ಬೆಂಗಳೂರು: ಬೆಂಗಳೂರು ಸಹಕಾರ ಹಾಲು ಒಕ್ಕೂಟವು ಹಾಲು ಉತ್ಪಾದಕ ರೈತರ ಹಿತ ದೃಷ್ಟಿಯಿಂದ ಹಾಲು ಶೇಖರಣೆ, ಖರೀದಿ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಶೀಘ್ರದಲ್ಲೆ ಹೊಸ ದರ ಘೋಷಣೆ ಮಾಡುವ ಸಾಧ್ಯತೆ ಇದೆ.
ಒಂದು ಲೀಟರ್ ಹಾಲಿಗೆ 1 ರಿಂದ 3 ರೂ.ವರೆಗೂ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಇದರಿಂದಾಗಿ ಬೆಂಗಳೂರು ಡೈರಿ ವ್ಯಾಪ್ತಿಯ ಸುಮಾರು 14 ತಾಲೂಕುಗಳ ರೈತರಿಗೆ ಅನುಕೂಲವಾಗಲಿದೆ. ಈ ಸಂಬಂಧ ಡಿ.30ರಂದು ಮಧ್ಯಾಹ್ನ 1.30ಕ್ಕೆ ಬೆಂಗಳೂರು ಡೈರಿ ಸಭಾಂಗಣದಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ಅಧ್ಯಕ್ಷ ನರಸಿಂಹ ಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು “ಬಮೂಲ್’ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ರೈತರಿಗೆ 32 ರೂ. ಶೇಖರಣೆ, ಖರೀದಿ ದರ ನೀಡಲಾಗುತ್ತಿತ್ತು. ಇದರಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ 26 ರೂ. ರೈತರಿಗೆ ನೀಡಿದರೆ. ಸರ್ಕಾರ 6 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಲಿನ ಗುಣಮಟ್ಟವನ್ನು ನಿರ್ಧರಿಸಿ ಶೇಖರಣೆ ದರ ನಿರ್ಧಾರ ಮಾಡಲಾಗುತ್ತದೆ. ರೈತರು ತರುವ ಹಾಲು 3.5ರಷ್ಟು ಗುಣಮಟ್ಟ ಹೊಂದಿದ್ದರೆ, ಒಂದು ಲೀಟರ್ ಹಾಲಿಗೆ ಪ್ರಸ್ತುತ 26 ರೂ.ಗಳನ್ನು ನೀಡಲಾಗುತ್ತದೆ. ಈ ದರವನ್ನು 1ರಿಂದ 3 ರೂ.ಗೆ ಹೆಚ್ಚಳ ಮಾಡುವಂತೆ ಒತ್ತಾಯ ಕೇಳಿ ಬಂದಿದೆ. ಈ ಸಂಬಂಧ ಕಾರ್ಯಕಾರಿಣಿ ಮಂಡಳಿ ಸಭೆಯಲ್ಲಿ ಚರ್ಚೆ ನಡೆದು ಒಮ್ಮತದ ತೀರ್ಮಾನಕ್ಕೆ ಬರಲಾಗುವುದು ಎಂದು ಬೆಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ “ಉದಯವಾಣಿ’ಗೆ ತಿಳಿಸಿದ್ದಾರೆ.
ರೈತರು ಹಸುಗಳ ನಿರ್ವಹಣೆಗೆ ಮೇವಿನ ಕೊರತೆ ಉಂಟಾಗಿದೆ. ಹೀಗಾಗಿಯೇ ಅವರು ಪಶು ಆಹಾರವನ್ನು ಹೆಚ್ಚು ಬಳಕೆ ಮಾಡುತ್ತಿದ್ದು, ಪಶು ಆಹಾರದ ಬೆಲೆ ಕೂಡ ಏರಿಕೆಯಾಗಿದೆ. ಈ ದೃಷ್ಟಿಯಿಂದ ರೈತರ ಹಿತ ಕಾಪಾಡಲು ಬಮೂಲ್ ಹಾಲು ಶೇಖರಣೆ, ಖರೀದಿ ದರ ಹೆಚ್ಚಳ ಮಾಡಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ಮನವಿ ಮಾಡಲಾಗಿದೆ: ಹಾಲು ದರವನ್ನು 2 ರೂ. ಹೆಚ್ಚಳ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸರ್ಕಾರ ಹಾಲಿನ ದರ ಹೆಚ್ಚಳ ಮಾಡಿದರೆ. ಅದರ ಲಾಭವನ್ನು ರೈತರು ಪಡೆಯಲಿದ್ದಾರೆ ಎಂದು ನರಸಿಂಹಮೂರ್ತಿ ತಿಳಿಸಿದ್ದಾರೆ. ಹೊಸಕೋಟೆ, ಆನೇಕಲ್, ರಾಮನಗರ, ನೆಲಮಂಗಲ ಸೇರಿದಂತೆ ಹಲವು ತಾಲೂಕುಗಳ ರೈತರಿಗೆ ಇದರಿದಂ ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.