ಮಂಗಳೂರು: ಉಳ್ಳಾಲದ ಪಾವೂರು ಉಳಿಯ ಕುದ್ರು ಬಳಿ ಅಕ್ರಮ ಮರಳುಗಾರಿಕೆ ನಡೆಯುವ ಆರೋಪದ ಹಿನ್ನೆಲೆಯಲ್ಲಿ ಆ ಪರಿಸರದಲ್ಲಿ ವಾಸಿಸುವ ನಾಗರಿಕರು, ಪರಿಸರ ಹಾಗೂ ಇತರ ಸಂಪನ್ಮೂಲಕ್ಕೆ ತೊಂದರೆಯಾಗದಂತೆ ಹಾಗೂ ಅಕ್ರಮ ಗಣಿಗಾರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳೂ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಇಷ್ಟಾದರೂ ಅನ ಧಿಕೃತ ಗಣಿಗಾರಿಕೆ ನಡೆಯುವುದು ಕಂಡು ಬಂದರೆ ಸಂಬಂ ಧಿಸಿದ ಇಲಾಖಾ ಅ ಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಅಕ್ರಮ ಮರಳುಗಾರಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಚಿಸಿದ್ದ 6 ಸದಸ್ಯರ ತನಿಖಾ ತಂಡ ತಮ್ಮ ವರದಿ ಸಲ್ಲಿಸಿತ್ತು.
ಶಿಫಾರಸುಗಳೇನು?
ಮರಳುಗಾರಿಕೆ ಮಾಡುವ ದೋಣಿಗಳನ್ನು ಜಫ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಬೇಕು, ಮರಳು ಸಂಗ್ರಹಿಸುವ ಸಮೀಪದ ಜಟ್ಟಿಗಳಲ್ಲಿ(ಅಡ್ಯಾರು, ವಳಚ್ಚಿಲ್, ಗಾಡಿಬೆ„ಲ್ ಗ್ರಾಮದ ನದಿ ತೀರದಲ್ಲಿರುವ ಮರಳುಜಟ್ಟಿ) ಮರಳು ದಾಸ್ತಾನು ಮಾಡದಂತೆ ತಡೆಗಟ್ಟುವುದು, ಅನಧಿಕೃತ ಮರಳು ದಾಸ್ತಾನು ಕಂಡುಬಂದರೆ ಭೂಮಾಲಕರ ವಿರುದ್ಧ ತತ್‌ಕ್ಷಣ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿಯಲ್ಲಿ ರುವ ಹಿರಿಯ ಭೂವಿಜ್ಞಾನಿ ಶಿಫಾರಸು ಮಾಡಿದ್ದಾರೆ.
ಮಂಗಳೂರು ನಗರ ಉತ್ತರ ಎಸಿಪಿಯವರು ತಮ್ಮ ಶಿಫಾರಸು ನೀಡಿದ್ದು, ಅಕ್ರಮ ಮರಳುಗಾರಿಕೆ ನಡೆಸುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರಗಿಸಬೇಕು, ಗಣಿ ಇಲಾಖೆ ಜತೆಗೆ ಸಮನ್ವಯತೆಯಿಂದ ರಾತ್ರಿ ಗಸ್ತು ತಿರುಗಲು ಪೊಲೀಸ್ ಸಿಬಂದಿ ನೇಮಕ ಮಾಡಬೇಕು ಎಂದು ವರದಿ ಕೊಟ್ಟಿದ್ದಾರೆ. ಮಂಗಳೂರು ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ತಮ್ಮ ವರದಿಯಲ್ಲಿ ತಾಲೂಕು ಟಾಸ್ಕ್ಫೋರ್ಸ್ ಸಮಿತಿಯಿಂದ ಚಾಲಿತ ದಳ ನೇಮಿಸಿಕೊಂಡು ಬಾಧಿತ ಪ್ರದೇಶಕ್ಕೆ ರಾತ್ರಿ ಗಸ್ತು ತಿರುಗಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.