ಬಳ್ಳಾರಿ: ಬೇಡಿಕೆ ಹೆಚ್ಚಿರುವ ಸಿಂಜೆಂಟಾ ಕಂಪನಿಯ 5531 ಮೆಣಸಿನಕಾಯಿ ಬೀಜವನ್ನು ವಿತರಿಸುವಂತೆ ನಗರದ ತೋಟಗಾರಿಕೆ ಇಲಾಖೆ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರೆ, ಮಹಿಳೆಯರು ಕಚೇರಿಗೆ ನುಗ್ಗಿದರು. ಮೆಣಸಿನಕಾಯಿ 5531 ಬಿತ್ತನೆ ಬೀಜಕ್ಕಾಗಿ ರೈತರು ಕಳೆದ ಹಲವು ದಿನಗಳಿಂದ ತೋಟಗಾರಿಕೆ ಇಲಾಖೆಗೆ ಪರದಾಡುತ್ತಿದ್ದಾರೆ.
ಕಳೆದ ಶನಿವಾರ ಬೀಜವನ್ನು ವಿತರಿಸಲು ಮುಂದಾಗಿದ್ದ ಡಿಸ್ಟ್ರಿಬ್ಯೂಟರ್‌ಗಳು ರೈತರು ಮುಗಿಬಿದ್ದು ಗೊಂದಲ ಸೃಷ್ಟಿಯಾಗಿದೆ ಎಂದು ಸ್ಥಗಿತಗೊಳಿಸಿದರು. ಸೋಮವಾರ ವಿತರಿಸಲು ಪುನಃ ಮುಂದಾದಾಗ ಮಹಿಳೆಯರಿಗೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಒಂದಷ್ಟು ಜನರಿಗೆ ಬೀಜ ಲಭಿಸಿತು. ಆದರೆ, ಸೋಮವಾರ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ ಎಂದು ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ನೂರಾರು ಮಹಿಳೆಯರು ಆಗಮಿಸಿದ್ದರು.
ಬೆಳಗ್ಗೆಯಿಂದಲೇ ಸರತಿ ಸಾಲಲ್ಲಿ ನಿಂತಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಕಚೇರಿಗೆ ಬಂದ ಅಧಿ ಕಾರಿಗಳನ್ನು ಕೆಲ ರೈತ ಸಂಘಟನೆಗಳ ಮುಖಂಡರು ಪ್ರಶ್ನಿಸಿದರು. ಈ ವೇಳೆ ಅಧಿ ಕಾರಿಗಳು ಡಿಸ್ಟ್ರಿಬ್ಯೂಟರ್ ಸಿದ್ದಪ್ಪ ಅವರನ್ನೇ ಸ್ಥಳಕ್ಕೆ ಕರೆಸಿದರು. ಆಗ ಸಿದ್ದಪ್ಪ, ತಮ್ಮ ಅಂಗಡಿಗೆ ವಿವಿಧ ತಳಿಗಳು ಸೇರಿ ಈವರೆಗೆ ಒಟ್ಟು 3200 ಕೆಜಿ ಬೀಜ ಬಂದಿದ್ದು, ಈ ಪೈಕಿ ಅ ಧಿಕಾರಿಗಳ ಸಮ್ಮುಖದಲ್ಲೇ ಸೋಮವಾರ 120 ಕೆಜಿ, ಅದಕ್ಕೂ ಮುನ್ನ 54 ಕೆಜಿ ಬೀಜವನ್ನು ರೈತರಿಗೆ ಹಂಚಿಕೆ ಮಾಡಲಾಗಿದೆ. ಕಳೆದ ಏಪ್ರಿಲ್ ತಿಂಗಳಿಂದ ಈವರೆಗೆ ಡೀಲರ್ ಗಳಿಗೆ 5531 ತಳಿಯ 1220 ಕೆಜಿ ಮತ್ತು 2043 ತಳಿಯ 894 ಕೆಜಿ ಬೀಜವನ್ನು ವಿತರಿಸಲಾಗಿದೆ ಎಂದು ವಿವರಿಸಿದರು.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೈತರು, ಅದೆಲ್ಲ ನಮಗೆ ಬೇಕಿಲ್ಲ. ನಮಗೆ ಬೀಜ ಬೇಕು. ಡೀಲರ್‌ಗಳು ನಮಗೆ ಕೊಡುತ್ತಿಲ್ಲ ಎಂದು ಕೂಗತೊಡಗಿದರು. ಸ್ಥಳದಲ್ಲಿದ್ದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಪಿ.ಬೋಗಿ, ತಹಶೀಲ್ದಾರ್ ರೆಹಾನ್ ಪಾಷಾ ಇತರರು, ಸಿಂಜೆಂಟ್ ಕಂಪನಿ ಅಧಿ ಕಾರಿಗಳೊಂದಿಗೆ ಮಾತನಾಡಿ, ಪುನಃ ಸ್ಟಾಕ್ ಕಳುಹಿಸುವಂತೆ ಕೋರಿದರು.
ಮುಂದಿನ ಸೋಮವಾರ ಬೀಜವನ್ನು ವಿತರಿಸುವುದಾಗಿ ತಿಳಿಸಿದರು. ಜತೆಗೆ ಡೀಲರ್‌ಗಳ ಬಳಿ ಸ್ಟಾಕ್ ಇರುವ ಬಗ್ಗೆ ತನಿಖೆ ನಡೆಸಲಾವುದಾಗಿ ರೈತರಿಗೆ ಭರವಸೆ ನೀಡಲಾಯಿತು. ಅಧಿಕಾರಿಗಳ ಮಾತುಗಳಿಗೂ ಬೆಲೆ ಕೊಡದ ರೈತರು, ಮಹಿಳೆಯರು ಮಧ್ಯಾಹ್ನ 1.30 ಗಂಟೆಯಾದರೂ ಕಚೇರಿ ಆವರಣದಿಂದ ಹಿಂತಿರುಗಲಿಲ್ಲ. ಅ ಧಿಕಾರಿಗಳು ಆಗ, ಈಗ ಬೀಜ ವಿತರಿಸಲಿದ್ದಾರೆ ಎಂದು ಕಾದು ಕುಳಿತಿದ್ದ ರೈತರು, ಕಚೇರಿಯ ಬಾಗಿಲು ಯಾರೇ ತೆಗೆದರೂ ಬೀಜ ವಿತರಣೆಯೆಂದೇ ಭಾವಿಸಿ ಕಚೇರಿಗೆ ನುಗ್ಗುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಭತ್ತದ ಬೆಳೆಯೂ ಸಮರ್ಪಕವಾಗಿ ಕೈಗೆಟುಕುತ್ತಿಲ್ಲ. ಏನೋ ಒಂದಷ್ಟು ಇಳುವರಿ ಚೆನ್ನಾಗಿ ಬರಲಿದೆ ಎಂದು ಮೆಣಸಿನಕಾಯಿ ಬೆಳೆಯಲೆಂದು ಬೀಜಕ್ಕಾಗಿ ಕಚೇರಿಗೆ ಬಂದರೆ ಅಧಿಕಾರಿಗಳು ಬೀಜವನ್ನೇ ನೀಡುತ್ತಿಲ್ಲ.
ಏನು ಮಾಡಬೇಕೋ ಗೊತ್ತಾಗುತ್ತಿಲ್ಲ ಎಂದು ತಾಲೂಕಿನ ಬೊಬ್ಬುಕುಂಟೆ ಗ್ರಾಮದ ಮಹಿಳೆ ಮಂಗಮ್ಮ ಬೇಸರ ವ್ಯಕ್ತಪಡಿಸಿದರು. ಮಧ್ಯಾಹ್ನ 2 ಗಂಟೆ ನಂತರ ರೈತರು ನಿಧಾನವಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದರು.