ಮಂಡ್ಯ: ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಹುಚ್ಚೇಗೌಡನದೊಡ್ಡಿ ಗ್ರಾಮದ ಮರಿಗೌಡ ಎಂಬವರು ಸುಮಾರು 1.10 ಲಕ್ಷ ರೂ. ಮೌಲ್ಯದ ಬಂಡೂರು ತಳಿಯ ಟಗರು ಖರೀದಿಸಿದ್ದು, ಹುಸ್ಕೂರು ಗ್ರಾಮಸ್ಥರು ಮೆರವಣಿಗೆ ಮಾಡಿದ್ದಾರೆ.
ಖರೀದಿ: 1.10 ಲಕ್ಷ ರೂ. ಮೌಲ್ಯದ ಬಿತ್ತನೆ ಬಂಡೂರು ತಳಿಯ ಟಗರನ್ನು ಹುಚ್ಚೇಗೌಡನ ದೊಡ್ಡಿಯ ಗ್ರಾಮದ ರೈತ ಮರಿಗೌಡ ಖರೀದಿ ಮಾಡಿದ್ದರು. ಅದನ್ನು ನೋಡಲು ಗ್ರಾಮಸ್ಥರು ಜಮಾವಣೆಗೊಂಡಿದ್ದರು. ಆಗ ಹುಸ್ಕೂರು ಗ್ರಾಮ ದಲ್ಲಿ ಮೆರವಣಿಗೆ ನಡೆಸಿ ನಂತರ ಹುಚ್ಚೇಗೌಡನ ದೊಡ್ಡಿಗೆ ಕರೆದೊಯ್ಯಲಾಯಿತು. ಕಸಿ ಮಾಡುವ ಕಾಯಕ: ಹುಚ್ಚೇಗೌಡನದೊಡ್ಡಿ ಗ್ರಾಮದ ಮರೀಗೌಡ ಕುರಿಗಳನ್ನು ಸಾಕಿಕೊಂಡು ಜೀವನ ನಡೆಸುವುದರ ಜತೆಗೆ ಟಗರು ತಂದು ಕಸಿ ಮಾಡುವ ಕಾಯಕ ಮಾಡಿಕೊಂಡಿದ್ದಾರೆ. ಅದರಂತೆ ಭಾನುವಾರ ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮಕ್ಕೆ ತೆರಳಿ ಅಲ್ಲಿ ಬಂಡೂರು ತಳಿಯ ಬಿತ್ತನೆ ಟಗರನ್ನು 1.10 ಲಕ್ಷ ರೂ.ಗೆ ಖರೀದಿ ಮಾಡಿ ಸ್ವಗ್ರಾಮಕ್ಕೆ ಹೋಗುವುದಕ್ಕಾಗಿ ಹುಸ್ಕೂರು ಗ್ರಾಮಕ್ಕೆ ಬಂದಾಗ ಸ್ಥಳೀಯ ಗ್ರಾಮಸ್ಥರು, ಸ್ವಗ್ರಾಮದವರ ಜತೆ ಸೇರಿ ಮೆರವಣಿಗೆ ನಡೆಸಿದರು.
18 ತಿಂಗಳು ತುಂಬಿದೆ: ರೈತ ಮರಿಗೌಡ ಮಾತನಾಡಿ, ನಾನು ವ್ಯವಸಾಯದ ಜತೆಗೆ 50 ಕುರಿ ಸಾಕಾಣಿಕೆ ಮಾಡುತ್ತಿದ್ದೇನೆ. ಟಗರು ಬಿತ್ತನೆಗಾಗಿಯೇ 18 ತಿಂಗಳು ತುಂಬಿರುವ ಬಿತ್ತನೆ ಬಂಡೂರು ತಳಿಯ ಟಗರನ್ನು ಖರೀದಿಸಿದ್ದೇನೆಂದರು.
ಅನುಕೂಲ: ಸ್ಥಳೀಯ ನಿವಾಸಿ ಕುಮಾರ್ ಮಾತನಾಡಿ, ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತನೆ ಟಗರು ಇರಲಿಲ್ಲ. ಇದೀಗ ಮರಿಗೌಡ ಅವರು ಬಿತ್ತನೆ ಟಗರು ತಂದಿರುವುದರಿಂದ ಸುತ್ತಮುತ್ತಲಿನ ಜನತೆಗೆ ಅನುಕೂಲವಾಗಲಿದೆ ಎಂದು ಹೇಳಿದರು. ಮೆರವಣಿಗೆಯ ಸಂದರ್ಭದಲ್ಲಿ ಗ್ರಾಮಸ್ಥರಾದ ಟಿ.ರವಿ, ಬೆಟ್ಟೇಗೌಡ, ಕೆಂಪೇಗೌಡ ಉರೂಫ್ ಪಾಪಣ್ಣ, ಮಂಜು, ಕುಮಾರ್, ನಾಗರಾಜು, ಕೆಂಪೇಗೌಡ, ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.