ರಾಮನಗರ: ಬೆಂಗಳೂರು ದಿಂಡಿಗಲ್ ರಾಷ್ಟ್ರೀಯ ಹೆದ್ಧಾರಿ 209 ರಲ್ಲಿ ಅಭಿವೃದ್ಧಿ ಕಾಮಗಾರಿ ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದು, ರಸ್ತೆ ನಿರ್ಮಾಣ ಸಂಸ್ಥೆಯ ಆರ್ಥಿಕ ಸ್ಥಿತಿ ಕಾರಣ ಕಾರಣ ಎಂದು ಹೆದ್ದಾರಿ ಪ್ರಾಧಿಕಾರದ ದಾಖಲೆಗಳು ಸ್ಪಷ್ಟಪಡಿಸಿದೆ ಎಂದು ಆರ್.ಟಿ.ಐ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ತಿಳಿಸಿದ್ದಾರೆ.
ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್ ವರೆಗೆ ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿಗೆ ಕೇಂದ್ರ ಸರ್ಕಾರ ಮತ್ತು ನಿರ್ಮಾಣ ಸಂಸ್ಥೆ (ಸದ್ಬವ್ ಬೆಂಗಳೂರು ಹೈವೆ ಪ್ರೈ.ಲಿ) ಶೇ. 40-60 ಅನುಪಾತ ದಲ್ಲಿ ಬಂಡವಾಳ ಹೂಡಿ ರಸ್ತೆ ನಿರ್ಮಿಸಬೇಕಾಗಿದೆ. ಕೇಂದ್ರ ಸರ್ಕರ ತನ್ನ ಪಾಲಿನ 403 ಕೋಟಿ ರೂ. ಪೈಕಿ 362.76 ಅಂದರೆ ಶೇ. 90 ರಷ್ಟು ಹಣವನ್ನು ನಿರ್ಮಾಣ ಸಂಸ್ಥೆಗೆ ಬಿಡುಗಡೆ ಮಾಡಿದೆ. ಕಳೆದ 4-5 ತಿಂಗಳುಗಳಿಂದ ರಸ್ತೆ ಅಭಿವೃದ್ದಿ ಕಾಮಗಾರಿ ಸ್ಥಗಿತಗೊಂಡಿದ್ದು, ಇದಕ್ಕೆ ಗುತ್ತಿಗೆದಾರ ಸಂಸ್ಥೆಯ ಆರ್ಥಿಕ ಕೊರತೆ ಕಾರಣ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅನುಷ್ಠಾನ ಘಟಕ-ರಾಮನಗರದ ಯೋಜನಾ ನಿರ್ದೆಶಕರು ನೀಡಿರುವ ದಾಖಲೆಗಳು ಸ್ಪಷ್ಟಪಿಡಿಸಿವೆ ಎಂದು ರವಿಕುಮಾರ್ ತಿಳಿಸಿದ್ದಾರೆ.
ಒಟ್ಟು 1,962 ರೂ. ವೆಚ್ಚದ ಈ ಹೆದ್ಧಾರಿ ರಸ್ತೆ ಕಾಮಗಾರಿಗೆ 1,008 ಕೋಟಿ ರೂ. ನಿರ್ಮಾಣಕ್ಕೆ ವೆಚ್ಚವಾಗಲಿದೆ. ಉಳಿದ ಹಣ ಭೂ ಸ್ವಾಧೀನಕ್ಕೆ ಬಳಕೆಯಾಗಿದೆ. 1008 ಕೋಟಿ ರೂ. ಪೈಕಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ.90ರಷ್ಟು ಹಣವನ್ನು ಕೊಟ್ಟಿದೆ. ಆದರೆ ಇಲ್ಲಿಯವರೆಗೆ ಕೇವಲ ಶೇ. 20ರಷ್ಟು ಮಾತ್ರ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಹ ದಾಖಲೆಗಳು ತಿಳಿಸಿವೆ.
ನಿರ್ಮಾಣ ಸಂಸ್ಥೆಯ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದೆ ಎನ್‌ಎಚ್ 209 ರಸ್ತೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹೊಣೆ ಹೊರೆಸಿದ್ದು ಹೇಗೆ, ಶೇ 20ರಷ್ಟು ಕಾಮಗಾರಿಗೆ 362 ಕೋಟಿ ರೂ ವೆಚ್ಚವಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಸದರಿ ಸದ್ಬವ್ ಸಂಸ್ಥೆ ಗುಜರಾತ್ ಮೂಲದ ಸಂಸ್ಥೆಯಾಗಿದೆ. ಎಲ್ಲಾ ನಿರ್ದೇಶಕರು ಗುಜರಾತ್ ನವರೇ ಆಗಿದ್ದು, ಕೇಂದ್ರ ಸಚಿವ ನಿತಿನ್ ಗಡ್ಗರಿ ಅವರ ಕೃಪಾ ಕಟಾಕ್ಷವಿದೆ ಎಂದು ಹೇಳಲಾಗಿದೆ.
ರಸ್ತೆ ನಿರ್ಮಾಣ ಸಂಸ್ಥೆಗೆ ಆರ್ಥಿಕ ಕೊರತೆ ಹೇಗೆ ಎಂಬುದನ್ನು ಅಧಿಕಾರಿಗಳು ತಿಳಿಸಿಲ್ಲ ಎಂದಿದ್ದಾರೆ. ರಸ್ತೆ ನಿರ್ಮಾಣ ಸಂಬಂಧ ರಸ್ತೆ ಅಗೆದು ಹಾಕಲಾಗಿದೆ. ಇದು ವಾಹನ ಸವಾರರಿಗೆ ಅತೀವ ತೊಂದರೆಯಾಗಿದೆ. ರಾಜ್ಯ ಸರ್ಕಾರ ಕೂಡಲೆ ಈ ವಿಚಾರದತ್ತ ಗಮನ ಹರಿಸಬೇಕು ಎಂದು ಅವರ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.