ಬಳ್ಳಾರಿ: ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಐವರು ಬಾಣಂತಿಯರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ರವಿವಾರ(ಡಿ8)ಘೋಷಿಸಿದ್ದಾರೆ.
ಸಂಡೂರು ಪಟ್ಟಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಮಾತನಾಡಿದ ಸಿಎಂ ”ಬಾಣಂತಿಯರ ಸಾವಿನ ಕುರಿತು ಈಗಾಗಲೆ ಸಭೆ ಮಾಡಿದ್ದೇನೆ. ಸಾವಿಗೆ ಕಳಪೆ ಔಷಧ ಎಂದು ಗೊತ್ತಾಗಿದೆ. ಈಗಾಗಲೇ ಎರಡು ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದೆ. ಆದರೆ, ಮೃತರ ಕುಟುಂಬಸ್ಥರು ಇದು ಸಾಲಲ್ಲ ಎಂದು ಬೇಡಿಕೆ ಇಟ್ಟಿರುವುದರಿಂದ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದೇನೆ’ ಎಂದು ತಿಳಿಸಿದರು.
ನಮ್ಮ ಸರ್ಕಾರ ಬಡವರ, ದಲಿತರ, ಅಲ್ಪಸಂಖ್ಯಾಕರ, ಮಹಿಳೆಯರ ಪರ ಇರಲಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ತಿಳಿಸಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಂಸದ ಈ.ತುಕಾರಾಂ, ಮತ್ತವರ ಪತ್ನಿ, ನೂತನ ಶಾಸಕಿ ಅನ್ನಪೂರ್ಣ ದಂಪತಿ ಸನ್ಮಾನಿಸಿ ಅಭಿನಂದಿಸಿದರು.
ಶಾಸಕಿಯಾದ 15 ದಿನದಲ್ಲೇ ಅನ್ನಪೂರ್ಣ ಅವರು ಕ್ರೀಯಾಶೀಲವಾಗಿ ಕೆಲಸ ಆರಂಭಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೊಗಳಿದರು.