Advertisement
ಪ್ರತಿಭಟನಾಕಾರರ ಒಂಭತ್ತು ಮಂದಿಯ ನಿಯೋಗ ಹಾಗೂ ಸಿಎಂ ನಡುವಿನ ಮಾತುಕತೆ ಸಂದರ್ಭದಲ್ಲಿ ‘ನಾನು ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದೇನೆ. ಏಕಾಏಕಿ ಮದ್ಯ ನಿಷೇಧ ಮಾಡುವುದು ಹೇಗೆ? ಸಮಯ ಬೇಕಿದೆ, ಮನವಿ ಕೊಟ್ಟು ಹೋಗಿ’ ಎಂಬ ಮುಖ್ಯಮಂತ್ರಿಗಳ ಸಲಹೆಗೆ ನಿಯೋಗದ ಸದಸ್ಯರು ಒಪ್ಪಲಿಲ್ಲ. ಮದ್ಯ ನಿಷೇಧದ ಬಗ್ಗೆ ಲಿಖೀತ ರೂಪದ ಭರವಸೆ ನೀಡಿ ಎಂದು ಪಟ್ಟು ಹಿಡಿದಿದ್ದರು.
Related Articles
Advertisement
ಮುಖ್ಯಮಂತ್ರಿಯಾಗಿದ್ದಾಗ ಸಾರಾಯಿ ಮತ್ತು ಲಾಟರಿ ನಿಷೇಧಿಸಿದ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿರುವ ಸಿಎಂ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಮಿತ್ರಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಅಲ್ಲದೆ ಜಿಎಸ್‌ಟಿ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಸಂಪನ್ಮೂಲ ಕ್ರೋಢೀಕರಣದ ಅವಕಾಶಗಳು ಸೀಮಿತವಾಗಿವೆ. ಈ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಉನ್ನತ ಮಟ್ಟದ ಚರ್ಚೆ ನಡೆಸುವುದು ಸಹ ಅಗತ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮದ್ಯಪಾನ ಸಂಪೂರ್ಣ ನಿಷೇಧ ವನ್ನು ಏಕಾಏಕಿ ಘೋಷಿಸಲಾಗದು. ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಲು ಸಮ ಯಾವಕಾಶದ ಅಗತ್ಯವಿದೆ ಎಂದು ಮನವೊ ಲಿಸಲು ಯತ್ನಿಸಿದರು ಎಂದು ತಿಳಿದು ಬಂದಿದೆ.
ವಿಧಾನಸೌಧ ಮುತ್ತಿಗೆ ಯತ್ನ ವಿಫಲ‘ಬಡವರ ಬದುಕು ಬೀದಿ ಪಾಲು ಮಾಡುತ್ತಿರುವ ಮದ್ಯ ಮಾರಾಟ ನಿಷೇಧಿಸಿ…. ಮದ್ಯಮಾರಾಟ ನಿಷೇಧ ಆಗುವ ತನಕ ನಿಲ್ಲೋದಿಲ್ಲ ಹೋರಾಟ’ ಇಂತಹ ಘೋಷಣೆಗಳನ್ನು ಹೊತ್ತು ಬರೋಬ್ಬರಿ 200 ಕಿಲೋಮಿಟರ್‌ಗೂ ಹೆಚ್ಚು ದೂರ ಕ್ರಮಿಸಿ ಬಂದಿದ್ದ ಸಾವಿರಾರು ಮಹಿಳೆಯರು ಬುಧವಾರ ವಿಧಾನಸೌಧ ಮುತ್ತಿಗೆ ಹಾಕುವ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದರು. ವಿಧಾನಸೌಧ ಮುತ್ತಿಗೆ ಯತ್ನ ವಿಫಲಗೊಳ್ಳುತ್ತಲೇ ಫ್ರೀಡಂಪಾರ್ಕ್ ಸಮೀಪದ ಶೇಷಾದ್ರಿ ರಸ್ತೆಯಲ್ಲಿ ಧರಣಿ ಕುಳಿತ ಮಹಿಳೆಯರು ಹೋರಾಟ ಮುಂದುವರಿಸಿದರು. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡುವ ತನಕ ಜಾಗ ಬಿಟ್ಟು ಕದಲುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ 70 ವಯೋಮಾನದ ವೃದ್ಧೆಯರಾದಿಯಾಗಿ ಸಾವಿ ರಾರು ಮಹಿಳೆಯರು ಒಕ್ಕೊರಲಿನಿಂದ ‘ಮದ್ಯಪಾನ ನಿಷೇಧ ಆಗಲೇಬೇಕು’ ಎಂಬ ಘೋಷಣೆಗಳನ್ನು ಮೊಳಗಿಸಿದರು. ಬ್ಯಾರಿಕೇಡ್‌ಗಳನ್ನು ಹಾಕಿ ತಡೆ ಹಾಕಿದ್ದ ಪೊಲೀಸರನ್ನುದ್ದೇಶಿಸಿ, ಪೊಲೀಸರೇ ದಾರಿ ಬಿಡಿ, ನಾವು ವಿಧಾನಸೌಧಕ್ಕೆ ತೆರಳುತ್ತೇವೆ ಎಂದು ಆಕ್ರೋಶದ ನುಡಿಗಳನ್ನಾಡಿದರು. ಮದ್ಯ ಮಾರಾಟದಿಂದ ಗ್ರಾಮೀಣ ಭಾಗದ ಮಹಿಳೆಯರು ಸಂಕಷ್ಟ ಅನುಭವಿಸುತ್ತಿರುವ ಪರಿಸ್ಥಿತಿಯನ್ನು ಹಾಡುಗಳ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದರು. ಬುಧವಾರ ಮಧ್ಯಾಹ್ನದ ಹೊತ್ತಿಗೆ ಪ್ರತಿಭಟನೆಯ ಕಾವು ಬಿಸಿಯೇರಿತ್ತು. ಪ್ರತಿಭಟನಾಕಾರರು ಗುಂಪು ಗುಂಪಾಗಿ ಬ್ಯಾರಿಕೇಡ್ ಬೇಧಿಸಿ ವಿಧಾನಸೌಧದ ಕಡೆ ಹೆಜ್ಜೆ ಹಾಕಲು ಯತ್ನಿಸಿದರೂ ಪ್ರಯತ್ನ ಫಲ ನೀಡಲಿಲ್ಲ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.