ಬೆಂ.ಗ್ರಾಮಂತರ: ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಬೆಳಗ್ಗೆ ಸುಮಾರು 8:15 ಗೆ ಕಾಲೇಜಿನ ಬಳಿ ಬರುತ್ತಿದ್ದಂತೆ ಅಲ್ಲಿ ಕಟ್ಟಿದ್ದ ಬ್ಯಾನರ್ ಕಿತ್ತು ಹಾಕಿದ ದೃಶ್ಯ ಕಂಡು ಬಂದಿತು. ನಂತರ ಹೂವಿನ ಕುಂಡಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದವು. ಕಾಲೇಜಿನ ಬಳಿ ಹೋದಾಗ ಅನೇಕ ವಸ್ತುಗಳು ಹಾನಿಯಾಗಿದ್ದು ಗಮನಕ್ಕೆ ಬಂದು ಕಾಲೇಜಿನ ಆವರಣದ ಪರಿಸ್ಥಿತಿ ನೋಡಿ ಒಂದು ರೀತಿಯ ಗಾಬರಿಯಾಯಿತು ಎಂದು ವಿಜಯಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಲ್. ಎನ್. ಶಶಿಕುಮಾರ್ ತಿಳಿಸಿದರು.
ವಿಜಯಪುರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಡರಾತ್ರಿ ನಡೆದ ಘಟನೆ ಬಗ್ಗೆ ಪೊಲೀಸರ ಬಳಿ ವಿವರ ಹೇಳುವ ಸಂದರ್ಭದಲ್ಲಿ ಮಾತನಾಡಿ, ನಿನ್ನೆ ಬುಧವಾರ ರಾತ್ರಿ ಕಿಡಿಗೇಡಿಗಳು ಕಾಲೇಜಿನ ಆವರಣದ ಮುಂದೆ ಇದ್ದ ಎರಡು ಸಿಸಿ ಕ್ಯಾಮೆರಾ ಗಳನ್ನು ಒಡೆದಿದ್ದಾರೆ. ನೋಟಿಸ್ ಬೋರ್ಡ್ ಗಾಜನ್ನು ಒಡೆದಿದ್ದಾರೆ. ಗೇಟ್ ಬಳಿ ಇದ್ದ ಹೂವಿನ ಕುಂಡಗಳನ್ನು ಛಿದ್ರಗೊಳಿಸಿದ್ದಾರೆ. ನೀರಿನ ಸಿಮೆಂಟ್ ತೊಟ್ಟಿ ಒಡೆದಿದ್ದಾರೆ. ಆವರಣದಲ್ಲಿ ಬೆಳೆಸಿದ್ದ ಗಿಡಗಳನ್ನು ಹಾನಿಗೊಳಿಸಿದ್ದಾರೆ.
ಗೋಡೆಗಳಿಗೆ ಕಲ್ಲಿನಿಂದ ಹೊಡೆದಿದ್ದಾರೆ. ಗುಟ್ಕಾ ಅಗಿದು ಗೋಡೆಗಳಲ್ಲಿ ಉಗುಳಲಾಗಿದೆ. ಕಾಲೇಜು ಆವರಣದ ಕಟ್ಟೆಗೆ ರಕ್ತದ ಕಲೆ ಅಂಟಿದೆ. ತುಳಸಿ ಕಟ್ಟೆಯನ್ನು ಹೊಡೆದು ಹಾಕಿದ್ದಾರೆ. ಈ ದುಷ್ಕೃತ್ಯ ಮಾಡಿದವರು ಯಾರು ಎಂದು ತಿಳಿದು ಬಂದಿಲ್ಲ. ಸಿಸಿ ಕ್ಯಾಮೆರಾ ವೀಕ್ಷಿಸಿದಾಗ ಸಿಸಿ ಕ್ಯಾಮೆರಾಗೆ ಫೋಮ್ ಸ್ಪ್ರೇ ಸಿಂಪಡಿಸಿ ಆದಷ್ಟು ಮಬ್ಬು ಮಾಡಿ ಕೋಲಿನಿಂದ ಕ್ಯಾಮೆರಾ ಒಡೆದಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಈ ಬಗ್ಗೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಸಿಬಿಸಿ ಉಪಾಧ್ಯಕ್ಷರ ಗಮನಕ್ಕೂ ಈ ವಿಚಾರ ತಿಳಿಸಲಾಗಿದೆ. ಕಾಲೇಜಿನಲ್ಲಿ ಅನೇಕ ದಾಖಲೆಗಳು, ಕಡತಗಳು ಇರುವುದರಿಂದ ಕಾಲೇಜಿಗೆ ರಕ್ಷಣೆ ಬೇಕಿದೆ. ಭಯದ ವಾತಾವರಣ ಹೋಗಬೇಕಿದೆ ಎಂದು ತಿಳಿಸಿದರು.
Related Articles
ಮೇ ತಿಂಗಳಲ್ಲೂ ನಡೆದಿತ್ತು ಕಳ್ಳತನ: ಮೇ ತಿಂಗಳಲ್ಲಿಯೂ ಕೆಲವು ಕಿಡಿಗೇಡಿಗಳು ಸಂಪ್ ಮೋಟರ್ ಕಳವು ಮಾಡಿದ್ದರು. ಕಡಿಯುವಕಲ್ಲು ಮುರಿಯಲಾಗಿತ್ತು. ಪೈಪ್ ಲೈನ್ ಗಳನ್ನು ಕಿತ್ತು ಹಾಕಲಾಗಿತ್ತು. ಇದೆಲ್ಲಾ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಕೃತ್ಯ ಮಾಡಿದವರ ಚಹರೆಯು ಕಾಣುತ್ತಿತ್ತು. ಈ ಬಗ್ಗೆ ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕಿಡಿಗೇಡಿಗಳು ಮತ್ತೆ ಇಂತಹ ದುಸ್ಸಾಹಸಕ್ಕೆ ಕೈ ಹಾಕಿ, ಕಾಲೇಜಿಗೆ ಸಂಬಂಧಿಸಿದ ಅನೇಕ ವಸ್ತುಗಳನ್ನು ನಾಶಪಡಿಸಿದ್ದಾರೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಪಿಎಸ್ ಐ ಈರಮ್ಮ, ಸಿಪಿಐ ವೀರೇಂದ್ರ ಪ್ರಸಾದ್ ಭೇಟಿ ನೀಡಿ ಪರಿಶೀಲಿಸಿದರು.