ಬಳ್ಳಾರಿ: ನದಾಫ್/ಪಿಂಜಾರ್ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ರಚನೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ನದಾಫ್/ ಪಿಂಜಾರ್ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.
ಪಿಂಜಾರ್/ನದಾಪ್ ಸಮುದಾಯವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದೆ. ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತ್ಯೇಕ ನಿಗಮ ಮಂಡಳಿ ರಚನೆ ಮಾಡುವುದು ಅತ್ಯವಶ್ಯಕವಾಗಿದೆ. ಸಮುದಾಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ರಚಿಸುವಂತೆ ಸಂಘದಿಂದ ಹಲವು ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಡಿಕೆಯೂ ಈಡೇರುತ್ತಿಲ್ಲ. ಮೇಲಾಗಿ ಈಚೆಗೆ ಸಂಘದಿಂದ ರಾಜ್ಯದ ಎಲ್ಲ ತಹಶೀಲ್ದಾರ್ ಮತ್ತು ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ಲಭಿಸಿಲ್ಲ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ : ಬುಡಕಟ್ಟು ಹಿನ್ನೆಲೆ ಜಾತಿ ಎಸ್‌ಸಿ-ಎಸ್‌ಟಿ ಮೀಸಲಿಗೆ ಅರ್ಹ: ಪ್ರೊ| ಕೆ.ಎಂ. ಮೈತ್ರಿ
ಸಮುದಾಯದ ನ್ಯಾಯಯುತವಾದ ಪ್ರತ್ಯೇಕ ನಿಗಮ ಮಂಡಳಿ ರಚನೆ ಬೇಡಿಕೆಯನ್ನು ಕೂಡಲೇ ಇತ್ಯರ್ಥ ಪಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಮತ್ತು ಉಗ್ರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ, ಪಾಲಿಕೆ ಮಾಜಿ ಉಪಮೇಯರ್ ಬೆಣಕಲ್ ಬಸವರಾಜ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಧರಣಿಗೆ ಬೆಂಬಲ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಡಿಸಿ ಕಚೇರಿ ಎದುರು ಕೆಲಹೊತ್ತು ಧರಣಿ ನಡೆಸಿದರು. ಬಳಿಕ ಜಿಲ್ಲಾಡಳಿತದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಮುದಾಯದ ಮುಖಂಡರಾದ ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್‌ಖಾನ್, ಇಬ್ರಾಹಿಂ, ದಾದಾ ಖಲಂದರ್, ಸಂಘದ ಜಿಲ್ಲಾಧ್ಯಕ್ಷ ಶಾಷಾಬ್, ಪ್ರಧಾನ ಕಾರ್ಯದರ್ಶಿ ಅಲ್ಲಾಬಕಾಶ್, ಖಜಾಂಚಿ ಮೌಲಾ ಸೇರಿ ಸಮುದಾಯದ ನೂರಾರು ಜನರು ಇದ್ದರು.
ಇದನ್ನೂ ಓದಿ : ‘ಪಠಾಣ್’ ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರ ಮೇಲೆ ಹಲ್ಲೆ! ನಡೆದಿದ್ದೇನು?