Advertisement
ಆವತ್ತು ಆಗಿದ್ದು ಇಷ್ಟೇ. ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಿಲಿನಲ್ಲಿರುವ ಹಂಗಳದ ಹಿರಿಕೆರೆಯ ಬದಿಯಲ್ಲಿರುವ ಜಮೀನಿನಲ್ಲಿ ದಿಢೀರನೇ ಹುಲಿಯೊಂದು ಪ್ರತ್ಯಕ್ಷವಾಯಿತು. ನೋಡ ನೋಡುತ್ತಲೇ, ನೇರವಾಗಿ ನುಗ್ಗಿ ಬಂದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಮುದುಕಪ್ಪನ ಮೇಲೆ ಆಕ್ರಮಣ ಮಾಡಿತು. ಹುಲಿಯ ಆಕ್ರಮಣದ ರಭಸಕ್ಕೆ ಕುಸಿದ ಮುದುಕಪ್ಪನ ಸಹಾಯಕ್ಕೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕಾರು ಮಂದಿ ಬೊಬ್ಬೆ ಹಾಕುತ್ತಾ ಓಡೋಡಿ ಬಂದಾಗ, ಹುಲಿ ಗಾಬರಿಗೊಂಡು ಓಡಿ ಹೋಯಿತು.
Related Articles
Advertisement
ಮತ್ತೆ ನಿದ್ದೆಗೆಟ್ಟಿದ್ದು ಅರಣ್ಯ ಇಲಾಖೆಗೆ. ಅಬ್ಟಾ.. ಇದನ್ನು ಹೇಗಾದರೂ ಮಾಡಿ ಕಾಡಿನೊಳಗೆ ಓಡಿಸಿಯೇ ತೀರಬೇಕೆಂದು ಮೂವತ್ತರಿಂದ ನಲವತ್ತು ಮಂದಿ ನುರಿತ ಅರಣ್ಯ ಸಿಬ್ಬಂದಿಗಳು, ಜೆ.ಸಿ.ಬಿ. ಸಹಾಯದಿಂದ ಶಬ್ಧ ಮಾಡುತ್ತಾ, ಪೊದೆಗಳನ್ನು ತಳ್ಳುತ್ತಾ ಹುಲಿಯನ್ನು ಅಲ್ಲಿಂದ ಕಾಡಿನ ಹತ್ತಿರಕ್ಕೆ ಓಡಿಸಿದರು. ಆದರೆ ಅದು ಕಾಡು ಸೇರಲೇ ಇಲ್ಲ. ಮತ್ತೆ ಕಲ್ಲಿಗೌಡನಹಳ್ಳಿ ಗ್ರಾಮಸ್ಥರ ಹೃದಯದಲ್ಲಿ ಢವ ಢವ ಶುರುವಾಯಿತು.
ಸುತ್ತಮುತ್ತಲಿನ ಜಮೀನಿನಲ್ಲಿ ಹುಲಿ ಅಡ್ಡಾಡುವುದಕ್ಕೆ ಶುರುಮಾಡಿತು. ಗ್ರಾಮಸ್ಥರು ಭಯದ ಜೊತೆಗೇ ಬದುಕು ನೂಕುವಂತಾಯಿತು. ಇದರಿಂದ ಬೇಸತ್ತ ಒಂದಷ್ಟು ಜನ, ಜೀವ ಭಯದಿಂದ ಬಳಲಿ ಬೆಂಡಾಗಿ, ಜಮೀನಿನ ಕಡೆ ತಲೆ ಹಾಕದೆ, ಕೂಲಿ ಕೆಲಸಕ್ಕೂ ಹೋಗದೇ ಹೈರಾಣಾಗಿ ಹೋದರು. ಆಗ ಶುರುವಾಗಿದ್ದೇ ಹುಲಿ ಹಿಡಿಯುವ ಕಾರ್ಯಾಚರಣೆ.
ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಒಳಗೊಂಡ ಸುಮಾರು ಮೂವತ್ತು ಜನರ ತಂಡದ ಜೊತೆ ಇಬ್ಬರು ಪಶುವೈದ್ಯರು ಸೇರಿಕೊಂಡರು. ಕೃಷ್ಣ ಮತ್ತು ಜಯಪ್ರಕಾಶ ಎಂಬ ಎರಡು ಸಾಕಾನೆಗಳೂ ಬಂದವು. ಮುಂಜಾನೆಯಿಂದ ಸಂಜೆಯವರೆಗೆ ಮತ್ತು ಸಂಜೆಯಿಂದ ಮಧ್ಯರಾತ್ರಿಯವರೆವಿಗೂ ಹಂಗಳ, ಕಲ್ಲಿಗೌಡನಹಳ್ಳಿಯ ಗಲ್ಲಿ ಗಲ್ಲಿಯನ್ನೂ ಬಿಡದೆ ಸುತ್ತಾಡಿ, ಊರ ಹೊರಗೂ ತಿರುಗಾಡಿದರೂ ವ್ಯಾಘ್ರನ ಹೆಜ್ಜೆ ಗುರುತನ್ನೂ ಪತ್ತೆ ಹಚ್ಚಲಾಗಲಿಲ್ಲ. ಇನ್ನೇನು ಮಾಡೋದು?
ಬಂಡೀಪುರದ ಅರಣ್ಯ ಇಲಾಖೆಯ ರಾಣಾ ಎಂಬ ಹೆಸರಿನ ನಾಯಿಯ ಸಹಾಯದೊಂದಿಗೆ ಸರಿ ಸುಮಾರು ಮೂವತ್ತಕ್ಕೂ ಹೆಚ್ಚು ಕಿ.ಮೀ ಸುತ್ತಳತೆಯಲ್ಲಿ ಕಾಡಂಚಿನ ಜಮೀನಿನ ಪೊದೆಗಳನ್ನು ಹುಡುಕಾಟ ನಡೆಸಿದರೂ ಹುಲಿ ಪತ್ತೆಯಾಗಲಿಲ್ಲ. ಹುಲಿ ಸಿಕ್ಕೀತೆ ? ಜನರಿಂದ ಅರಣ್ಯ ಅಧಿಕಾರಿಗಳಿಗೆ ಪ್ರಶ್ನೆಗಳ ಕಲ್ಲಿನ ಮಳೆಗೆರೆದರು. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ ಎಂದು ಉತ್ತರಿಸುತ್ತಾ ಮತ್ತೆ ಎರಡು ಕಾಡಾನೆಗಳ ಸಹಾಯದಿಂದ ಹುಲಿಯನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆಯಿತು. ಆದರೂ ಸಹ ಸುಳಿವನ್ನೇ ನೀಡದೇ ಹುಲಿರಾಯ ಮರೆಯಾಗಿಬಿಟ್ಟ. ಯಾವಾಗ ನಮ್ಮ ಜಮೀನಿನಲ್ಲಿ ಹುಲಿರಾಯ ಪ್ರತ್ಯಕ್ಷನಾಗುತ್ತಾನೋ ಎಂಬ ಭಯದಲ್ಲಿ ತಮ್ಮ ತಮ್ಮ ಕೆಲಸದಲ್ಲಿ ತೊಡಗಿರುವ ರೈತಾಪಿವರ್ಗಕ್ಕೆ ಜೀವ ಭಯ ಒಂದು ಕಡೆಯಾದರೆ, ತಮ್ಮ ಜಾನುವಾರುಗಳು, ಸಾಕುಪ್ರಾಣಿಗಳ ಜೀವವನ್ನು ಮತ್ತೂಂದು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಹುಲಿ ಸೆರೆ ಕಾರ್ಯಾಚರಣೆ
ಹುಲಿಯನ್ನು ಕಂಡ ವ್ಯಕ್ತಿ ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದ ತಂಡ ಮೊದಲು ದಾಳಿ ಮಾಡಿದ ಸ್ಥಳದಿಂದ ಹೆಜ್ಜೆ ಗುರುತನ್ನು ಪತ್ತೆ ಮಾಡುತ್ತಾ ಹೋಯಿತು. ಆ ಹೆಜ್ಜೆ ಗುರುತು ಚಿರತೆಯಧ್ದೋ, ಹುಲಿ ಯಧ್ದೋ ಎಂಬು ಪರಿಶೀಲಿಸಿ, ಅದು ಚಿರತೆಯದ್ದಲ್ಲ, ಹುಲಿಯ ಹೆಜ್ಜೆಯೇ ಎಂದು ಧೃಡಪಡಿಸಿಕೊಂಡಿತು. ನಂತರ ಹುಲಿಯು ಹೋಗಿರುವ ಐದು ಕಿ.ಮೀ ಸುತ್ತಳತೆಯಲ್ಲಿ ಹುಡುಕಾಟ ನಡೆಸಿ ಯಾವುದಾದರೂ ಪ್ರಾಣಿಯನ್ನು ಕೊಂದು ತಿಂದಿದಿಯೇ, ತಿಂದಿದ್ದರೆ ಆ ಪ್ರಾಣಿಯ ಮೃತ ದೇಹ ಎಲ್ಲಿದೆ ಎಂದು ಪತ್ತೆ ಹಚ್ಚಲು ಮುಂದಾದರು. ಇದರೊಂದಿಗೆ ಪೊದೆಗಳಲ್ಲಿ ಅವಿತುಕೊಂಡು ಹೊಂಚು ಹಾಕುವುದರಿಂದಿಗೆ ಸುತ್ತಮುತ್ತಲಿನ ಪೊದೆಯನ್ನು ಜೆ.ಸಿ.ಬಿ.ಸಹಾಯದಿಂದ ಶಬ್ಧ ಮಾಡುತ್ತ ಹುಡುಕಾಟ ನಡೆಸಲಾಯಿತು. ಆದರೆ ಏನೂ ಪ್ರಯೋಜನವಾಗಲಿಲ್ಲ. ಹುಲಿಗಳು ಸಾಮಾನ್ಯವಾಗಿ ತಮ್ಮ ಕಾರ್ಯ ಕ್ಷೇತ್ರವನ್ನು ತಾವೇ ಗುರುತು ಮಾಡಿಕೊಂಡಿರುತ್ತವೆ. ಅದು ವಾಸಿಸುವ ಐದು ಕಿ.ಮೀ. ವಿಸ್ತೀರ್ಣವನ್ನು ತನ್ನ ಟೆರಿಟರಿ ಎಂದು, ಮೂತ್ರ ವಿಸರ್ಜನೆ ಮಾಡುವುದರೊಂದಿಗೆ ಅಥವಾ ಮರಗಳಿಗೆ ತನ್ನ ಪಂಜಿನಿಂದ ಗುದ್ದಿ ಗುರುತು ಮಾಡಿ ಇದೇ ನನ್ನ ಸಾಮ್ರಾಜ್ಯ ಅಂತ ಎಚ್ಚರಿಕೆ ನೀಡಿರುತ್ತದೆ. ಅಲ್ಲಿಗೆ ಬೇರೆ ಹುಲಿ ದಾಳಿ ಇಟ್ಟರೆ, ಅದನ್ನು ಓಡಿಸಲು ಬಿರುಸಿನ ಕಾದಾಟವೇ ನಡೆಯುತ್ತದೆ. ಇದರಲ್ಲಿ ಸೋತ ಹುಲಿಯು ತನ್ನ ಜಾಗವನ್ನು ಬಿಟ್ಟು ಹೊರಹೋಗುತ್ತದೆ. ಇದೇ ರೀತಿ ಈ ಹುಲಿಯು ಕಾಡಿನಿಂದ ಹೊರಬಂದಿರಬಹುದು ಎಂಬ ಗುಮಾನಿ ಎಲ್ಲರನ್ನೂ ಕಾಡುತ್ತಿದೆ. ಈ ಮಾತಿಗೆ ಪುಷ್ಠಿ ನೀಡುವಂತೆ ಕಲ್ಲಿಗೌಡನಹಳ್ಳಿಯಿಂದ ಅನತಿ ದೂರದಲ್ಲಿರುವ ಹುಂಡೀಪುರ, ಚೌಡಹಳ್ಳಿ ಭಾಗದಲ್ಲಿ ಹುಲಿ ಕಾಣಿಸಿಕೊಂಡು ಹಸುಗಳನ್ನು ಸಾಯಿಸಿ ತಿನ್ನುವುದರೊಂದಿಗೆ ಅಲ್ಲಲ್ಲಿ ದರ್ಶನ ನೀಡುತ್ತಿದೆ. ಮತ್ತೆ ಮತ್ತೆ ಕಾಡಂಚಿನ ಗ್ರಾಮದ ಜನರಲ್ಲಿ ಭೀತಿ ಮೂಡಿಸುತ್ತಾ ನೆಮ್ಮದಿ ಕದಡುತ್ತಿದೆ. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾಧವ್ ಅವರು- ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರಿಕೆರೆ ಸುತ್ತಮುತ್ತ ಜಿಂಕೆ, ಕಡವೆಗಳು ಬಹಳ ಹೆಚ್ಚಾಗಿ ಕಂಡು ಬರುವುದರಿಂದ ಹುಲಿಯು ಅದನ್ನು ತಿನ್ನುವ ಆಸೆಯಿಂದ ಬಂದಿರುತ್ತದೆ. ಬೇಟೆಯಾಡಿ ತಿಂದ ಮೇಲೆ ವಾಪಸ್ ಕಾಡಿಗೆ ಹೋಗಿರಬಹುದು. ಆದರೆ, ಬಂಡೀಪುರ ಅರಣ್ಯದಲ್ಲಿ ಹುಲಿ ಸಂತತಿ ಹೆಚ್ಚಾಗಿರುವ ಕಾರಣ ಟೆರಿಟರಿ ಫೈಟ್‌ನಿಂದಲೂ ಸಹ ಒಂದು ಹುಲಿ ಹೊರಗೆ ಬಂದಿರ ಬಹುದೆಂದು ಊಹಿಸಲಾಗಿದೆ. ನೀವೇನೂ ಭಯಪಡಬೇಡಿ. ಹುಲಿಯನ್ನು ವಾಪಸ್ ಕಾಡಿಗಟ್ಟುವ ಸಲುವಾಗಿಯೇ ವಿಶೇಷ ದಳವನ್ನು ರಚಿಸಿ ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸುತ್ತಿದ್ದೇವೆ- ಅಂತೆಲ್ಲಾ ಹೇಳಿ ಹೋಗಿದ್ದಾರೆ. ಆದರೂ, ಗ್ರಾಮಸ್ಥರ ಮನಸ್ಸಿನಲ್ಲಿ ಹುಲಿಯ ಹೆಜ್ಜೆ ಗುರುತು ಮಾತ್ರ ಮಾಸಿಲ್ಲ. ಹಾಗಾಗಿ, ಭಯ ಮತ್ತೆ ಬದುಕಾಗಿದೆ. ಸೋಮಶೇಖರ್