ಗುಂಡ್ಲುಪೇಟೆ(ಚಾಮರಾಜನಗರ): ಕಾಡಾಟದಲ್ಲಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯದಂಚಿನ ನಾಗರತ್ನಮ್ಮ ಕಾಲೋನಿಯಲ್ಲಿ ಮಂಗಳವಾರ ನಡೆದಿದೆ.
ಸುಮಾರು ಒಂದೂವರೆ ವರ್ಷದ ಗಂಡು ಚಿರತೆ ಶವ ಪತ್ತೆಯಾಗಿದ್ದು, ಚಿರತೆಯ ಉಗುರು-ಹಲ್ಲುಗಳು ಸ್ಥಳದಲ್ಲೇ ಇದ್ದ ಕಾರಣ ಕಾಡು ಹಂದಿಯೊಂದಿಗೆ ಕಾದಾಟದಲ್ಲಿ ಸಾವನ್ನಪ್ಪಿದ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಓಂಕಾರ ವಲಯದ ಅಂಚಿನ ನಾಗರತ್ಮಮ್ಮ ಕಾಲೋನಿ ಬಳಿ ಚಿರತೆಯ ಶವ ಪತ್ತೆಯಾಗಿದ್ದು, ಚಿರತೆ ಶವದಲ್ಲಿ ಹುಳುಗಳು ಬಿದ್ದಿವೆ. ಮೇಲಾಧಿಕಾರಿಗಳ ಗಮನಕ್ಕೆ ಆರ್‌ಎಫ್‌ಒ ಕೆ.ಪಿ.ಸತೀಶ್‌ಕುಮಾರ್ ತಂದಿದ್ದಾರೆ. ಸ್ಥಳಕ್ಕೆ ಎಸಿಎಫ್ ಜಿ.ರವೀಂದ್ರ, ಪಶು ವೈದ್ಯ ಡಾ.ವಾಸೀ ಮಿರ್ಜಾ, ಡಿಆರ್‌ಎಫ್‌ಒ ಅಮರ್, ಗಸ್ತು ವನಪಾಲಕ ಶ್ರೀಕಾಂತ್, ಚಾಲಕ ಹನೀಫ್, ಶ್ರೀಕಂಠ ಭೇಟಿ ನೀಡಿದ್ದರು.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗು ನಿರ್ದೇಶಕ ಡಾ.ಪಿ.ರಮೇಶ್‌ಕುಮಾರ್ ಮಾರ್ಗದರ್ಶನದಂತೆ ಚಿರತೆಯ ಶವ ಪರೀಕ್ಷೆಯ ಬಳಿಕ ಬೆಂಕಿಯಲ್ಲಿ ಸುಟ್ಟು ಹಾಕಲಾಯಿತು.