ಬೆಂಗಳೂರು: ರಾಜರಾಜೇಶ್ವರಿ ನಗರ, ಕುಮಾರಸ್ವಾಮಿ ಲೇಔಟ್, ಜ್ಞಾನಭಾರತಿ, ವಿಜಯನಗರ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿರುವ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ. ಆದರೆ ಇದು ಭೂಕಂಪ ಅಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಸ್ಪಷ್ಟಪಡಿಸಿದೆ.
ಇದು ಭೂಕಂಪನ ಅಲ್ಲ ಭಾರೀ ದೊಡ್ಡ ಶಬ್ದ ಕೇಳಿ ಬಂದಿತ್ತು. ಬಹುಶಃ ಎಲ್ಲಿಯೋ ಏನೋ ಸ್ಫೋಟಗೊಂಡಿದೆ ಎಂದು ಕೆಲವು ಸಾರ್ವಜನಿಕರು ಪ್ರತಿಕ್ರಿಯೆ ನೀಡಿದ್ದಾರೆ.
ಭಾರೀ ಸದ್ದು ಕೇಳಿ ಗಾಬರಿಗೊಂಡ ಜನ ಮನೆಯಿಂದ ಹೊರಗೆ ಓಡಿ ಬಂದಿರುವುದಾಗಿ ಸಾರ್ವಜನಿಕರು ಮಾಧ್ಯಮಗಳ ಜೊತೆ ಮಾತನಾಡುತ್ತ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭೂಗರ್ಭ ವಿಜ್ಞಾನಿ ಎಚ್.ಎಸ್.ಎಂ ಪ್ರಕಾಶ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ. ಗಾಳಿಯ ಸ್ಥಾನಪಲ್ಲಟದಿಂದ ಕೇಳಿ ಬಂದಿರುವ ಶಬ್ದ ಇದಾಗಿರಬಹುದು. ನಮಗೆ ಯಾರಿಗೂ ಭೂಮಿ ಕಂಪಿಸಿದ ಅನುಭವ ಆಗಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಭೂಗರ್ಭದ ಒಳಗೆ ಆಗಿರುವ ಕಂಪನ ಇದಲ್ಲ. ಮೋಡಗಳ ಏರುಪೇರಿನಿಂದ ಗಾಳಿ ಸ್ಥಾನಪಲ್ಲಟದ ಸದ್ದು ಇದು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಬೆಂಗಳೂರು ಜನ ಯಾವುದೇ ರೀತಿ ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.