Advertisement

ಬಾಂದಿನಿ, ಮಾಹೇಶ್ವರಿ, ಚಾಂದೇರಿ ಸೀರೆ

10:50 PM Jul 11, 2019 | mahesh |

ಮಧ್ಯಪ್ರದೇಶ-ಭಾರತದ ಹೃದಯ ಎಂದೇ ಖ್ಯಾತಿ ಹೊಂದಿದೆ. ಭಾರತದ ಭೂಪಟದ ಮಧ್ಯ ಭಾಗದಲ್ಲಿ ಇರುವ ಮಧ್ಯಪ್ರದೇಶದ ಮಹಿಳೆಯರ ಸಾಂಪ್ರದಾಯಿಕ ಉಡುಗೆ-ತೊಡುಗೆ ಹೃದಯಕ್ಕೆ ಹಾಗೂ ಕಂಗಳಿಗೆ ತಂಪನ್ನೀಯುವಂತಿದೆ! ಮಧ್ಯಪ್ರದೇಶದ ಮಹಿಳೆಯರ ಉಡುಗೆ ರಾಜಸ್ಥಾನ ಹಾಗೂ ಮಹಾರಾಷ್ಟ್ರದ ಮಹಿಳೆಯರ ಸಾಂಪ್ರದಾಯಿಕ ಉಡುಗೆಯನ್ನು ಹೋಲುವಂತಿದ್ದರೂ, ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಮೊಗಲರ ಆಡಳಿತದ ಕಾಲದ ಪ್ರಭಾವ ಇಲ್ಲಿನ ಮಹಿಳೆಯರು ತೊಡುವ ಸಾಂಪ್ರದಾಯಿಕ ಆಭರಣಗಳಲ್ಲಿ ಇನ್ನೂ ಕಾಣಬಹುದು.

Advertisement

.ಹೆಚ್ಚಿನ ಮಧ್ಯಪ್ರದೇಶದ ಮಹಿಳೆಯರು ಲೆಹಂಗಾ ಹಾಗೂ ಚೋಲಿ ಮತ್ತು ಅದರೊಂದಿಗೆ “ಲುಗ್ರಾ’ ಎಂದು ಕರೆಯಲಾಗುವ ವಿಶೇಷ ಓಢನಿ ಧರಿಸುತ್ತಾರೆ. ಲುಗ್ರಾವನ್ನು ಭುಜಗಳ ಮೇಲಿನಿಂದ ತಲೆಯ ಭಾಗವನ್ನು ಆಧರಿಸುವಂತೆ ವಿಶೇಷ ರೀತಿಯಲ್ಲಿ ಧಾರಣೆ ಮಾಡುತ್ತಾರೆ.

.”ಬಾಂದಿನಿ’ ವಸ್ತ್ರವಿನ್ಯಾಸದ ಬಟ್ಟೆ ಹಾಗೂ ಸೀರೆಗಳೂ ಮಧ್ಯಪ್ರದೇಶದ ಮಹಿಳೆಯರ ಸಾಂಪ್ರದಾಯಿಕ ಉಡುಗೆ “ಮಾಹೇಶ್ವರಿ ಸೀರೆ’ ಹಾಗೂ “ಚಾಂದೇರಿ ಸೀರೆ’ಗಳು ಮಧ್ಯಪ್ರದೇಶ ವೈಶಿಷ್ಟ್ಯವಾಗಿದ್ದು, ಇಂದು ಭಾರತದ ಎಲ್ಲೆಡೆ ಜನಪ್ರಿಯವಾಗಿವೆ.

ಬಾಂದಿನಿ ವಸ್ತ್ರವಿನ್ಯಾಸದ ಮಹತ್ವವೆಂದರೆ ಇದನ್ನು ಹೆಚ್ಚಾಗಿ ಕೈಮಗ್ಗಗಳಲ್ಲಿ ತಯಾರಿಸುತ್ತಾರೆ. ಬಟ್ಟೆಗೆ ಬಣ್ಣ ಹಚ್ಚುವ (ಡೈ ಮಾಡುವ) ಮೊದಲು ಜೇನು ಮೇಣದಿಂದ ಸಂಸ್ಕರಿಸಲಾಗುತ್ತದೆ. ಇದರಿಂದಾಗಿ ಬಟ್ಟೆ ಹೊಳಪು, ಅಧಿಕ ಅಂದ-ಚಂದ ಪಡೆಯುತ್ತದೆ.

ಉಜೈನಿ, ಇಂದೋರ್‌ ಹಾಗೂ ಮಾಂಡ್‌ಸರ್‌ ಪ್ರದೇಶಗಳಲ್ಲಿ ತಯಾರಾಗುವ ಬಾಂದಿನಿ ಉಡುಗೆಗೆ ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಬೇಡಿಕೆ ಇದ್ದು, ಇಂದು ಈ ಉಡುಗೆಗಳು ವಿದೇಶಗಳಿಗೆ ರಫ್ತಾಗುತ್ತಿವೆ.

Advertisement

ಮಧ್ಯಪ್ರದೇಶದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಾಗ ಧರಿಸುವ ಆಭರಣಗಳಿಗೆ “ಕಲೆರ್‌’ ಎಂದು ಕರೆಯುತ್ತಾರೆ. ಇದು ಬುಡಕಟ್ಟು ಜನಾಂಗದ ಮಧ್ಯಪ್ರದೇಶದ ಮಹಿಳೆಯರಲ್ಲಿ ಜನಪ್ರಿಯ ಆಭರಣ.

“ಡೈಹೆಟ್‌’ ಎಂಬ ಆಭರಣವನ್ನು ಹೆ‌ಣ್ಣು ಮಕ್ಕಳು ತಮ್ಮ ಕಾಲ್ಗಳಿಗೆ ಧರಿಸಿ, ವಸ್ತ್ರವಿನ್ಯಾಸದ ಮೆರುಗನ್ನು ಹೆಚ್ಚಿಸುತ್ತಾರೆ!

ಮಾಹೇಶ್ವರಿ ಸೀರೆ
ಈ ಸೀರೆಯ ಹುಟ್ಟು, ಬೆಳವಣಿಗೆ ಹಾಗೂ ಜನಪ್ರಿಯತೆಯ ಹಿಂದೆ ಅದ್ಭುತ ಕಥೆ ಇದೆ. 5ನೇ ಶತಮಾನದಲ್ಲಿ ನರ್ಮದಾ ತೀರದಲ್ಲಿರುವ “ಮಾಹೇಶ್ವರ’ ನಗರವು ಮಾಳವರ ರಾಜಧಾನಿಯಾಗಿತ್ತು. ರಾಜಮನೆ ತನದಿಂದ ಮಾಹೇಶ್ವರದಲ್ಲಿ ತಯಾರಾಗುವ ಸೀರೆಗಳಿಗೆ ಉತ್ತಮ ಪ್ರೋತ್ಸಾಹ ನೀಡಲಾಗುತ್ತಿತ್ತು.

ರಾಣಿ ಅಹಲ್ಯಾಬಾಯಿ ಹೋಳ್ಕರ್‌ ಈ ಸೀರೆಗಳಿಗೆ ಇನ್ನೂ ಹೆಚ್ಚಿನ ಪ್ರಾತಿನಿಧ್ಯ ನೀಡಿದರು. ಅವರು ಸೂರತ್‌ ಹಾಗೂ ಮಲ್ವಾ ಪ್ರದೇಶಗಳಿಂದ ನಿಪುಣ ವಸ್ತ್ರವಿನ್ಯಾಸಕಾರರನ್ನು ಆಹ್ವಾನಿಸಿ, ಮಾಹೇಶ್ವರದಲ್ಲಿ 9 ಯಾರ್ಡ್‌ ಸೀರೆಗಳನ್ನು ತಯಾರಿಸಲು ಪ್ರೋತ್ಸಾಹ ನೀಡಿದರು.

ರಾಣಿ ಹಲ್ಯಾಬಾಯಿ ಯವರು ಅಲ್ಲಿ ತಯಾ ರಾದ ಮೊದಲ ಮಾಹೇಶ್ವರಿ ಸೀರೆಗೆ ತಾವೇ ಸ್ವತಃ ವಸ್ತ್ರವಿನ್ಯಾಸ ಮಾಡಿ ಖ್ಯಾತಿ ಪಡೆಯುವುದರೊಂದಿಗೆ, ತಾವೇ ಸ್ವತಃ ಈ ಸಾಂಪ್ರದಾಯಿಕ ಸೀರೆ ತೊಟ್ಟು , ಅದರ ಜನಪ್ರಿಯತೆ ಹೆಚ್ಚಿಸಿದರು.

ಹೀಗೆ ರಾಜಮನೆತನದಲ್ಲಿ ಉಡುವ ಸೀರೆಯಾಗಿ ಆರಂಭವಾದ ಮಾಹೇಶ್ವರಿ ಇಂದು ಎಲ್ಲೆಡೆ ಉಪಯೋಗಿಸಲ್ಪಡುತ್ತಿದೆ! ಆರಂಭ ದಲ್ಲಿ ರೇಶಿಮೆಯಲ್ಲಿ ಮಾತ್ರ ತಯಾರಾಗುತ್ತಿದ್ದ ಈ ಸೀರೆ ಇಂದು ಹತ್ತಿಯಲ್ಲೂ ತಯಾರಾಗುತ್ತಿದೆ. ವಿದೇಶಗಳಿಗಾಗಿ ಉಣ್ಣೆಯಲ್ಲಿಯೂ ತಯಾರಾಗುತ್ತಿದೆ! ಉಡಲು ಹಗುರವಾಗಿರುವ ಈ ಸೀರೆಯ ಸೆರಗಿನ ವಿನ್ಯಾಸ ಗಾಢ ರಂಗು ಗಳಿಂದ ಕೂಡಿದ್ದು ಉದ್ದ ಹಾಗೂ ಅಡ್ಡಗೆರೆಗಳಿಂದ ಅಲಂಕೃತವಾಗಿರುತ್ತದೆ.

ಚಾಂದೇರಿ ಸೀರೆ
ಈ ಸೀರೆಯು ಆರಂಭವಾಗಿದ್ದು 13ನೇ ಶತಮಾನದಲ್ಲಿ. ಆರಂಭದಲ್ಲಿ ಮುಸ್ಲಿಂ ನೇಯ್ಗೆಕಾರರು ಈ ಸೀರೆಯನ್ನು ವಿಶೇಷ ವಿನ್ಯಾಸದಿಂದ ತಯಾರುಮಾಡಿದರು. ನಂತರ ಕೋಷ್ಠಿ ನೇಯ್ಗೆಕಾರರೂ ಇವರೊಂದಿಗೆ ಕೈಜೋಡಿಸಿದರು. ಮೊಘಲರ ಆಡಳಿತದ ಕಾಲದಲ್ಲಿ ಚಾಂದೇರಿ ಸೀರೆಯು ಜನಪ್ರಿಯತೆಯ ಉತ್ತುಂಗ ಪಡೆಯಿತು. ಇದನ್ನು ಮೂರು ಬಗೆಯಲ್ಲಿ ಇಂದು ತಯಾರಿಸುತ್ತಾರೆ. ಹಗುರವಾದ ಈ ಸೀರೆಗಳು ರೇಶಿಮೆ, ರೇಶಿ ಮತ್ತು ಹತ್ತಿ ಹಾಗೂ ಕೇವಲ ಹತ್ತಿಯಿಂದ ತಯಾರಾಗುತ್ತಿದ್ದು, ಸಾಂಪ್ರದಾಯಿಕತೆಯ ಸೊಗಡಿನೊಂದಿಗೆ ಆಧುನಿಕತೆಯ ಮೆರುಗನ್ನು ಪಡೆದು ಕೊಂಡಿದೆ.

ಬಾಂದಿನೀ ಸೀರೆ
“ಬಂಧ್‌’ ಎಂದರೆ “ಕಟ್ಟುವುದು’. ಬಾಂದಿನಿ ಸೀರೆಯನ್ನು ತಯಾರಿಸಲು ಅಧಿಕ ನಾಜೂಕತೆ ಅವಶ್ಯ. ಮಾಂಡಸರ್‌ ಭಾಗದಲ್ಲಿ ಹಾಗೂ ಇಂದೋರ್‌ನಲ್ಲಿ ತಯಾರಾಗುವ ಈ ಬಾಂದಿನೀ ಸೀರೆಗಳಿಗೆ ಎಲ್ಲೆಡೆ ಬೇಡಿಕೆ ಇದೆ. ಇಂದಿನ ಕಾಲದಲ್ಲಿ ಈ ಸಾಂಪ್ರದಾಯಿಕ ಸೀರೆಗಳಿಗೆ ಬಟಿಕ್‌ ವಿನ್ಯಾಸ ಇನ್ನೂ ಅಂದವನ್ನು ಹೆಚ್ಚಿಸುತ್ತಿದೆ.
ಕೆಲವು ಸಾವಿರಗಳಿಂದ ಆರಂಭವಾಗುವ ಈ ಬಗೆಯ ಸೀರೆಗಳಿಗೆ, ಸಿರಿವಂತಿಕೆಯಿಂದ ವಿನ್ಯಾಸ ಮಾಡಿದಾಗ ಹಲವು ಸಾವಿರದಿಂದ ಲಕ್ಷದವರೆಗೂ ಬೆಲೆ ಅಧಿಕವಾಗುವುದುಂಟು!

ಚಿನ್ನದ ಜರಿಯಿಂದ ವಿನ್ಯಾಸ ಮಾಡಿದ ಶ್ರೇಷ್ಠ ರೇಶ್ಮೆಯ ಈ ಬಗೆಬಗೆಯ ಸೀರೆಗಳು ಹಲವು ಸಾವಿರಗಳಷ್ಟು ಮೌಲ್ಯ ಹೊಂದಿದ್ದು, ಸಾಂಪ್ರದಾಯಿಕ ಉಡುಗೆಯಾಗಿ ಸಭೆಸಮಾರಂಭ ಗಳಲ್ಲಿ ಆಧುನಿಕ ಕಾಲದಲ್ಲೂ ಮಧ್ಯಪ್ರದೇಶದ ಮಹಿಳೆಯರಲ್ಲಿ ತನ್ನ ಛಾಪನ್ನು ಉಳಿಸಿ ಕೊಂಡಿವೆ.

ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next