Advertisement

ಬೆಂಗಳೂರಿನಲ್ಲಿ ಕ‌ಠಿಣ ನಿರ್ಬಂಧಕ್ಕೆ ಚಿಂತನೆ; ನಿತ್ಯವೂ 30 ಸಾವಿರ ಕೊರೊನಾ ಟೆಸ್ಟ್ 

11:56 AM Dec 04, 2021 | Team Udayavani |

ಬೆಂಗಳೂರು: ನಗರದಲ್ಲಿ ಎರಡು ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ ಜಿನೋಮಿಕ್‌ ಸಿಕ್ವೆನ್ಸಿಂಗ್‌ಗೆ ಒಳಪಡಿಸುವ ಮಾದರಿಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಬಿಎಂಪಿ ಮುಂದಾಗಿದೆ.

Advertisement

ಈ ನಿಟ್ಟಿನಲ್ಲಿ ವಿದೇಶದಿಂದ ಇಲ್ಲಿಗೆ ಬಂದಿಳಿಯುವವರ ಜತೆಗೆ ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಐಸಿಯು (ತೀವ್ರ ನಿಗಾ ಘಟಕ)ಮತ್ತು ಎಚ್‌ಡಿಯು (ಹೈ ಡಿಪೆಂಡೆನ್ಸಿ ಯೂನಿಟ್‌), ಐಸಿಯು-ವಿ (ವೆಂಟಿಲೇಟರ್‌ಸಹಿತ ತೀವ್ರ ನಿಗಾ ಘಟಕ)ನಲ್ಲಿರುವ ರೋಗಿಗಳ ಗಂಟಲು ದ್ರವ ಮಾದರಿಯನ್ನೂ ಕಡ್ಡಾಯವಾಗಿ ಜಿನೋಮಿಕ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಲು ಬಿಬಿಎಂಪಿ ನಿರ್ಧರಿಸಿದೆ.

ಇದರೊಂದಿಗೆ ಜಿನೋಮಿಕ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸುವ ಮಾದರಿಗಳ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇದೆ. ಪ್ರಸ್ತುತ ನಿತ್ಯ 30 ಸಾವಿರ ಕೋವಿಡ್‌ ಪರೀ ಕ್ಷೆಗಳು ನಡೆಯುತ್ತಿದ್ದು, ಈ ಪೈಕಿ ಸಿಟಿ ಪ್ರಮಾ ಣವನ್ನು ಪರಿಶೀಲಿಸಿ 10-15 ಮಾತ್ರ ಜಿನೋಮಿಕ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾಗುತ್ತಿದೆ. ಬರುವ ದಿನ ಗಳಲ್ಲಿ ವಿದೇಶದಿಂದ ಬಂದಿಳಿದವರು ಹಾಗೂ ಸರ್ಕಾ ರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳನ್ನೂ ಈ ಪಟ್ಟಿಗೆ ಸೇರಿಸಲು ಚಿಂತನೆ ನಡೆದಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಾ.ಕೆ.ವಿ. ತ್ರಿಲೋಕ್‌ಚಂದ್ರ ತಿಳಿಸಿದರು.

ನಗರದ ವಿವಿಧ ಆಸ್ಪತ್ರೆಗಳಲ್ಲಿ ಐಸಿಯು, ಐಸಿ ಯು-ವಿ ಮತ್ತು ಎಚ್‌ಡಿಯು ಘಟಕಗಳಿಗೆ ದಾಖಲಾದ ರೋಗಿಗಳ ಸಂಖ್ಯೆ ಕಳೆದ ಹತ್ತು ದಿನಗಳಲ್ಲಿ 25ರ ಆಸುಪಾಸು ಇದೆ. ಇದರಲ್ಲಿ ಎಚ್‌ಡಿಯು ಮತ್ತು ಐಸಿಯುನಲ್ಲಿ ಹೆಚ್ಚು-ಕಡಿಮೆ ಒಂದೇ ಪ್ರಮಾಣದಲ್ಲಿ ರೋಗಿಗಳು ದಾಖಲಾಗುತ್ತಿದ್ದಾರೆ. ಇನ್ನು ವಿದೇಶದಿಂದ ಬರುವವರ ಸಂಖ್ಯೆ ನಿತ್ಯ ಸರಾಸರಿ ಹತ್ತಕ್ಕಿಂತ ಕಡಿಮೆ ಇದೆ. ಇದರೊಂದಿಗೆ ನಿತ್ಯ ಪರೀಕ್ಷೆಗೊಳಪಡಿಸುವುದು ಕೂಡ ಸೇರಿದೆ. ಇದೆಲ್ಲವೂ ಸೇರಿದರೆ, ದುಪ್ಪಟ್ಟು ಆಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಏಳು ಜನ ಪತ್ತೆ, ನಾಲ್ವರು ನಾಪತ್ತೆ
ನಾಪತ್ತೆಯಾಗಿದ್ದಾರೆ ಎನ್ನಲಾದ ಹನ್ನೊಂದು ಜನರಲ್ಲಿ ಏಳು ಜನರ ಪತ್ತೆಯಾಗಿದ್ದು, ಎಲ್ಲರೂ ಬೆಂಗಳೂರಿನಲ್ಲೇ ಇದ್ದಾರೆ. ಈ ಎಲ್ಲ ಹನ್ನೊಂದು ಜನರೂ ನವೆಂಬರ್‌ ಮೊದಲ ವಾರದಲ್ಲೇ ದಕ್ಷಿಣ ಆಫ್ರಿಕದಿಂದ ಬೆಂಗಳೂರಿಗೆ ಬಂದಿಳಿದಿದ್ದರು. ಆಗ ಒಮಿಕ್ರಾನ್‌ನ ಯಾವುದೇ ಸುಳಿವು ಇರಲಿಲ್ಲ. ನೆಗೆಟಿವ್‌ ವರದಿಯೊಂದಿಗೇ ಅವರೆಲ್ಲರೂ ಬಂದಿದ್ದಾರೆ. ಅವರಲ್ಲಿ ಈಗಾಗಲೇ ಏಳು ಜನ ಸಂಪರ್ಕಕ್ಕೆ ಸಿಕ್ಕಿದ್ದು, ಉಳಿದ ನಾಲ್ವರ ಸಂಪರ್ಕ ಸಾಧಿಸಲು ಪ್ರಯತ್ನ ನಡೆಯುತ್ತಿದೆ. ಶನಿವಾರದ ಮಧ್ಯಾಹ್ನದ ಒಳಗೆ ಅವರೂ ಸಂಪರ್ಕಕ್ಕೆ ಬರಲಿದ್ದಾರೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ ಮತ್ತು ಐಟಿ) ಡಾ.ತ್ರಿಲೋಕ್‌ಚಂದ್ರ “ಉದಯವಾಣಿ’ಗೆ ತಿಳಿಸಿದರು.

Advertisement

ಮೂಲಗಳ ಪ್ರಕಾರ ದಕ್ಷಿಣ ಆಫ್ರಿಕಾದಿಂದ ನ. 11ರಿಂದ 20ರ ನಡುವೆ ದಕ್ಷಿಣ ಆಫ್ರಿಕಾದಿಂದ 94 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ. ಅದರಲ್ಲಿ 14 ದಿನ ಕ್ವಾರಂಟೈನ್‌ ಅವಧಿ ಪೂರ್ಣಗೊಳ್ಳದ (ನ. 20ರಂದು ಆಗಮಿಸಿದ) 57 ಮಂದಿಯ ಮೇಲೆ ಸರ್ಕಾರ ನಿಗಾ ವಹಿಸಿದೆ. ಈ ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 35 ಜನರು ವಾಸವಿರುವ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಿಂದ ಬಂದಾಗ ಕೊರೊನಾ ಪರೀಕ್ಷೆಗೊಳಪಟ್ಟವರು ತಮ್ಮ ವರದಿ ಬರುವವರೆಗೂ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಆಗಿದ್ದರು. ನೆಗೆಟಿವ್‌ ವರದಿ ಬಂದಾಕ್ಷಣ ಚೆಕ್‌ಔಟ್‌ ಮಾಡಿಕೊಂಡು ತೆರಳಿದ್ದಾರೆ.ಆಫ್ರಿಕದಿಂದ ಬಂದವರನ್ನು ಪತ್ತೆ ಮಾಡಿ 14 ದಿನಗಳ ಕ್ವಾರಂಟೈನ್‌ ಮಾಡಿ, ಅವರ ಆರೋಗ್ಯ ಮತ್ತು ರೋಗ ಲಕ್ಷಣಗಳು ಮರುಕಳಿಸುತ್ತಿವೆಯೇ ಎಂಬ ಬಗ್ಗೆ ನಿಗಾ ವಹಿಸಲು ಮುಂದಾಗಿದೆ.

ಕಳೆದ ವರ್ಷವೂ ಹೀಗೇ ಆಗಿತ್ತು!
2020ರ ಡಿ.1ರಿಂದ 21ರ ಅವಧಿಯಲ್ಲಿ ಬ್ರಿಟನ್‌ನಿಂದ 1,456 ಮಂದಿ ನಗರಕ್ಕೆ ಆಗಮಿಸಿದ್ದರು. ಈ ಪೈಕಿ ಬಿಬಿಎಂಪಿ 1,290 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, 17 ಜನರಿಗೆ ಸೋಂಕು ದೃಢಪಟ್ಟಿತ್ತು. ಅದರಲ್ಲಿ 3 ಮಂದಿಗೆ ಕೊರೊನಾ ರೂಪಾಂತರಿ ಡೆಲ್ಟಾ ವೈರಸ್‌ ಪತ್ತೆಯಾಗಿತ್ತು. ಜತೆಗೆ, 202 ಮಂದಿ ಪಾಲಿಕೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಗ ವಿಮಾನ ನಿಲ್ದಾಣ ಸಿಬ್ಬಂದಿಯಿಂದ ನಾಪತ್ತೆಯಾದ ಪ್ರಯಾಣಿಕರ ಪಾಸ್‌ಪೋರ್ಟ್‌ ಮಾಹಿತಿ ಪಡೆದು, ಪೊಲೀಸ್‌ ಇಲಾಖೆಗೆ ನೀಡಿ ಪತ್ತೆ ಮಾಡಲು ಮನವಿ ಮಾಡಲಾಗಿತ್ತು. ಪೊಲೀಸರ ನೆರವಿನೊಂದಿಗೆ 48 ಗಂಟೆಯ ಒಳಗೆ 202 ಜನರನ್ನು ಪತ್ತೆಹಚ್ಚಿ ಕೋವಿಡ್‌ ಪರೀಕ್ಷೆಗೊಳಪಡಿಸಲಾಗಿತ್ತು.

ಒಮಿಕ್ರಾನ್‌ ಸೋಂಕಿತನ ಪತ್ನಿಗೆ ಸೋಂಕು!
ಒಮಿಕ್ರಾನ್‌ ದೃಢಪಟ್ಟ 46 ವರ್ಷದ ವ್ಯಕ್ತಿಯ ಪತ್ನಿಗೂ ಕೋವಿಡ್‌ ಪಾಸಿಟಿವ್‌ ಬಂದಿದೆ ಎಂದು ಮೂಲಗಳು ತಿಳಿಸಿವೆ. ವ್ಯಕ್ತಿಯ ಪತ್ನಿ ಕೂಡ ವೈದ್ಯರಾಗಿದ್ದು, ಆಸ್ಪತ್ರೆಯೊಂದರಲ್ಲಿ ನೇತ್ರ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸೋಂಕು ದೃಢಪಟ್ಟ ನಂತರದಿಂದ ಅಂದರೆ ನ. 20ರ ನಂತರ ಕರ್ತವ್ಯಕ್ಕೆ ಬಂದಿಲ್ಲ. ಅವರ ಗಂಟಲು ದ್ರವದ ಮಾದರಿಯನ್ನೂ ಜಿನೋಮ್‌ ಸಿಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಕ‌ಠಿಣ ನಿರ್ಬಂಧಕ್ಕೆ ಚಿಂತನೆ
ರಾಜಧಾನಿ ಬೆಂಗಳೂರಿನಲ್ಲಿ ಒಮಿಕ್ರಾನ್‌ ನಿಯಂತ್ರಣ ನಿಟ್ಟಿನಲ್ಲಿ ಕಠಿಣ ನಿರ್ಬಂಧ ವಿಧಿಸುವ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಸುಳಿವು ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಲಸಿಕೆ ಕಡ್ಡಾಯ, ಶಾಲಾ-ಕಾಲೇಜುಗಳಲ್ಲಿ ಸಭೆ ಸಮಾರಂಭಗಳನ್ನು ಮುಂದೂಡಲು ಸೂಚನೆ, ಮಾಸ್ಕ್ ಧರಿಸದವರ ವಿರುದ್ಧ ಕಾರ್ಯಾಚರಣೆಗೆ ಮಾರ್ಷಲ್‌ ತಂಡಗಳ ರಚನೆ ಸೇರಿದಂತೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಕೆ ಕೈಗೊಳ್ಳುತ್ತಿದೆ. ಇದಲ್ಲದೆ, ಇತ್ತೀಚೆಗೆ ಸರ್ಕಾರ ಅನ್‌ಲಾಕ್‌ ಮಾಡಿರುವುದಕ್ಕೆ ಪುನಃ ಹಂತ ಹಂತವಾಗಿ ನಿರ್ಬಂಧಗಳನ್ನು ವಿಧಿಸಬೇಕಾಗಬಹುದು ಎಂದರು.

ಈ ನಿಟ್ಟಿನಲ್ಲಿ ಸೋಂಕು ಪ್ರಕರಣಗಳ ತೀವ್ರತೆ ನೋಡಿಕೊಂಡು, ತಜ್ಞರ ಸಲಹೆಗಳನ್ನು ಪರಿಶೀಲಿಸಿ, ಸರ್ಕಾರದ ನಿರ್ದೇಶನದ ಮೇರೆಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಆದರೆ, ಇದೆಲ್ಲವೂ ಹಂತ- ಹಂತವಾಗಿ ಜಾರಿಗೆ ಬರಲಿದೆ ಎಂದು ಗೌರವ್‌ ಗುಪ್ತ ಸ್ಪಷ್ಟಪಡಿಸಿದರು. ಈ ಮಧ್ಯೆ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ಕಂಟೈನ್ಮೆಂಟ್‌ ವಲಯಗಳನ್ನು ಮಾಡುವುದರ ಜತೆಗೆ ಸಾರ್ವಜನಿಕರಿಗೆ ಮಾಸ್ಕ್ ಧರಿಸಲು ಹೆಚ್ಚು ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ 54 ತಂಡಗಳನ್ನು ರಚಿಸಲಾಗಿದೆ¬. ಸಭೆ-ಸಮಾರಂಭ ಭಾಗವಹಿಸುವದರ ಮೇಲೆ ನಿಗಾ ನಿರ್ಬಂಧದ ಭಾಗಗಳೇ ಆಗಿವೆ ಎಂದು ಆಯುಕ್ತ ತ್ರಿಲೋಕ ಚಂದ್ರ ತಿಳಿಸಿದರು.

ಕಂಟೈನ್ಮೆಂಟ್‌ ನಿಯಮ ಉಲ್ಲಂಘನೆ ಆರೋಪ

ಕಂಟೈನ್ಮೆಂಟ್‌ ಮಾಡುವ ವಿಚಾರದಲ್ಲಿ ಪಾಲಿಕೆ ನಿಯಮ ಉಲ್ಲಂಘಿ ಸದೆ ಎಂಬ ಆರೋಪ ಕೇಳಿಬಂದಿದೆ. ಒಮಿಕ್ರಾನ್‌ ಸೋಂಕು ಪತ್ತೆಯಾದ ವೈದ್ಯ ಮತ್ತು ಅವರಪತ್ನಿಗೆ ಸೋಂಕು ದೃಢಪಟ್ಟಿದೆ. ಇಬ್ಬರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದ್ದರೂ ಕೋಣನಕುಂಟೆ ಆರ್‌ಬಿಐ ಲೇಔಟ್‌ನಲ್ಲಿರುವ ವೈದ್ಯರ ಮನೆಯನ್ನು ಕಂಟೈನ್ಮೆಂಟ್‌ ಮಾಡಲಾಗಿದೆ. ಆದರೆ, ಸ್ವತಃ ಪಾಲಿಕೆ ರೂಪಿಸಿಕೊಂಡ ನಿಯಮದ ಪ್ರಕಾರ ಒಂದು ಮನೆಯಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ಜನರಿಗೆ ಸೋಂಕು ದೃಢಪಟ್ಟರೆ ಮಾತ್ರ ಮನೆಯನ್ನು ಕ್ಲಸ್ಟರ್‌ ಕಂಟೈನ್ಮೆಂಟ್‌ ಮಾಡಲಾಗುತ್ತದೆ. ನಂತರ ಸುತ್ತಲಿನ 100 ಮೀ. ಮನೆಗಳ ನಿವಾಸಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next