ಹರಪನಹಳ್ಳಿ: ಮಲೆನಾಡಿನ ಘಟ್ಟಪ್ರದೇಶ ಸೇರಿದಂತೆ ವಿವಿಧೆಡೆ ನಿರಂತರವಾಗಿ ಸುರಿದ ಭಾರೀ ಮಳೆಯಿಂದಾಗಿ ತಾಲೂಕಿನ ಸರಹದ್ದಿನಲ್ಲಿ ಹಾದುಹೋಗಿರುವ ತುಂಗಭದ್ರಾ ನದಿಯಲ್ಲಿ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಸೋಮವಾರ ಉಪವಿಭಾಗಾಧಿ ಕಾರಿ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹಲುವಾಗಲು ಗ್ರಾಮದ ನದಿಪಾತ್ರದ ಜಮೀನುಗಳಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಎಚ್.ಜಿ ಅವರು, ಜಮೀನಿನಲ್ಲಿ ಬೆಳೆಯಲಾಗಿದ್ದ ಚೆಂಡುಹೂವು, ಹೈಬ್ರಿàಡ್ ಜೋಳ, ಮೆಕ್ಕೆಜೋಳ ಹಾಗೂ ಕಬ್ಬು ಸೇರಿದಂತೆ ಬಿತ್ತನೆಯಾಗಿರುವ ಫಸಲಿನಲ್ಲಿ ನದಿ ನೆರೆಯ ನೀರು ನುಗ್ಗಿದೆ.
ಮೂರ್ನಾಲ್ಕು ದಿನಗಳಿಂದಲೂ ಬೆಳೆಯಲ್ಲಿ ನೀರು ನಿಂತಿರುವ ಪರಿಣಾಮ ಬೆಳೆಗಳೆಲ್ಲ ಕೊಳೆಯುವ ಭೀತಿ ಎದುರಾಗಿದೆ. ನಲವತ್ತು-ಐವತ್ತು ಸಾವಿರ ರೂ. ಖರ್ಚುಮಾಡಿ ಜತನದಿಂದ ಬೆಳೆಯಲಾಗಿದ್ದ ಫಸಲು ನೀರಿನಲ್ಲಿ ಮುಳುಗಡೆಯಾಗಿದೆ. ಬಿತ್ತನೆಬೀಜ, ರಸಗೊಬ್ಬರ, ಆಳಿನ ಕೂಲಿ ಸೇರಿದಂತೆ ಬೇಸಾಯಕ್ಕಾಗಿ ಸಾಲಶೂಲ ಮಾಡಿ, ಬಿತ್ತನೆ ಮಾಡಿದ್ದೇವೆ. ಆದರೆ ಈಗ ಪ್ರವಾಹದಲ್ಲಿ ಬೆಳೆ ಕೊಳೆತುಹೋಗುತ್ತಿವೆ.
ಹೀಗಾಗಿ ರೈತರ ಬದುಕು ಪ್ರತಿವರ್ಷವೂ ಹೀಗೆ, ತುಂಗಭದ್ರೆ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದೆ. ಕೂಡಲೇ ವೈಜ್ಞಾನಿಕ ಮಾರ್ಗಸೂಚಿ ಅನ್ವಯ ಪರಿಹಾರ ನೀಡುವ ಮೂಲಕ ಹಾನಿಗೊಳಗಾದ ರೈತ ಕುಟುಂಬಗಳಿಗೆ ನೆರವಾಗಬೇಕು ಎಂದು ರೈತರು ಮನವಿ ಮಾಡಿದರು. ನಿಟ್ಟೂರು, ಕಡತಿ, ವಟ್ಲಹಳ್ಳಿ ಸೇರಿದಂತೆ ವಿವಿಧೆಡೆ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ನೇತೃತ್ವದ ವಿವಿಧ ಅಧಿ ಕಾರಿಗಳ ತಂಡ ಭೇಟಿ ನೀಡಿ, ಹಾನಿಗೊಳಗಾದ ಬೆಳೆ ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಸ್ಥಳದಲ್ಲಿಯೇ ಇದ್ದ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗೆ ಬೆಳೆಹಾನಿ ಬಗ್ಗೆ ಪಾರದರ್ಶಕವಾಗಿ ಸಮೀಕ್ಷೆ ನಡೆಸುವ ಮೂಲಕ ನಿಯಮಾನುಸಾರ ಪರಿಹಾರಕ್ಕಾಗಿ ಸೂಕ್ತ ದಾಖಲೆಗಳೊಂದಿಗೆ ಕೂಡಲೇ ಶಿಫಾರಸು ಮಾಡುವಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಜತೆಗೆ, ಜಮೀನುಗಳಲ್ಲಿ ನೀರು ನುಗ್ಗಿದ ಪರಿಣಾಮ, ಹಾನಿಯಾದ ರೈತರು ಸಹ, ಜಮೀನಿನ ಪಹಣಿ ಹಾಗೂ ಫೋಟೊ ಸೇರಿದಂತೆ ಅ ಧಿಕಾರಿಗಳು ಕೇಳುವ ಸೂಕ್ತ ದಾಖಲೆ ಒದಗಿಸಿ, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಸಂತ್ರಸ್ತ ರೈತರಿಗೆ ಸೂಚಿಸಿದ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ ಅವರು, ಪ್ರಕೃತಿ ವಿಕೋಪ ಪರಿಹಾರ ನಿಯಮಾನುಸಾರ ಪರಿಹಾರ ವಿತರಣೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮುಂಗಾರು ಹಂಗಾಮಿನ ಆಗಸ್ಟ್ ತಿಂಗಳಲ್ಲಿಯೂ ಮಳೆ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳವಾಗುವ ಸಂಭವ ಇದ್ದು, ನದಿಯಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಬಹುದು. ಹೀಗಾಗಿ ನದಿಪಾತ್ರದ ಜನರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಹಾಗೂ ಜಾಗೃತಿವಹಿಸುವಂತೆ ರೈತರಿಗೆ ಸೂಚಿಸಿದರು.
ಜತೆಗೆ, ಗ್ರಾಮಲೆಕ್ಕಾಧಿಕಾರಿಗಳು ಕಂದಾಯ ನಿರೀಕ್ಷಕರು ತಮ್ಮ ಕೇಂದ್ರ ಸ್ಥಳದಲ್ಲಿಯೇ ಹಾಜರಿದ್ದು, ಇನ್ನೂ ಎರಡು ತಿಂಗಳು ಕಾಲ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸಜ್ಜಾಗಿರಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ನಂದೀಶ್, ತೆಲಿಗಿ ಹೋಬಳಿಯ ಉಪತಹಶೀಲ್ದಾರ್ ಮಂಜುಳಾ, ಕೃಷಿ ಇಲಾಖೆ ಅಧಿ ಕಾರಿ ಬೀರಪ್ಪ ಹಾಗೂ ಅಬ್ದುಲ್ ಸಾಲಿಯಾನ್, ತೋಟಗಾರಿಕೆ ಇಲಾಖೆಯ ರವೀಂದ್ರ ಹಿರೇಮಠ, ತೆಲಿಗಿ ಹೋಬಳಿ ಕಂದಾಯ ನಿರೀಕ್ಷಕ ದರಸಪ್ಪನವರ ರಾಜಪ್ಪ, ಹಲುವಾಗಲು ಗ್ರಾಮ ಪಂಚಾಯಿತಿ ಅಧ್ಯಕ್ಷ ದ್ಯಾಮಪ್ಪ ಹಾಗೂ ನಿಟ್ಟೂರು, ಹಲುವಾಗಲು ವೃತ್ತದ ಗ್ರಾಮಲೆಕ್ಕಾ ಧಿಕಾರಿಗಳು ಹಾಜರಿದ್ದರು.