Advertisement

ಬಂಡೀಪುರ ಅರಣ್ಯದಲ್ಲಿ ದಿನಗೂಲಿ ನೌಕರರಿಗೆ ಕಿರುಕುಳ

03:45 AM Mar 06, 2017 | Team Udayavani |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕೆಲಸ ನಿರ್ವಹಿಸುತ್ತಿರುವ ದಿನಗೂಲಿ ನೌಕರರರಿಗೆ ಅರಣ್ಯ ಇಲಾಖೆಯು ಸಮರ್ಪಕ ಸವಲತ್ತುಗಳನ್ನು ನೀಡದೆ ವಿಶ್ವಾಸಕ್ಕೂ ಪಡೆದುಕೊಳ್ಳದ ಪರಿಣಾಮ ದಕ್ಷತೆಯಿಂದ ಕೆಲಸ ಮಾಡಲಾಗದಂತ ಪರಿಸ್ಥಿತಿ ಇದೆ ಎಂದು ಹೆಸರು ಹೇಳಲಿಚ್ಚಿಸದ ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisement

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಬೇಸಿಗೆ ಸಂದರ್ಭದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಕೈಗೊಂಡರೂ ಅಲ್ಲಲ್ಲಿ ಬೆಂಕಿ ಬೀಳುತ್ತಿರುವುದು ಉದ್ಯಾನದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸಿದೆ.ಇಂಥಾ ಸಂದರ್ಭದಲ್ಲಿ ಹೆಚ್ಚಿನ ದಿನಗೂಲಿ ನೌಕರರ ಸೇವೆಯನ್ನು ಪಡೆಯಲಾಗುತ್ತಿದೆ. ಕಾಯಂ ನೌಕರರಿಗಿಂತ ಹೆಚ್ಚಿನ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅಧಿಕಾರಿಗಳು ಸಕಾಲಕ್ಕೆ ವೇತನ ಪಾವತಿಸದೆ ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ.

13 ವಲಯಗಳನ್ನು ಹೊಂದಿರುವ ಬಂಡೀಪುರ ಹುಲಿ ಯೋಜನೆಯಲ್ಲಿ ಬೇಸಿಗೆ ಸಮಯವನ್ನು ನಿರ್ವಹಿಸುವುದು ಬಾರಿ ಸವಾಲಿನ ಕೆಲಸವಾಗಿದೆ. 341 ಕಾಯಂ ನೌಕರರ ಸ್ಥಾನದಲ್ಲಿ ಕೇವಲ 221 ಇದ್ದು, ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗಾರ್ಡ್‌ ಹಾಗೂ ಫಾರೆಸ್ಟರ್‌ ಹುದ್ದೆಗಳಲ್ಲಿ ಶೇ.50ಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಕೊರತೆಯಿದೆ. ದಿನಗೂಲಿ ನೌಕರರ ನೇಮಕದ ಮೂಲಕ ಇದನ್ನು ಸರಿದೂಗಿಸಲಾಗುತ್ತಿದೆ.ದಿನಗೂಲಿ ನೌಕರರ ಶೋಷಣೆ: ವಾಹನ ಚಾಲಕರು ಸೇರಿದಂತೆ ದಿನಗೂಲಿ ನೌಕರರಿದ್ದಾರೆ. ಇವರಿಗೆ ಸಕಾಲದಲ್ಲಿ ಸಮರ್ಪಕವಾಗಿ ಕೂಲಿಯನ್ನೂ ವಿತರಿಸುತ್ತಿಲ್ಲ. ಬೇಸಿಗೆಯಲ್ಲಿ ಕಾವಲು, ರಾತ್ರಿ ಗಸ್ತು ನಡೆಸಲು ಪ್ರತಿ ವಲಯದಲ್ಲಿಯೂ 35 ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಾಗಿದೆ.

ಆದರೆ, ಹೆಚ್ಚಿನ ವಲಯಗಳಲ್ಲಿ ಕೇವಲ 10-15 ಸಿಬ್ಬಂದಿ ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತಿದ್ದು, ಎಲ್ಲಾ ಕೆಲಸಗಳಿಗೂ ಇವರನ್ನೇ ಬಳಸಿಕೊಳ್ಳಲಾಗುತ್ತಿದೆ. ಆದರೆ ಗರಿಷ್ಠ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದಾಗಿ ದಾಖಲೆ ಸೃಷ್ಟಿಸಿ ಬಿಲ್‌ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಲಾಗುತ್ತಿದೆ.

ಕಾಯಂ ನೌಕರರಿಗಿಂತ‌ ಹೆಚ್ಚಿನ ಸೇವೆ ಸಲ್ಲಿಸುವ ಇವರು ಆನೆದಾಳಿಯನ್ನು ತಡೆಗಟ್ಟಲು ರಾತ್ರಿ ಗಸ್ತು ನಡೆಸುವ ಜೊತೆಗೆ ಅರಣ್ಯ ಪ್ರದೇಶದಲ್ಲಿ ನಡೆಸುವ ಕಾಮಗಾರಿಗೆ ಕೂಲಿಯಾಳುಗಳನ್ನಾಗಿ ಬಳಕೆ ಮಾಡಲಾಗುತ್ತದೆ.

Advertisement

ಪೈರ್‌ ಲೈನ್‌ ನಿರ್ಮಾಣವನ್ನೂ ಇವರಿಂದಲೇ ಮಾಡಿಸಲಾಗುತ್ತದೆ. ರಜೆ ಕೇಳಿದರೆ ಅಥವಾ ಎರಡು ಪಾಳಿಗಳಲ್ಲಿ ಕೆಲಸ ಮಾಡಲು ನಿರಾಕರಿಸಿದರೆ ಹಿಂದಿನ ದಿನದ ಕೂಲಿಯನ್ನೂ ನೀಡುವುದಿಲ್ಲ: ಅಲ್ಲದೆ ಒಂದೆರಡು ದಿನಗಳ ಕೂಲಿಯನ್ನೂ ಕಟಾಯಿಸುತ್ತಿದ್ದಾರೆ ಎನ್ನುತ್ತಾರೆ ನೊಂದ ಸಿಬ್ಬಂದಿ. ಮೊನ್ನೆ ಬೆಂಕಿ ಬಿದ್ದ ಪ್ರಕರಣದಲ್ಲಿ ಸಿಬ್ಬಂದಿಗಳನ್ನು ಶಂಕಿಸಲಾಗಿರುವುದು ಇನ್ನೂ ಹೆಚ್ಚಿನ ನೋವಿಗೆ ಕಾರಣವಾಗಿದೆ.

ಕನಿಷ್ಠ ಪದಗಳ ಪ್ರಯೋಗ: ಈ ನೌಕರರಿಗೆ ಅಧಿಕಾರಿಗಳು ಅವಾಚ್ಯ ಬೈಗಳುಗಳನ್ನು ಪ್ರಯೋಗಿಸುತ್ತಿರುವುದು ನೌಕರರ ಆತ್ಮಸ್ಥರ್ಯವನ್ನು ಕುಂದಿಸುತ್ತಿದೆ. ಅರಣ್ಯದಲ್ಲಿ ನಡೆಯುವ ಘಟನೆಗಳು ಮಾಧ್ಯಮದವರಿಗೆ ತಲುಪಲು ಇವರೇ ಕಾರಣವೆಂಬ ಭಾವನೆಯಿಂದ ಹೆಡಿಯಾಲ ಉಪವಿಭಾಗದ ಅಧಿಕಾರಿಯೊಬ್ಬರು ಎಲ್ಲಾ ಸಿಬ್ಬಂದಿಗಳ ಮೊಬೈಲ್‌ ಕಿತ್ತಿಟ್ಟುಕೊಂಡು ಅಲ್ಲಿದ್ದ ಎಲ್ಲಾ ಮಾಹಿತಿಗಳನ್ನು ಅಳಿಸಿದ ನಂತರ ಹಿಂದಿರುಗಿಸಿದ ಘಟನೆ ಇತ್ತೀಚಿಗೆ ನಡೆದಿದೆ.

ಎಸ್‌ಟಿಪಿಎಫ್ ಸಿಬ್ಬಂದಿ ಬಳಕೆ: ಹುಲಿಕಾಡಿನಲ್ಲಿ ನಿರಂತರ ಗಸ್ತು ನಡೆಸಬೇಕಾದ ಎಸ್‌ಟಿಪಿಎಫ್ ಸಿಬ್ಬಂದಿಗಳನ್ನು ಸಫಾರಿ ಟಿಕೆಟ್‌ ಕೌಂಟರ್‌ ಹಾಗೂ ಕಚೇರಿಯ ಕೆಲಸಗಳಿಗೆ ಬಳಕೆಮಾಡಿಕೊಳ್ಳಲಾಗುತ್ತಿದೆ. ಕಳ್ಳಬೇಟೆ ಶಿಬಿರಗಳಿಗೆ ನೀಡಿರುವ ಹೆಜ್ಜೆ ಹೆಸರಿನ ಸಾಫ್ಟ್ವೇರ್‌ ಹೊಂದಿರುವ ಹೆಚ್ಚಿನ ಮೊಬೈಲುಗಳು ನಿಷ್ಕ್ರಿಯವಾಗಿವೆ.

ಇದರ ಪರಿಣಾಮ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಯು ಸಾವಿಗೀಡಾದರೂ ತಡವಾಗಿ ಇಲಾಖೆಯ ಗಮನಕ್ಕೆ ಬರುತ್ತದೆ. ಯಾವ ಪ್ರದೇಶದಲ್ಲಿ ಬೆಂಕಿ ಬಿದ್ದರೂ ಅಧಿಕಾರಿಗಳ ಗಮನಕ್ಕೆ ಬರುವುದೇ ಇಲ್ಲ. ಮರುದಿನ ಪತ್ರಿಕೆಗಳಲ್ಲಿ ವರದಿ ಬಂದ ನಂತರ ಅಧಿಕಾರಿಗಳ ಗಮನಕ್ಕೆ ಬರುವಂತಾಗಿದೆ.

ಹಗಲಿರುಳೂ ದುಡಿಯುತ್ತಾ ಅರಣ್ಯ ಸೇವೆಯಲ್ಲಿರುವ ನೌಕರರದ್ದು ನಾಯಿಪಾಡಿಗಿಂತ ಕಡೆಯಾಗಿದೆ. ಅಧಿಕಾರಿಗಳ ಗುಲಾಮರಾಗಿ ಬದುಕಬೇಕಾಗಿದೆ. ಇನ್ನಾದರೂ ಸಂಖ್ಯರಿಕ್ತ ಹಾಗೂ ದಿನಗೂಲಿ ನೌಕರರನ್ನು ಇವರನ್ನು ಕಾಯಂ ಮಾಡುವ ಮೂಲಕ ಉದ್ಯೋಗ ಭದ್ರತೆ ನೀಡಲು ಮುಂದಾಗಬೇಕು. ಬೆಂಕಿ ನಂದಿಸುವ ಕಾರ್ಮಿಕರಿಗೆ ಸೂಕ್ತವಾದ ಸವಲತ್ತುಗಳನ್ನು ನೀಡಬೇಕು.
– ಪಿ.ಬಾಲು. ದಿನಗೂಲಿ ನೌಕರರ ಸಂಘದ ಅಧ್ಯಕ್ಷ.

ಎಲ್ಲಾ ವಲಯಗಳಲ್ಲಿಯೂ ದಿನಗೂಲಿ ಸಿಬ್ಬಂದಿಯ ಬ್ಯಾಂಕ್‌ ಖಾತೆಗಳಿಗೆ ವೇತನ ಪಾವತಿಸಲಾಗಿದೆ. ಬೆಂಕಿ ವಾಚರ್‌ಗಳಿಗೆ ಮಾತ್ರ ಮೇಸಿŒಗಳ ಖಾತೆಗೆ ಹಣ ಪಾವತಿಸಲಾಗಿದೆ. ಸಿಬ್ಬಂದಿಗಳ ಮೊಬೈಲ್‌ ಕಿತ್ತುಕೊಂಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ದಿನಗೂಲಿ ನೌಕರನ್ನು ವಿಶ್ವಾಸದಿಂದ ಕಾಣುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.
– ಟಿ.ಹೀರಲಾಲ್‌, ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ.
 

Advertisement

Udayavani is now on Telegram. Click here to join our channel and stay updated with the latest news.

Next