Advertisement
ಒಣ ಬೇಸಾಯದಿಂದ ಕೈ ಸುಟ್ಟುಕೊಳ್ಳುತ್ತಿರುವ ರೈತರು ತೋಟಗಾರಿಕೆಯತ್ತ ಚಿತ್ತ ಹರಿಸಿ ಲಾಭದಾಯಕ ಬೆಳೆಗಳನ್ನು ಬೆಳೆದು ಒಂದಿಷ್ಟು ಆರ್ಥಿಕ ಸುಧಾರಣೆಯ ಯೋಜನೆ, ಕನಸುಗಳನ್ನುರೈತರು ಕಾಣುತ್ತಿದ್ದಾರೆ. ತೋಟಗಾರಿಕೆಯಲ್ಲಿ ಬಾಳೆ,ದಾಳಿಂಬೆ, ದ್ರಾಕ್ಷಿ, ಕಬ್ಬು, ಅಡಕೆ, ಮಾವು, ಚಿಕ್ಕು ಸೇರಿಕೆಲ ಅಗ್ರಪಂಕ್ತಿಯ ಬಹು ವಾರ್ಷಿಕ, ಮಿಶ್ರ ಬೆಳೆ ಬೆಳೆಯಲು ಮುಂದಾಗುತ್ತಿರುವುದು ಕಂಡುಬರುತ್ತಿದೆ. ಆದರೆ ಕಳೆದ 2 ವರ್ಷದಿಂದ ಕೋವಿಡ್, ಅತಿವೃಷ್ಟಿ ಇತರೇ ಕಾರಣದಿಂದ ತೋಟಗಾರಿಕಾಬೆಳೆಗಾರರರೂ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಸದ್ಯ ನೆಚ್ಚಿದ ಬಾಳೆ ಬೆಳೆ ಬೆಲೆ ಕುಸಿತದಿಂದ ರೈತರ ಪರಿಸ್ಥಿತಿ ಅಯೋಮಯವಾಗಿದೆ.
Related Articles
Advertisement
ತೋಟಗಾರಿಕೆ ಇಲಾಖೆ ಮಾಹಿತಿಯ ಪ್ರಕಾರ ರಾಷ್ಟ್ರೀಯ ತೋಟಗಾರಿಕಾ ಮಿಶನ್ ಮತ್ತು ರಾಷ್ಟ್ರೀಯ ಸಮಗ್ರ ಬೆಳೆ ಯೋಜನೆಯಡಿ ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕಿನ ಉಂಡೇನಹಳ್ಳಿ, ಮುನಿಯನ ತಾಂಡಾ, ಶೆಟ್ಟಿಕೇರಿ, ಸೂರಣಗಿ, ದೊಡ್ಡೂರ, ಬನ್ನಿಕೊಪ್ಪ, ವಡವಿ, ಹೊಸೂರ, ತಾರಿಕೊಪ್ಪ, ಬೆಳ್ಳಟ್ಟಿ, ಕಡಕೋಳ ಸೇರಿ ಸುಮಾರು 350 ಎಕರೆ ಪ್ರದೇಶದಲ್ಲಿ ಬಾಳೆ ಬೆಳೆಯಲಾಗಿದೆ. ಬೆಲೆ ಕುಸಿತದಿಂದಾಗಿ ಬಾಳೆ ಕಟಾವು ಮಾಡದ್ದರಿಂದ ಗೊನೆಗಳಲ್ಲಿಯೇ ಹಣ್ಣುಗಳಾಗಿ ತೋಟದ ತುಂಬೆಲ್ಲ ಕೊಳತು ಬಿದ್ದಿರುವ ದೃಶ್ಯ ಎಂತಹವರನ್ನೂ ಮಮ್ಮಲ ಮರಗಿಸುವಂತಿದೆ.
ಬಂದಿರುವ ಬಾಳೆ ಫಸಲನ್ನು ಮಾರುಕಟ್ಟೆಯಲ್ಲಿನ ಈಗಿನ ದರಕ್ಕೆ ಮಾರಾಟ ಮಾಡಿದರೆ ಕೇವಲ ಕಟಾವು ಮಾಡಿದ ಆಳಿನ ಖರ್ಚು ಸಹ ಸಿಗುವುದಿಲ್ಲ. ಇದರಿಂದ ಬೇಸತ್ತು ತೋಟಕ್ಕೆ ಹೋಗುವುದನ್ನೇ ಬಿಟ್ಟಿರುವುದಾಗಿ ಉಂಡೇನಹಳ್ಳಿ ಗ್ರಾಮದ ಎಂ.ವೈ. ಹೊನ್ನಣ್ಣವರ, ಬಸವರಾಜ ಅಂಗಡಿ, ಚಂದ್ರಶೇಖರ ಈಳಗೇರ ಸಂಕಷ್ಟ ತೋಡಿಕೊಂಡರು.
ಕೋವಿಡ್, ತಂಪಾದ ವಾತಾವರಣದಿಂದ ಬಾಳೆ ಹಣ್ಣಿನ ಮಾರಾಟ ಸಂಪೂರ್ಣ ಕಡಿಮೆಯಾಗಿದೆ. ಲಕ್ಷ್ಮೇಶ್ವರ ಮಾರುಕಟ್ಟೆಗೆ ಬೇಡಿಕೆಗಿಂತ ಹೆಚ್ಚು ಬಾಳೆ ಹಣ್ಣು ಬರುತ್ತದೆ. ತಳ್ಳುವ ಗಾಡಿಯಲ್ಲಿಯೇ ಈ ಮೊದಲು ನಿತ್ಯ 3 ಕ್ವಿಂಟಲ್ ಬಾಳೆ ಹಣ್ಣು ಮಾರುತ್ತಿದ್ದ ನಾನೀಗ ಅರ್ಧ ಕ್ವಿಂಟಲ್ ಹಣ್ಣು ಮಾರುತ್ತಿಲ್ಲ. ಒಂದೊಂದು ದಿನ ಕೂಲಿ ಹಣವೂ ಬರದ ಸ್ಥಿತಿಯಿದೆ. ಖರೀದಿಸಿದ ಹಣ್ಣು ಮಾರಾಟವಾಗದೇ ನಿತ್ಯ ಅಷ್ಟಷ್ಟೇ ಕೊಳೆಯುತ್ತದೆ. ನಿತ್ಯ ಸಂಜೆ ಸಾಲಕ್ಕೆ ಕಂತು ಕಟ್ಟುವ ಅನಿವಾರ್ಯತೆಯಿಂದಾಗಿ ಕಡಿಮೆ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿಯಿದೆ. -ಮಲ್ಲಿಕ್ ಮುಂಡರಗಿ, ತಳ್ಳು ಗಾಡಿ ವ್ಯಾಪಾರಸ್ಥ, ಲಕ್ಷ್ಮೇಶ್ವರ
ಕಳೆದ 6 ತಿಂಗಳಿಂದ ಅತಿಯಾದ ಮಳೆ, ತಂಪು ವಾತಾವರಣ, ಹೊಸ ಸೋಂಕಿನ ಭೀತಿಯಿಂದ ಹಣ್ಣಿನ ವ್ಯಾಪಾರ ಸಂಪೂರ್ಣ ಕುಸಿತ ಕಂಡಿದೆ. 40 ಸಾವಿರ ಜನಸಂಖ್ಯೆಯಪಟ್ಟಣ ನೂರಾರು ಹಳ್ಳಿಗಳ ಜನರ ವ್ಯಾಪಾರಿ ಕೇಂದ್ರವಾಗಿದೆ. ಮೊದಲು ನಮ್ಮದೊಂದು ಅಂಗಡಿಯಿಂದಲೇ ನಿತ್ಯ 15 ಕ್ವಿಂಟಲ್ ಹಣ್ಣು ಮಾರಾಟವಾಗುತ್ತಿತ್ತು. ಈಗ 5 ಕ್ವಿಂಟಲ್‌ಹಣ್ಣು ಮಾರಾಟವಾಗುತ್ತಿಲ್ಲ. ಮಾರಾಟದಜತೆಗೆ ರೈತರ ಜಮೀನು ಲಾವಣಿ ಪಡೆದು 8 ಎಕರೆ ತೋಟದಲ್ಲಿ ಬಾಳೆ ಬೆಳೆದಿದ್ದು, ಕಟಾವುಮಾಡಿ ಮಾರಾಟ ಮಾಡಿದರೆ ಖರ್ಚು ಬಾರದಂತಹ ಸ್ಥಿತಿಯಿದೆ. ಬೆಲೆ ಕುಸಿತದಿಂದ ರೈತರಷ್ಟೇ ಅಲ್ಲದೇ, ವ್ಯಾಪಾರಸ್ಥರ ಬದುಕು ಸಹ ಸಂಕಷ್ಟದಲ್ಲಿದೆ. -ಎನ್.ಎ. ಹಳದಿಪುರ, ಸಗಟು ವ್ಯಾಪಾರಸ್ಥ
ಕೋವಿಡ್ ಕಾರಣ, ತಂಪಾದ ವಾತಾವರಣದಿಂದ ನೆಗಡಿ,ಕೆಮ್ಮು ಬರುತ್ತದೆ ಎಂಬ ಕಾರಣದಿಂದಮಾರುಕಟ್ಟೆಯಲ್ಲಿ ಬಾಳೆ ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ಅಲ್ಲದೇ, ನೆರೆಯಆಂಧ್ರ ಮತ್ತು ಮಹಾರಾಷ್ಟ್ರಗಳಿಂದ ಹೆಚ್ಚಿನ ಪ್ರಮಾಣದ ಬಾಳೆ ರಾಜ್ಯದ ಮಾರುಕಟ್ಟೆಗೆ ನುಗ್ಗಿದ್ದರಿಂದ ಬೆಲೆ ಕುಸಿತವಾಗಿದೆ. ರೈತರೇ ತಾವು ಬೆಳೆದ ಹಣ್ಣು, ತರಕಾರಿಗಳನ್ನು ನೇರವಾಗಿ ಮಾರಾಟ ಮಾಡಲು ತಳ್ಳು ಗಾಡಿ ಖರೀದಿಗಾಗಿ 15 ಸಾವಿರ ರೂ. ಸಹಾಯಧನ, ಹಣ್ಣು, ತರಕಾರಿಗಳ ಸಂಸ್ಕರಣೆ ಮತ್ತು ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತದೆ. ಅಲ್ಲದೇ, ಇದೀಗ ಸರ್ಕಾರ ತೋಟಗಾರಿಕಾ ಬೆಳೆ ಹಾನಿಗೆ ಪರಿಹಾರವನ್ನೂ ಸೂಚಿಸಿದೆ. -ಸುರೇಶ ಕುಂಬಾರ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ