Advertisement

ರಾಜ್ಯ ರಾಜಕೀಯದ ಕೇಂದ್ರ ಬಿಂದು! ಬೆಂಗಳೂರು ಸೆಂಟ್ರಲ್‌ 8 ಕ್ಷೇತ್ರಗಳು

01:20 AM Jan 18, 2023 | Team Udayavani |

ಬೆಂಗಳೂರು ಸೆಂಟ್ರಲ್‌ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು ಎಂಟು ಕ್ಷೇತ್ರಗಳಿವೆ. ಜತೆಗೆ ಇಲ್ಲಿ ಆಯ್ಕೆಯಾದವರು ಘಟಾನುಘಟಿಗಳೂ ಆಗಿರುತ್ತಾರೆ. ವಿಶೇಷವೆಂದರೆ, ಇದರ ವ್ಯಾಪ್ತಿಯಲ್ಲೇ ಶಕ್ತಿಕೇಂದ್ರ ವಿಧಾನಸೌಧವೂ ಇದೆ. ಅಷ್ಟೇ ಅಲ್ಲ, ಎಂ.ಜಿ.ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳೂ ಇವೆ. ಈ ಕ್ಷೇತ್ರಗಳನ್ನೂ ಸದ್ಯ ಕಾಂಗ್ರೆಸ್‌ ಮತ್ತು ಬಿಜೆಪಿ ಮಾತ್ರ ಹಂಚಿಕೊಂಡಿವೆ. ಆದರೆ, ಮುಂದಿನ ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ದೊಡ್ಡ ಮಟ್ಟದ ತಯಾರಿ ನಡೆಸಿವೆ.

Advertisement

ಕ್ಷೇತ್ರ ದರ್ಶನ
ಬೆಂಗಳೂರು: ಶಕ್ತಿಕೇಂದ್ರ ವಿಧಾನಸೌಧ, ರಾಜಭವನ, ರಾಜಧಾನಿ ಬೆಂಗಳೂರಿನ ಹೃದಯ ಭಾಗವಾದ ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌ ಪ್ರದೇಶಗಳನ್ನೊಳಗೊಂಡ “ಬೆಂಗಳೂರು ಸೆಂಟ್ರಲ್‌’ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ವಿಧಾನಸಭೆ ಕ್ಷೇತ್ರಗಳು ಪ್ರತಿಯೊಂದು ಒಂದೊಂದು ರೀತಿಯ ವೈಶಿಷ್ಟತೆ ಹೊಂದಿವೆ.

ಸರ್ವಜನಾಂಗದ ಶಾಂತಿಯ ತೋಟ ಖ್ಯಾತಿಯ ಈ ವ್ಯಾಪ್ತಿಯಲ್ಲಿ  ಚರ್ಚ್‌, ಮಸೀದಿ, ಮಂದಿರ, ರಸೆಲ್‌ ಮಾರ್ಕೆಟ್‌ ಸೇರಿ ಹಲವು  ಐತಿಹಾಸಿಕ ಕಟ್ಟಡಗಳೂ ಇವೆ. ರಾಜಕೀಯವಾಗಿಯೂ ಇಲ್ಲಿನ ವಿಧಾನಸಭೆ ಕ್ಷೇತ್ರಗಳು ಘಟಾನುಘಟಿ ನಾಯಕರನ್ನೂ ಆಯ್ಕೆ ಮಾಡಿವೆ.

ಈ ಬಾರಿಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಜೋರಾಗಿಯೇ ಸಿದ್ಧತೆ ನಡೆಸಿದ್ದು, ದೆಹಲಿ, ಪಂಜಾಬ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಮ್‌ ಆದ್ಮಿ ಪಾರ್ಟಿ ಸಹ ರಂಗಪ್ರವೇಶಕ್ಕೆ ಸಜ್ಜಾಗುತ್ತಿದೆ.

ಸರ್ವಜ್ಞನಗರ ಕ್ಷೇತ್ರ
ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚೆ ಭಾರತಿನಗರವಾಗಿದ್ದ ಈ ಕ್ಷೇತ್ರದ 2008ರಲ್ಲಿ ಸರ್ವಜ್ಞನಗರವಾಯಿತು. ಈ ಕ್ಷೇತ್ರದಲ್ಲಿ ಜಾರ್ಜ್‌ ಫ‌ರ್ನಾಂಡಿಸ್‌ ಸಹೋದರ ಮೈಕೆಲ್‌ ಫ‌ರ್ನಾಂಡಿಸ್‌, ನಿವೃತ್ತ ಮುಖ್ಯ ಕಾರ್ಯದರ್ಶಿ ಅಲೆಗಾÕಂಡರ್‌ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಕ್ಷೇತ್ರ ಪುನರ್‌ ವಿಂಗಡಣೆಯ ನಂತರ 2008, 2013 ಹಾಗೂ 2018ರ ಮೂರು ಚುನಾವಣೆ ನಡೆದಿದ್ದು, ಇದು ನಾಲ್ಕನೇ ಚುನಾವಣೆ. ಕಾಂಗ್ರೆಸ್‌, ಜನತಾದಳ, ಬಿಜೆಪಿ ಮೂರೂ ಪಕ್ಷಗಳಿಗೆ ಕ್ಷೇತ್ರ ಒಲಿದಿದೆ. ಆದರೆ, ಕ್ಷೇತ್ರ ಪುನರ್‌ವಿಂಗಡಣೆ ಅನಂತರ ಕಾಂಗ್ರೆಸ್‌ ಮಾತ್ರ ಗೆದ್ದಿದೆ. ಪ್ರಸ್ತುತ ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌ ಶಾಸಕರಾಗಿದ್ದು, ಮೂರು ಬಾರಿ ಸತತವಾಗಿ ಗೆದ್ದು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ವೀರೇಂದ್ರ ಪಾಟೀಲ್‌, ಬಂಗಾರಪ್ಪ, ಸಿದ್ದರಾಮಯ್ಯ ಸಂಪುಟದಲ್ಲಿ ಕೆಲಸ ಮಾಡಿರುವ ಇವರು ಹಿರಿಯ ಕಾಂಗ್ರೆಸ್‌ ನಾಯಕರೂ ಹೌದು.

Advertisement

ಸರ್‌.ಸಿ.ವಿ. ರಾಮನ್‌ನಗರ
ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚೆ ವರ್ತೂರು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದ ಈ ಕ್ಷೇತ್ರ ಆ ಅನಂತರ ಸರ್‌.ಸಿ.ವಿ. ರಾಮನ್‌ನಗರ ಕ್ಷೇತ್ರವಾಯಿತು. ವರ್ತೂರು ಕ್ಷೇತ್ರದಲ್ಲಿದ್ದಾಗ ಎ.ಕೃಷ್ಣಪ್ಪ, ಅಶ್ವತ್ಥನಾರಾಯಣರೆಡ್ಡಿ ಅವರಂತಹ ನಾಯಕರು ಆಯ್ಕೆಯಾಗಿದ್ದರು. ವರ್ತೂರು ಕ್ಷೇತ್ರವಾಗಿದ್ದಾಗ ಕಾಂಗ್ರೆಸ್‌ ಮತ್ತು ಜನತಾದಳಕ್ಕೆ ಮಾತ್ರ ಒಲಿದ ಈ ಕ್ಷೇತ್ರ ಪುನರ್‌ ವಿಂಗಡಣೆ ಅನಂತರ ಸತತವಾಗಿ ಬಿಜೆಪಿ ಮಾತ್ರ ಗೆದ್ದಿದೆ. ಕ್ಷೇತ್ರ ಪುನರ್‌ ವಿಂಗಡಣೆಯ ನಂತರ 2008, 2013 ಹಾಗೂ 2018ರ ಮೂರು ಚುನಾವಣೆ ನಡೆದಿದ್ದು, ಇದು ನಾಲ್ಕನೇ ಚುನಾವಣೆ. ಟೆಕ್‌ಪಾರ್ಕ್‌ ಸೇರಿ ಐಟಿ-ಬಿಟಿ ಉದ್ಯಮ, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಸೇರಿ ಹಲವು ಪ್ರಮುಖ ಸ್ಥಳಗಳೂ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಸದ್ಯ ಬಿಜೆಪಿಯ ಎಸ್‌.ರಘು ಅವರು ಶಾಸಕರಾಗಿದ್ದಾರೆ.

ಶಿವಾಜಿನಗರ
ರಾಜಧಾನಿ ಬೆಂಗಳೂರಿನ ರಾಜಕೀಯ ಇತಿಹಾಸದಲ್ಲಿ ಶಿವಾಜಿನಗರ ಪ್ರತಿಷ್ಠಿತ ಕ್ಷೇತ್ರವೂ ಹೌದು. ರಘುಪತಿ, ಎ.ಕೆ.ಅನಂತಕೃಷ್ಣ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರೋಷನ್‌ಬೇಗ್‌ರಂತಹ ಘಟಾನುಘಟಿಗಳು ಆಯ್ಕೆಯಾದ ಕ್ಷೇತ್ರವಿದು. ಶಕ್ತಿ ಕೇಂದ್ರ ವಿಧಾನಸೌಧ, ರಸೆಲ್‌ ಮಾರ್ಕೆಟ್‌, ಸೇಂಟ್‌ ಮೇರೀಸ್‌ ಚರ್ಚ್‌, ಕಮರ್ಷಿಯಲ್‌ ಸ್ಟ್ರೀಟ್‌ ಸೇರಿ ಹಲವು ಪ್ರಮುಖ ಸ್ಥಳಗಳು ಇದೇ ಕ್ಷೇತ್ರದಲ್ಲಿವೆ. ಕಾಂಗ್ರೆಸ್‌, ಜನತಾದಳ, ಬಿಜೆಪಿ ಮೂರೂ ಪಕ್ಷಗಳಿಗೆ ಕ್ಷೇತ್ರ ಒಲಿದಿದೆ. ಕ್ಷೇತ್ರ ಪುನರ್‌ ವಿಂಗಡಣೆಯ ನಂತರ 2008, 2013 ಹಾಗೂ 2018ರ ಮೂರು ಚುನಾವಣೆ ನಡೆದಿದ್ದು,  ಈ ಕ್ಷೇತ್ರದಲ್ಲಿ  ಒಂದು  ಉಪ ಚುನಾವಣೆ ನಡೆದಿದ್ದು, ಇದು  ಐದನೇ ಚುನಾ ವಣೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದ ಆರ್‌.ರೋಷನ್‌ ಬೇಗ್‌ ಅನಂತರ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆಯಲ್ಲಿ ಕಾಂಗ್ರೆ ಸ್‌ನ ಅರ್ಷದ್‌ ರಿಜ್ವಾನ್‌ ಗೆಲುವು ಸಾಧಿಸಿದರು.ಇಲ್ಲಿ ರೋಷನ್‌ಬೇಗ್‌ ಉಪ ಚುನಾವಣೆ ಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಆದರೆ ರಾಜ್ಯ ರಾಜಕೀಯದಲ್ಲಿ ಮುಸ್ಲಿಂ ಸಮುದಾಯದ ಮುಂಚೂಣಿಯಲ್ಲಿದ್ದ ರೋಷನ್‌ಬೇಗ್‌ ರಾಜಕೀಯವಾಗಿ ಹಿನ್ನೆಡೆ ಅನುಭವಿಸಿದರು.

ರಾಜಾಜಿನಗರ
ಸುಶಿಕ್ಷಿತ ಮತದಾರರ ಕ್ಷೇತ್ರ ಎಂಬ ಹೆಗ್ಗಳಿಕೆಯ ರಾಜಾಜಿನಗರ ಕ್ಷೇತ್ರ ಪುನರ್‌ವಿಂಗಡಣೆಗೆ ಮುಂಚೆ ಕಾಂಗ್ರೆಸ್‌, ಜನತಾದಳಕ್ಕೆ ಒಲಿದರೆ ಆ ಅನಂತರ ಬಿಜೆಪಿ ಬಿಟ್ಟು ಯಾವ ಪಕ್ಷವೂ ಗೆಲುವು ಸಾಧಿಸಿಲ್ಲ. ಕ್ಷೇತ್ರ ಪುನರ್‌ವಿಂಗಡಣೆ ಅನಂತರ ಗಾಂಧಿನಗರ ಕ್ಷೇತ್ರದ ಕೆಲವು ಪ್ರದೇಶಗಳು ರಾಜಾಜಿನಗರ ಕ್ಷೇತ್ರಕ್ಕೆ ಸೇರಿದವು. ಬಿನ್ನಿಪೇ ಟೆಯ ಕೆಲವು ಪ್ರದೇಶ ಗಾಂಧಿನಗರಕ್ಕೆ ಸೇರಿದವರು. ಹಿರಿಯ ಬಿಜೆಪಿ ಶಾಸಕ ಸುರೇಶ್‌ಕುಮಾರ್‌  ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ 2008, 2013 ಹಾಗೂ 2018ರ ಮೂರು ಚುನಾ ವಣೆ ನಡೆದಿದ್ದು, ಇದು ನಾಲ್ಕನೇ ಚುನಾವಣೆ. ಒಕ್ಕಲಿಗ ಸಮುದಾಯ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದರೂ ಲಿಂಗಾ  ಯಿತ ಸಮುದಾಯವೂ ನಿರ್ಣಾಯಕ. ಆದರೆ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಮೊದಲಿ ನಿಂದಲೂ ಹೆಚ್ಚು ಆದ್ಯತೆ ಎಂಬುದು ಚುನಾವಣೆ ಫ‌ಲಿತಾಂಶದಿಂದ ವ್ಯಕ್ತವಾಗುತ್ತದೆ. ಏಕೆಂದರೆ ಹಿಂದುಳಿದ ವರ್ಗದ ನೆ.ಲ.ನರೇಂದ್ರಬಾಬು ಅವರೂ ಒಮ್ಮೆ  ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.

ಚಾಮರಾಜಪೇಟೆ
ಒಂದು ಕಾಲದಲ್ಲಿ ವಾಟಾಳ್‌ ನಾಗರಾಜ್‌, ಪ್ರಭಾಕರ‌ರೆಡ್ಡಿ ಅವರಂತಹ ಕನ್ನಡಪರ ಹೋರಾಟಗಾರರನ್ನು ಗೆಲ್ಲಿಸಿದ್ದ ಕ್ಷೇತ್ರವಿದು. ಕ್ಷೇತ್ರ ಪುನರ್‌ ವಿಂಗಡಣೆಗೆ ಮುಂದೆ ಕನ್ನಡ ಚಳವಳಿ ಪಕ್ಷ, ಕಾಂಗ್ರೆಸ್‌, ಬಿಜೆಪಿ , ಜನತಾದಳಕ್ಕೆ ಒಲಿದಿತ್ತು. ಪುನರ್‌ ವಿಂಗಡಣೆ ಅನಂತರ ಸತತವಾಗಿ ಕಾಂಗ್ರೆಸ್‌ ಪಾಲಾಗಿದೆ. 2004 ವಿಧಾನಸಭೆ ಚುನಾವಣೆಯಲ್ಲಿ  ಮದ್ದೂರು ಕ್ಷೇತ್ರದಿಂದ  ಸ್ಪರ್ಧೆ ಮಾಡದ ಎಸ್‌. ಎಂ. ಕೃಷ್ಣ ಕಾಂಗ್ರೆಸ್‌ನಿಂದ  ಚಾಮರಾಜ ಪೇಟೆಯಿಂದ ಸ್ಪರ್ಧೆ ಮಾಡಿ 27,695 ಮತ ಪಡೆದರು. ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಮುಖ್ಯಮಂತ್ರಿ ಚಂದ್ರು 14,010 ಮತ ಪಡೆದು ಸೋಲು ಅನುಭವಿಸಿದರು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ನಟ ಅನಂತ್‌ನಾಗ್‌ 3ನೇ ಸ್ಥಾನ ಪಡೆದಿದ್ದರು.

ಆಗ ಕೃಷ್ಣರಿಗೆ ಕ್ಷೇತ್ರ ತ್ಯಾಗ ಮಾಡಿದ ಆರ್‌. ವಿ. ದೇವರಾಜ್‌ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಲಾಯಿತು. ಅನಂತರ ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿ ನೇಮಕಗೊಂಡಿದ್ದರಿಂದ ರಾಜೀನಾಮೆ ನೀಡಿ ತೆರವು ಗೊಂಡಿತ್ತು. ಆಗ ಉಪಚುನಾವಣೆ ನಡೆದು ಜೆಡಿಎಸ್‌ ದರಿದ್ರ ನಾರಾಯಣ ರ್ಯಾಲಿ ಮೂಲಕ ಗಮನ ಸೆಳೆದಿತ್ತು.  ಜಮೀರ್‌ ಅಹ್ಮದ್‌ ಮೊದಲ ಬಾರಿಗೆ ಶಾಸಕರಾದರು. ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ 2008, 2013 ಹಾಗೂ 2018ರ ಮೂರು ಚುನಾವಣೆ ನಡೆದಿದ್ದು,  ರಾಜ್ಯ ರಾಜಕೀಯದಲ್ಲಿ ವಿವಾದ-ಖ್ಯಾತಿ ಎರಡೂ ಹೊಂದಿರುವ ಜಮೀರ್‌ ಅಹಮದ್‌ ಇಲ್ಲಿ ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದಾರೆ.  ಈ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಪ್ರಾಬಲ್ಯ ಹೊಂದಿದೆ. ಆದರೆ ತಮಿಳು ಮತದಾರರ ಸಂಖ್ಯೆಯೂ ಹೆಚ್ಚಾಗಿದೆ.

ಮಹದೇವಪುರ
ಐಟ-ಬಿಟಿ ಹಬ್‌ ಖ್ಯಾತಿಯ ಈ ಕ್ಷೇತ್ರ ಪುನರ್‌ ವಿಂಗಡಣೆಗೆ ಮುಂಚೆ ವರ್ತೂರು ಹಾಗೂ ಹೊಸಕೋಟೆ ಕ್ಷೇತ್ರದ ಭಾಗವಾಗಿತ್ತು. ಬಚ್ಚೇಗೌಡ, ಎ.ಕೃಷ್ಣಪ್ಪ ಅವ ರಂತಹ ನಾಯಕರು ಇಲ್ಲಿ ಗೆಲುವು ಸಾಧಿಸಿದ್ದರು. ಅನಂತರ ಬಿಜೆಪಿಯ ಅರವಿಂದ ಲಿಂಬಾವಳಿ ಇಲ್ಲಿ ಸತತವಾಗಿ ಗೆಲುವು ಸಾಧಿಸುತ್ತಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ 2008, 2013 ಹಾಗೂ 2018ರ ಮೂರು ಚುನಾವಣೆ ನಡೆ ದಿದ್ದು, ಇದು ನಾಲ್ಕನೇ ಚುನಾವಣೆ. ರಾಜಧಾ ನಿಯ ಅತೀ ದೊಡ್ಡ ಕ್ಷೇತ್ರಗಳಲ್ಲಿ ಮಹದೇವಪುರ ಒಂದಾಗಿದ್ದು, ಇಲ್ಲಿ ಅತೀ ಹೆಚ್ಚು ಉತ್ತರ ಭಾರತೀ ಯರು ನೆಲೆಸಿದ್ದಾರೆ.  ಆದರೆ, ಇಲ್ಲಿನ ಫ‌ಲಿತಾಂಶ ನಿರ್ಧಾರ ಮಾಡುವವರು ರೆಡ್ಡಿ ಸಮುದಾಯ ದವರು. ಅವರ ಪ್ರಾಬಲ್ಯ ಹೆಚ್ಚಾಗಿದೆ.

ಶಾಂತಿನಗರ
ಈ ಕ್ಷೇತ್ರವು ಇನ್‌ಫ‌ಂಟ್‌ ಜೀಸಸ್‌ ಚರ್ಚ್‌ ಸೇರಿ ಹಲವು ಪ್ರಮುಖ ಸ್ಮಾರಕಗಳನ್ನು ಒಳಗೊಂಡಿದೆ. ಇಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ಅನಂತರ ಸತತವಾಗಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಅದಕ್ಕೂ ಮುನ್ನ ಬಿಜೆಪಿಯ ರಘು ಈ ಕ್ಷೇತ್ರದಲ್ಲಿ ಒಮ್ಮೆ ಶಾಸಕರಾಗಿದ್ದರು. ಪ್ರಸ್ತುತ ಕಾಂಗ್ರೆಸ್‌ನ ಎನ್‌.ಎ. ಹ್ಯಾರೀಸ್‌ ಶಾಸಕರಾಗಿದ್ದು, ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಇದು ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ 2008, 2013 ಹಾಗೂ 2018ರ ಮೂರು ಚುನಾವಣೆ ನಡೆದಿದ್ದು, ಇದು ನಾಲ್ಕನೇ ಚುನಾವಣೆ. ಮುಸ್ಲಿಂ ಹಾಗೂ ತಮಿಳು, ಕ್ರಿಶ್ಚಿಯನ್‌ ಮತದಾರರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಶ್ರಮಿಕ ವರ್ಗ ಹೆಚ್ಚಾಗಿ ವಾಸಿಸುತ್ತಿದೆ. ಮಹಾತ್ಮಗಾಂಧಿ ರಸ್ತೆ , ಬ್ರಿಗೇಡ್‌ ರಸ್ತೆ, ಜಾನ್ಸ್‌ಸನ್‌ ಮಾರ್ಕೆಟ್‌ ಸೇರಿ ಹಲವು ಪ್ರಮುಖ ಸ್ಥಳಗಳು ಇದೇ ಕ್ಷೇತ್ರದಲ್ಲಿದೆ.

ಗಾಂಧಿನಗರ
ಮೆಜೆಸ್ಟಿಕ್‌ ಬಸ್‌ ನಿಲ್ದಾಣ, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಸಹಿತ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಈ ಕ್ಷೇತ್ರವೂ ಘಟಾನುಘಟಿಗಳ ಕ್ಷೇತ್ರ. ಕಾಂಗ್ರೆಸ್‌ಗೆ ಕ್ಷೇತ್ರ ಹೆಚ್ಚು ಒಲಿದಿದೆ. ಡಿಎಂಕೆ ಪಕ್ಷದವರೂ ಶಾಸಕರಾಗಿದ್ದಾರೆ.

ಪ್ರಸ್ತುತ ದಿನೇಶ್‌ ಗುಂಡೂರಾವ್‌ ಶಾಸಕರಾಗಿದ್ದು ಕ್ಷೇತ್ರ ಪುನರ್‌ವಿಂಗಡಣೆ ಅನಂತರ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ. ಅದಕ್ಕೆ ಮುಂಚೆಯೂ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. ಕ್ಷೇತ್ರ ಪುನರ್‌ ವಿಂಗಡಣೆಯ ಅನಂತರ 2008, 2013 ಹಾಗೂ 2018ರ ಮೂರು ಚುನಾವಣೆ ನಡೆದಿದ್ದು, ಇದು ನಾಲ್ಕನೇ ಚುನಾವಣೆ.  ಈ ಕ್ಷೇತ್ರದಲ್ಲಿ ರಾಜಸ್ಥಾನ್‌ ಹಾಗೂ ಗುಜರಾತ್‌ ರಾಜ್ಯದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಂದು ರೀತಿಯಲ್ಲಿ ವಾಣಿಜ್ಯ ಕೇಂದ್ರವೂ ಹೌದು. ಇಲ್ಲಿ ಎಲ್ಲ ವರ್ಗದ ಮತದಾರರನ್ನೂ ಕಾಣಬಹುದು.

-ಎಸ್‌.ಲಕ್ಷ್ಮೀ ನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next