕಳು ಹಾಗೂ ಮಹಿಳೆಯರ ವಿಚಾರದಲ್ಲಿ ಈ ನಗರ ಸುರಕ್ಷಿತವೆಂದು ಹೇಳಲಿಕ್ಕಾಗದು ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅಭಿಪ್ರಾಯಪಟ್ಟಿದ್ದಾರೆ.
ರೋಟರಿ ಕ್ಲಬ್ ಬೆಂಗಳೂರು ಇದರ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಸುಧಾರಣಾ ಚಳವಳಿಯ ಸುದೀರ್ಘ ಇತಿಹಾಸವಿರುವ ನೆಲವಿದು ಎಂದು ಹೇಳುತ್ತಲೇ ಇಲ್ಲಿನ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದರು.
ಸಿಲಿಕಾನ್ ವ್ಯಾಲಿ ಎಂದು ಬೆಂಗಳೂರು ಖ್ಯಾತಿ ಪಡೆದಿದೆ. ತಂತ್ರಜ್ಞಾನದ ಬಳಕೆ ಮತ್ತು ಉದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಈ ನಗರ ಜಗತ್ತಿನ ಕೈಗಾರಿಕೋದ್ಯಮಿಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಅತ್ಯಂತ ಸುರಕ್ಷಿತ ತಾಣವಾಗಿದೆ. ಇದರ ಜತೆಗೆ ಸಾಮಾಜಿಕ ಪರಿವರ್ತನೆಯ ಸುದೀರ್ಘ ಚಳವಳಿಯ ಇತಿಹಾಸ ಇರುವ ಈ ನೆಲದಲ್ಲಿ ಕಳೆದ ಮೂರು ತಿಂಗಳ ಹಿಂದೆ ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಯಿತು.
ಆರೋಪಿ ನೆರೆ ಮನೆಯ ಪರಿಚಿತ ನಿವಾಸಿಯಾಗಿದ್ದ. ಹಾಗಾಗಿ ಮನೆಗಳಲ್ಲೇ ಮಕ್ಕಳು ಸುರಕ್ಷಿತವಾಗಿಲ್ಲ. ಅದೇ ರೀತಿ ಎರಡು ವರ್ಷಗಳ ಹಿಂದೆ ಹೊಸ ವರ್ಷದ ಸಂಭ್ರಮದ ಬಳಿಕ ಮನೆಗೆ ಮರಳುತ್ತಿದ್ದ ಯುವತಿಯರ ಮೇಲೆ ಲೈಂಗಿಕ ಶೋಷಣೆ ನಡೆದಿರುವುದನ್ನು ನಾವು ನೋಡಿದ್ದೇವೆ ಎಂದರು.
ದೇಶದಲ್ಲಿ ಒಂದು ಮಗು ಅಪಾಯದಲ್ಲಿದ್ದರೂ ಇಡೀ ಭಾರತಾಂಬೆ ಅಪಾಯದಲ್ಲಿದೆ ಎಂದರ್ಥ. ಇಂದು ಸ್ವತ್ಛ ಭಾರತದ ಘೋಷಣೆ ವ್ಯಾಪಕವಾಗಿದೆ. ನಮ್ಮ ಶೌಚಾಲಯ, ಮನೆ ಅಂಗಳ, ಬೀದಿ ಸ್ವತ್ಛ ಮಾಡುತ್ತಿದ್ದೇವೆ. ಕೆಲವರು ಕಾಳಜಿಯಿಂದ ಮಾಡುತ್ತಿದ್ದರೆ, ಹಲವರು ಫೋಟೋ ತೆಗೆಸಿಕೊಳ್ಳಲು ಈ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ನಮ್ಮ ಮನ-ಮಸ್ತಿಷ್ಕಗಳಲ್ಲಿರುವ ಕೊಳಕನ್ನು ತೆಗೆಯದೇ ಕಣ್ಣಿಗೆ ಕಾಣುವ ಕಸಗೂಡಿಸಿದರೆ ಯಾವುದೇ ಪ್ರಯೋಜನವಿಲ್ಲ.
ಬಾಹ್ಯ ಸ್ವತ್ಛ ಭಾರತದ ಜೊತೆಗೆ ಆಂತರಿಕ ಸ್ವತ್ಛ ಭಾರತ ಸಹ ನಡೆಯಬೇಕಿದೆ. ಸ್ವತ್ಛ ಮನಸ್ಸಿನ ಭಾರತವಾದರೆ ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಹಕ್ಕುಗಳ ವಂಚನೆಗೆ ಕಡಿವಾಣ ಬೀಳುತ್ತದೆ. ಸ್ವತ್ಛ ಭಾರತದ ಜೊತೆಗೆ ಸುರಕ್ಷ ಭಾರತ ನಿರ್ಮಾಣಕ್ಕಾಗಿ ನಾವು ಪಣ ತೊಡಬೇಕಾಗಿದೆ.
ಸುರಕ್ಷಿತ ಭಾರತಕ್ಕಾಗಿ ನಾವು ಆಂದೋಲನ ನಡೆಸುತ್ತಿದ್ದೇವೆ. ಅನೇಕ ಹಂತಗಳ ಯಶಸ್ಸನ್ನೂ ಕಂಡಿದ್ದೇವೆ. ದೇಶದಲ್ಲಿ ಅನೇಕ ಹೊಸ ಕಾನೂನುಗಳ ರಚನೆ ಆಗಿವೆ. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ವಿಚಾರಗಳು ಅಭಿವೃದ್ಧಿ ಹಾಗೂ ಮಾನವ ಹಕ್ಕುಗಳ ಏಜೆಂಡಾದ ಭಾಗವಾಗಿವೆ. ಅದಾಗ್ಯೂ ಸಮಾಜದಲ್ಲಿ ನೈತಿಕ ಪಿಡುಗಾಗಿ ಕಾಡುತ್ತಿರುವ ಮಾನಸಿಕತೆ ಹಾಗೂ ಮನೋಭಾವನೆಗಳ ವಿರುದ್ಧ ಹೋರಾಟ ನಡೆಸಬೇಕಿದೆ.
ಭಯ, ತಾರತಮ್ಯ ಹಾಗೂ ಹತಾಶೆ ನಮ್ಮ ಬಹುದೊಡ್ಡ ಶತ್ರುಗಳಾಗಿದ್ದು ಇವುಗಳನ್ನು ಮೆಟ್ಟಿ ನಿಂತಾಗ ಮಕ್ಕಳ ಮೇಲಿನ ಶೋಷಣೆ ತಡೆಗಟ್ಟಬಹುದು ಎಂದು ಸತ್ಯಾರ್ಥಿ ಹೇಳಿದರು. ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ಆಶಾ ಪ್ರಸನ್ನಕುಮಾರ್, ಕೈಲಾಶ್ ಸತ್ಯಾರ್ಥಿ ಅವರ ಪತ್ನಿ ಸುಮೇಧಾ, ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಡಾ. ಆರ್. ಬಾಲಸುಬ್ರಮಣ್ಯಂ, ಚಿತ್ರನಟ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.