Advertisement

ಬುದ್ಧಿ ಹೇಳಿದ್ದಕ್ಕೆ ಚೂರಿಯಿಂದ ಇರಿದು ಕೊಲೆ: ಆರೋಪಿ ಸೆರೆ

10:11 AM Jan 16, 2023 | Team Udayavani |

ಬೆಂಗಳೂರು: ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿ ಹೇಳಿದ್ದಕ್ಕೆ ಟಿಟಿ ಚಾಲಕನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಸೋಲದೇವನಹಳ್ಳಿಯ ಟಿಟಿ ಚಾಲಕ ಕೇಶವಮೂರ್ತಿ (32) ಕೊಲೆಯಾದವ. ಭರತ್‌ ಬಂಧಿತ ಆರೋಪಿ.

ಟಿಟಿ ಚಾಲಕ ಕೇಶವಮೂರ್ತಿ ಹಾಗೂ ಗಾರ್ಮೆಂಟ್ಸ್‌ ಉದ್ಯೋಗಿ ಭರತ್‌ ಸಂಬಂಧಿಕರಾ ಗಿದ್ದರು. ಇತ್ತೀಚೆಗೆ ಭರತ್‌ ಪತ್ನಿ ಕೇಶವಮೂರ್ತಿ ಜತೆ “ನನ್ನ ಪತಿ ಭರತ್‌ ಸರಿಯಾಗಿ ಮನೆಗೆ ಬರುತ್ತಿಲ್ಲ. ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ನೀವು ಸ್ವಲ್ಪ ಬುದ್ಧಿವಾದ ಹೇಳಿ’ ಎಂದು ಹೇಳಿಕೊಂಡಿದ್ದಳು. ಕೇಶವಮೂರ್ತಿ ಭರತನ ಪತ್ನಿಯನ್ನು ಸಮಾಧಾನ ಮಾಡಿ ನಾನು ನಿನ್ನ ಪತಿಗೆ ಬುದ್ಧಿ ಹೇಳುತ್ತೇನೆ ಎಂದು ಹೇಳಿ ಕಳುಹಿಸಿದ್ದರು. ಜ.13ರಂದು ರಾತ್ರಿ ಕೇಶವಮೂರ್ತಿ ಸ್ನೇಹಿತ ಕಲ್ಲೇಶ್‌ ಜತೆಗೆ ರಾಜಗೋಪಾಲನಗರದಲ್ಲಿ ಹೋಗುತ್ತಿದ್ದರು. ಆ ವೇಳೆ ಇವರಿಗೆ ಭರತ್‌ ಸಿಕ್ಕಿದ್ದ. ಪತ್ನಿಯನ್ನು ಚೆನ್ನಾಗಿ ನೋಡಿಕೋ, ಸಮಯಕ್ಕೆ ಸರಿಯಾಗಿ ಮನೆಗೆ ಹೋಗುವಂತೆ ಭರತ್‌ಗೆ ಕೇಶವಮೂರ್ತಿ ಸಲಹೆ ನೀಡಿದ್ದ. ಇದಾದ ಬಳಿಕ ಕೇಶವಮೂರ್ತಿ, ಕಲ್ಲೇಶ್‌ ಹಾಗೂ ಭರತ್‌ ಬೈಕ್‌ನಲ್ಲಿ ಚಿಕ್ಕಬಾಣಾವರದ ಮದ್ಯದಂಗಡಿಗೆ ಹೋಗಿ ಮದ್ಯಪಾನ ಮಾಡಿ ಮನೆಗೆ ಹಿಂತಿರುಗಲು ಮುಂದಾಗಿದ್ದರು. ಕೇಶವಮೂರ್ತಿ ಮತ್ತೆ ಭರತ್‌ಗೆ ಬುದ್ಧಿ ಹೇಳಿದಾಗ ಆಕ್ರೋಶಗೊಂಡ ಭರತ್‌ ತನ್ನ ಜೇಬಿನಲ್ಲಿದ್ದ ಚೂರಿಯಿಂದ ಮಲ್ಲೇಶ್‌ ಹಾಗೂ ಕೇಶವಮೂರ್ತಿಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫ‌ಲಿಸದೇ ಕೇಶವಮೂರ್ತಿ ಜ.14ರಂದು ಮೃತಪಟ್ಟಿದ್ದಾನೆ.

ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಭರತ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಹತ್ತಾರು ಬಾರಿ ಇರಿದು ಪರಾರಿ: ಬುದ್ಧಿ ಹೇಳಿದ್ದಕ್ಕೆ ಕೇಶವಮೂರ್ತಿ ಹಾಗೂ ಕಲ್ಲೇಶ್‌ಗೆ ಆರೋಪಿ ಭರತ್‌ ಏಕಾಏಕಿ ಬೆದರಿಸಿದ್ದ. ನನಗೆ ಬುದ್ಧಿ ಹೇಳುತ್ತೀರಾ?, ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲ ಎಂದು ಜೇಬಿನಿಂದ ಚೂರಿ ತೆಗೆದು ಮೊದಲು ಕಲ್ಲೇಶ್‌ಗೆ ಇರಿದಿದ್ದ. ಈ ವೇಳೆ ಕೇಶವ ಮೂರ್ತಿ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದಾಗ, ಅಟ್ಟಾಡಿಸಿಕೊಂಡು ಹೋಗಿ ರಸ್ತೆಗೆ ಬೀಳಿಸಿ ಆತನ ಎದೆ, ಹೊಟ್ಟೆ ಭಾಗಕ್ಕೆ ಹತ್ತಾರು ಬಾರಿ ಚೂರಿಯಿಂದ ಇರಿದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next