Advertisement
“ಬಾಳೆ ರಾಜ’ ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ, 2019ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ. ಅದು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು 30 ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿದೆ. ಅವರ ಕುಟುಂಬದ ಹಿಂದಿನ ಮೂರು ತಲೆಮಾರುಗಳದ್ದು ಬಡತನದ ಬದುಕು. ಹತ್ತನೆಯ ತರಗತಿಯ ನಂತರ ಶಿಕ್ಷಣ ಮುಂದುವರಿಸುವ ಕನಸು ಕಂಡಿದ್ದರು ರಾಮ್ ಶರಣ್ ವರ್ಮಾ. ಆದರೆ, ಕುಟುಂಬದ ಬಡತನದಿಂದಾಗಿ ಅವರು ಕೃಷಿಯಲ್ಲಿ ತೊಡಗಬೇಕಾಯಿತು. “ಬಾಳೆ ರಾಜ’ ಎಂಬ ಹೆಸರಿಗೆ ತಕ್ಕಂತೆ 150 ಎಕರೆ ವಿಸ್ತಾರದ ಜಮೀನಿನಲ್ಲಿ ಈಗ ರಾಮ್ ಶರಣ್ ವರ್ಮಾರ ಕೃಷಿ ಪ್ರಯೋಗ ನಡೆಯುತ್ತಿದೆ. ತಿಂಗಳಿಗೆ 3 ಲಕ್ಷ ರೂ.ನಿಂದ 4 ಲಕ್ಷ ರೂ. ತನಕ ಆದಾಯ ಅವರದ್ದು!
ರಾಮ ಶರಣ್ ವರ್ಮಾರ ಯಶಸ್ಸಿನ ಸುದ್ದಿ ಉತ್ತರಪ್ರದೇಶದ 50 ಜಿಲ್ಲೆಗಳ ಹಲವು ರೈತರ ಗಮನ ಸೆಳೆಯಿತು. ರೈತರು ತಂಡತಂಡವಾಗಿ ಅವರ ಜಮೀನಿಗೆ ಭೇಟಿ ನೀಡಲು ಶುರುವಿಟ್ಟರು.
Related Articles
Advertisement
ಕ್ರಾಪ್ ರೊಟೇಷನ್: ಅವರು 2012ರಲ್ಲಿ ಕೆಂಪು ಬಾಳೆಯ 1,000 ಸಸಿ ನೆಟ್ಟರು. ಅಧಿಕ ಪ್ರೋಟೀನ್ ಮತ್ತು ನಾರಿನಂಶ ಹೊಂದಿರುವ ಕೆಂಪು ಬಾಳೆಯಲ್ಲಿ ಸಕ್ಕರೆಯಂಶ ಕಡಿಮೆ. ಈ ತಳಿಯ ಅವಧಿ 18 ತಿಂಗಳು. ಇದರ ಬಾಳೆಹಣ್ಣಿನ ಸಗಟು ಮಾರಾಟ ಬೆಲೆ ಕಿಲೋಗೆ 80- 100 ರು. ಸಾಂಪ್ರದಾಯಿಕ ಬಾಳೆ ತಳಿಗಳ ಅವಧಿ 14 ತಿಂಗಳಾಗಿದ್ದು, ಫಸಲಿನ ಬೆಲೆ ಕಿಲೋಗೆ ಕೇವಲ 15 ರು. ಹಾಗಾಗಿ, ಕೆಂಬಣ್ಣದ ಬಾಳೆ ತಳಿಯ ಇಳುವರಿ ಕಡಿಮೆಯಾದರೂ ಅದರಿಂದ ಸಿಗುವ ಎಕರೆವಾರು ಆದಾಯ ಅಧಿಕ.ಬಾಳೆ ಕೃಷಿಯ ಯಶಸ್ಸಿನಿಂದ ಉತ್ಸಾಹಿತರಾದ ರಾಮ್ ಶರಣ್ ಕೃಷಿಯಲ್ಲಿ ನಾನಾ ಪ್ರಯೋಗಗಳನ್ನು ಕೈಗೊಂಡರು. ಮಣ್ಣಿನ ಫಲವತ್ತತೆ ಮತ್ತು ಬೆಳೆಗಳ ಇಳುವರಿ ಹೆಚ್ಚಳಕ್ಕೆ ಬೆಳೆ ಪರಿವರ್ತನೆ ಅಗತ್ಯವೆಂದು ಅವರು ತಿಳಿದಿದ್ದರು. ಆದ್ದರಿಂದ, ಬಾಳೆ ಬೆಳೆದ ನಂತರ, 90 ದಿನಗಳ ಅವಧಿಯಲ್ಲಿ ಆಲೂಗಡ್ಡೆ, ಬಳಿಕ 120 ದಿನಗಳ ಅವಧಿಯಲ್ಲಿ ಹೈಬ್ರಿಡ್ ಟೊಮೆಟೊ, ಅದಾದ ನಂತರ ಮುಂದಿನ 90 ದಿನಗಳಲ್ಲಿ ಮೆಂತ್ಯೆ ಬೆಳೆಯುತ್ತಾರೆ. ಇದು ಅವರು ಅನುಸರಿಸುವ ಬೆಳೆಗಳ ವರ್ತುಲ (ಕ್ರಾಪ್ ರೊಟೇಷನ್).
ಈವರೆಗೆ ಸುಮಾರು ಹತ್ತು ಲಕ್ಷ ರೈತರು ನನ್ನ ತೋಟ ನೋಡಿ ಹೋಗಿದ್ದಾರೆ. ನನಗೆ ಅದಕ್ಕಿಂತಲೂ ಹೆಚ್ಚಿನ ಹೆಮ್ಮೆಯ ಸಂಗತಿ ಏನೆಂದರೆ, ನನ್ನ ಹಳ್ಳಿಯ ಜನರು ಕೆಲಸ ಹುಡುಕಿಕೊಂಡು ಈಗ ನಗರಗಳಿಗೆ ಹೋಗುತ್ತಿಲ್ಲ. ಬದಲಾಗಿ, ನಗರಗಳ ಜನರೇ ಕೆಲಸಕ್ಕಾಗಿ ನಮ್ಮ ಹಳ್ಳಿಗೆ ಬರುತ್ತಿದ್ದಾರೆ. -ರಾಮ್ ಶರಣ್ ವರ್ಮಾ, ಪದ್ಮಶ್ರೀ ಪುರಸ್ಕೃತ ಕೃಷಿಕ * ಅಡ್ಡೂರು ಕೃಷ್ಣರಾವ್