Advertisement

ಪ್ಲಾಸ್ಟಿಕ್‌ ಬದಲು ಬಂದಿದೆ ಬಿದಿರಿನ ತರಹೇವಾರಿ ಉತ್ಪನ್ನ

11:31 PM Sep 17, 2019 | Lakshmi GovindaRaju |

ಬೆಂಗಳೂರು: ಮಹಾಮಾರಿ ಕ್ಯಾನ್ಸರ್‌ನಿಂದ ತಾಯಿಯನ್ನು ಕಳೆದುಕೊಂಡ ಯುವಕನೊಬ್ಬ ಕ್ಯಾನ್ಸರ್‌ಗೆ ಕಾರಣವಾಗಿರುವ ಪ್ಲಾಸ್ಟಿಕ್‌ಗೆ ಬಿದಿರಿನಿಂದ ಪರ್ಯಾಯ ಉತ್ಪನ್ನ ತಯಾರಿದ್ದು, ಈತನ “ಬಿದಿರು -ಕಸದ ಬುಟ್ಟಿ’ಗೆ (ಡಸ್ಟ್‌ಬಿನ್‌) ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Advertisement

ಈ ಬಿದಿರು ಕಸದಬುಟ್ಟಿಯ ಗಾತ್ರ, ಸಾಮರ್ಥ್ಯ ಹಾಗೂ ಬೆಲೆಯು ಪ್ಲಾಸ್ಟಿಕ್‌ ಕಸದ ಬುಟ್ಟಿಯಷ್ಟೇ ಇದ್ದು, ಕನಿಷ್ಠ 2 ರಿಂದ ಗರಿಷ್ಠ 5 ವರ್ಷಗಳು ಬಳಕೆ ಮಾಡಬಹುದಾಗಿದೆ. ಕಸ ವಿಂಗಡಣೆಗೆ ಅನುಕೂಲವಾಗುವಂತೆ ವಿವಿಧ ಬಣ್ಣಗಳಲ್ಲೂ ಲಭ್ಯವಿದೆ. ಈಗಾಗಲೇ ಈ ಬಿದಿರಿನ ಕಸದ ಬುಟ್ಟಿಯನ್ನು ಮಧುಗಿರಿ ಪುರಸಭೆಯು ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಪಯೋಗಿಸುತ್ತಿದ್ದು, ಉತ್ತಮವಾಗಿವೆ ಎಂದು ಪ್ರಶಂಸೆ ನೀಡಿದೆ.

ಚಿಕ್ಕವಯಸ್ಸಿನಲ್ಲಿಯೇ ಕ್ಯಾನ್ಸರ್‌ನಿಂದ ತಾಯಿಯನ್ನು ಕಳೆದುಕೊಂಡ ಕೊಪ್ಪಳ ಮೂಲದ ಪ್ರಕಾಶ ಮೇದಾರ ಕ್ಯಾನ್ಸರ್‌ಗೆ ಹೆಚ್ಚು ಕಾರಣ ಪ್ಲಾಸ್ಟಿಕ್‌ ಎಂದು ತಿಳಿದು ಅದಕ್ಕೆ ಪರ್ಯಾಯ ಉತ್ಪನ್ನಗಳನ್ನು ಸಿದ್ಧಪಡಿಸಲು ಪಣತೊಟ್ಟು, ಇಲ್ಲಿಯವರೆಗೂ 10ಕ್ಕೂ ಹೆಚ್ಚು ಪ್ಲಾಸ್ಟಿಕ್‌ ಪರ್ಯಾಯ ವಸ್ತುಗಳನ್ನು ಸಿದ್ಧಪಡಿಸಿದ್ದಾರೆ. ಕಳೆದ ವರ್ಷ ಈ ಕಸದ ಬುಟ್ಟಿಯನ್ನು ಸಿದ್ಧಪಡಿಸಿದ್ದು, ರಾಜ್ಯದ ವಿವಿಧೆಡೆ ನಡೆಯುವ ಬಿದಿರು ಪ್ರದರ್ಶನಗಳಲ್ಲಿ ಈ ಕಸದ ಬುಟ್ಟಿ ಪ್ರದರ್ಶನಕ್ಕಿಡುತ್ತಿದ್ದಾರೆ. ಪ್ಲಾಸ್ಟಿಕ್‌ ಬುಟ್ಟಿಯಷ್ಟೇ ಸಾಮರ್ಥ್ಯ, ದರವಿರುವುದರಿಂದ ಸಾರ್ವಜನಿಕರು ಮೆಚ್ಚಿ ಕೊಂಡುಕೊಳ್ಳುತ್ತಿದ್ದಾರೆ.

ಪ್ಲಾಸ್ಟಿಕ್‌ ಕಸದಬುಟ್ಟಿ ಬದಲು ಬಿದಿರು ಬುಟ್ಟಿ ಬಳಕೆ ಕುರಿತು ಮುಖ್ಯಮಂತ್ರಿ ಕಚೇರಿ, ವಿವಿಧ ಇಲಾಖೆ, ಜಿಲ್ಲಾ ಕಚೇರಿಗಳಿಗೆ ಪತ್ರ ಬರೆದು ಪ್ಲಾಸ್ಟಿಕ್‌ ಪರ್ಯಾಯ ಬಿದಿರು ಬಳಸಿ, ಬಿದಿರು ಕರಕುಶಲ ಕರ್ಮಿಗಳನ್ನು ಉಳಿಸಿ ಎಂದು ಮನವಿ ಮಾಡಲಾ ಗುತ್ತಿದೆ. ಬಿಬಿಎಂಪಿ ಸೇರಿ ಸ್ಥಳೀಯ ಸಂಸ್ಥೆಗಳಲ್ಲಿ ಕಸ ವಿಂಗಡಣೆ ಹಾಗೂ ಸಂಗ್ರಹಕ್ಕೆ ಪ್ಲಾಸ್ಟಿಕ್‌ ಬುಟ್ಟಿ ನೀಡುತ್ತಾರೆ. ಇದರ ಬದಲು ಬಿದಿರು ಬುಟ್ಟಿ ಬಳಸಬ ಹುದು. ಅಗತ್ಯ ಗಾತ್ರ, ಮಾದರಿಯಲ್ಲಿ ಸಿದ್ಧಪಡಿಸಿ ಕೊಡಲಾಗುವುದು ಎನ್ನುತ್ತಾರೆ ಪ್ರಕಾಶ ಮೇದಾರ.

ಪ್ಲಾಸ್ಟಿಕ್‌ ಪರ್ಯಾಯಗಳು: ಒಂದೆಡೆ ಪ್ಲಾಸ್ಟಿಕ್‌ ನಿಷೇಧ ನಿಯಮ ಜಾರಿಗೊಳಿಸಿರುವ ಸರ್ಕಾರ ಪರಿಸರ ಸ್ನೇಹಿಯಾಗಿ ಎಂದು ಸಾರ್ವಜನಿಕರಿಗೆ ಹೇಳು ತ್ತಿದೆ. ಮತ್ತೂಂದೆಡೆ ಸರ್ಕಾರಿ ಕಚೇರಿಗಳಲ್ಲಿಯೇ ಪ್ಲಾಸ್ಟಿಕ್‌ ಕಸದ ಬುಟ್ಟಿ, ಮೊರ, ಕುರ್ಚಿಗಳಂತಹ ಸಾಕಷ್ಟು ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಬಳಸಲಾಗುತ್ತಿದೆ. ಇದರ ಬದಲು ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ಪರ್ಯಾಯವಾಗಿ ಬಿದಿರು ಉತ್ಪನ್ನಗಳನ್ನು ಬಳಸಬೇಕೆಂಬ ಮಾತು ಕೇಳಿಬರುತ್ತಿದೆ.

Advertisement

ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳಿಗೆ ಬದಲಾಗಿ ಬಿದಿರಿನಿಂದ ಸಿದ್ಧಪಡಿಸಿದ ಮೊರ, ಕಾಫಿ ಟೇಬಲ್‌, ಲೆಟರ್‌ ಬಾಕ್ಸ್‌, ಪೆನ್‌ ಬಾಕ್ಸ್‌, ಹೂಕುಂಡ, ಫೋಟೊ ಪ್ರೇಮ್‌, ಕಚೇರಿಯಲ್ಲಿ ಬಳಸುವ ಮಾದರಿಯ ಕುರ್ಚಿಗಳು, ಮೇಜು, ಕಚೇರಿ ಸಾಮಗ್ರಿ ಸಂಗ್ರಹಿಸುವ ಪೆಟ್ಟಿಗೆಗಳನ್ನು ಪ್ರಕಾಶ ಮೇದಾರ ಸಿದ್ಧಪಡಿಸಿದ್ದಾರೆ. ಸಂಪರ್ಕಕ್ಕೆ : 9980515559

ಲಾಲ್‌ಬಾಗ್‌ನಲ್ಲಿ ಪ್ರದರ್ಶನ: ಬ್ಯೋಂಬೊ ಸೊಸೈಟಿ ಆಫ್‌ ಇಂಡಿಯಾ ವತಿಯಿಂದ ಬುಧವಾರ ಬೆಳಗ್ಗೆ 10ಕ್ಕೆ ಬೆಂಗಳೂರಿನ ಲಾಲ್‌ಬಾಗ್‌ ಬೊಟಾನಿಕಲ್‌ ಗಾರ್ಡನ್‌ನಲ್ಲಿ ಬ್ಯಾಂಬೋ ಕಲ್ಚರಲ್‌ ಫೆಸ್ಟ್‌ ಆಯೋಜಿಸಿದೆ. ಇಲ್ಲಿ ಬ್ಯಾಂಬೋ ಫ್ಯಾಷನ್‌ ಶೋ , ಬ್ಯಾಂಬೋ ಕಾರ್ಯಾಗಾರ, ಬ್ಯಾಂಬೋ ಫುಡ್‌ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜತೆಗೆ ಬಿದಿರಿನಿಂದ ತಯಾರಿಸಿದ ಅತ್ಯಾಕರ್ಷಕವಾದ ಸಾಮಗ್ರಿಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕಿಡಲಾಗುತ್ತಿದೆ.

ಪ್ಲಾಸ್ಟಿಕ್‌ ಬದಲು ಬಿದಿರು ಬುಟ್ಟಿ ಬಳಸಲು ಕಳೆದ 5 ತಿಂಗಳ ಹಿಂದೆ ಮುಖ್ಯಮಂತ್ರಿ ಗಳಿಗೆ ಪತ್ರ ಬರೆದಿದ್ದು, ಅವರು ಆ ಪತ್ರವನ್ನು ಮುಂದಿನ ಕ್ರಮಕ್ಕೆ ಅರಣ್ಯ ಇಲಾಖೆಗೆ ವರ್ಗಾಯಿಸಿದ್ದಾರೆ. ಆದರೆ, ಅರಣ್ಯ ಇಲಾಖೆಯಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
-ಪ್ರಕಾಶ ಮೇದಾರ, ಬಿದಿರು ಕರಕುಶಲ ಕಲಾವಿದ

* ಜಯಪ್ರಕಾಶ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next