ಪಟ್ನಾ: ದೇಶದಲ್ಲಡೆ ಹೆಚ್ಚುತ್ತಿರುವ ಮಹಿಳಾ ದೌರ್ಜ್ಯನ್ಯದ ವಿರುದ್ಧ ಹಲವರು ಧ್ವನಿ ಎತ್ತುತ್ತಿದ್ದಾರೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬುದರಿಂದ ಹಿಡಿದು ಮಹಿಳೆಯರಿಗೆ ಕಿರುಕುಳ ನೀಡುವ ವ್ಯಕ್ತಿಗಳನ್ನು ಕಠಿಣವಾಗಿ ಶಿಕ್ಷಿಸಬೇಕು, ಬಹಿರಂಗವಾಗಿ ಶಿಕ್ಷೆಗೆ ಒಳಪಡಿಸಬೇಕು ಎಂಬ ಆಗ್ರಹಗಳೂ ಕೇಳಿಬರುತ್ತಿವೆ.
ಇನ್ನೊಂದೆಡೆ ಹಲವು ರಾಜಕಾರಣಿಗಳೂ ಸಹ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯದ ವಿರುದ್ಧ ಸಂಸತ್ತಿನಲ್ಲಿ ಮತ್ತು ಇನ್ನಿತರ ವೇದಿಕೆಗಳಲ್ಲಿ ಧ್ವನಿ ಎತ್ತಿದ್ದಾರೆ. ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇದೀಗ ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತಾಗಿ ಪ್ರಬಲ ಧ್ವನಿ ಎತ್ತಿದ್ದಾರೆ.
ಈ ಕುರಿತಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರವನ್ನು ಬರೆದಿರುವ ನಿತೀಶ್ ಅವರು ದೇಶಾದ್ಯಂತ ಅಶ್ಲೀಲ ವೆಬ್ ಸೈಟ್ ಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರುವಂತೆ ಅವರು ಈ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ರೀತಿಯ ವೆಬ್ ಸೈಟ್ ಗಳು ಮತ್ತು ಇಂಟರ್ನೆಟ್ ನಲ್ಲಿ ಲಭಿಸುವ ಅಶ್ಲೀಲ ಮಾಹಿತಿಗಳು ಕೆಲವೊಂದು ವರ್ಗದ ಜನರ ಮನಸ್ಥಿತಿಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಹಾಗೂ ಈ ರೀತಿಯ ಪರಿಣಾಮಗಳು ಮಹಿಳೆಯರ ಮೇಲೆ ದೌರ್ಜನ್ಯವೆಸಗುವಂತೆ ಪ್ರೇರೇಪಿಸುತ್ತದೆ ಎಂದು ನಿತೀಶ್ ಕುಮಾರ್ ಅವರು ಪ್ರಧಾನಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಉನ್ನಾವೋ ಪ್ರಕರಣದಲ್ಲಿ ದೆಹಲಿಯ ತೀಸ್ ಹಜಾರ್ ನ್ಯಾಯಾಲಯವು ಬಿಜೆಪಿಯ ಮಾಜೀ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ದೋಷಿ ಎಂದು ಘೋಷಿಸಿ ತೀರ್ಪು ನೀಡಿರುವ ದಿನದಂದೇ ನಿತೀಶ್ ಕುಮಾರ್ ಅವರ ಈ ಆಗ್ರಹ ಹೊರಬಿದ್ದಿರುವುದು ವಿಶೇಷವಾಗಿದೆ.