ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಅಭಯಾರಣ್ಯದ ಕಾಡಂಚಿನ ಕಣ್ಣೀಯನಪುರ ಕಾಲೋನಿ ಸಮೀಪ ಆನೆದಂತ ಬಚ್ಚಿಟ್ಟಿದ್ದ ಕೇರಳ ಮೂಲದ ವ್ಯಕ್ತಿಯೋರ್ವನನ್ನು ಮಾಲು ಸಮೇತ ಚಾಮರಾಜನಗರ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಕೇರಳ ಮೂಲದ ಬಾಲನ್(56) ಬಂಧಿತ ಆರೋಪಿ. ತಮಿಳುನಾಡು ಹಾಗೂ ಕೇರಳದಲ್ಲಿ ಈತನ ಬಗ್ಗೆ ಮಾಹಿತಿ ಸಂಗ್ರಹಿಸಿದ ಚಾಮರಾಜನಗರ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಆನೆ ದಂತ ಬಚ್ಚಿಟ್ಟಿದ್ದ ಖಚಿತ ಮಾಹಿತಿ ಚಾಮರಾಜನಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‍ಐ ದೀಕ್ಷಿತ್ ಕುಮಾರ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಾಲು ಸಮೇತ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಿಐಡಿ ಕೇಂದ್ರ ಕಚೇರಿಯ ಎಡಿಜಿಪಿ ಶರತ್ ಚಂದ್ರ, ಸಿಐಡಿ ಎಸ್ಪಿ ಚಂದ್ರಕಾಂತ್ ಮಾರ್ಗದರ್ಶನ ಹಾಗೂ ಡಿವೈಎಸ್ಪಿ ಶ್ರೀನಿವಾಸ್ ರೆಡ್ಡಿ ಮೇಲ್ವಿಚಾರಣೆಯಲ್ಲಿ ಚಾಮರಾಜನಗರ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ವರ್ಗದವರಾದ ನವೀನ್ ಕುಮಾರ್, ವೀರಭದ್ರಪ್ಪ, ಮಾದೇಶ್‍ಕುಮಾರ್, ಸ್ವಾಮಿ, ಗೋವಿಂದು, ಬಸವರಾಜು ಹಾಗೂ ಚಾಲಕ ರಾಜು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.