ಬಳ್ಳಾರಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸಿ ದೇಶಾದ್ಯಂತ ಕರೆ ನೀಡಲಾಗಿದ್ದ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಜಿಲ್ಲೆಯಲ್ಲೂ ವಿವಿಧೆಡೆ ವಿವಿಧ ರೈತ ಸಂಘಟನೆಗಳ ರೈತರು ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಸಾಂಕೇತಿಕವಾಗಿ ಕೆಲಹೊತ್ತು ಪ್ರತಿಭಟನೆ ನಡೆಸಿದರು.
ದೆಹಲಿ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ರಾಜ್ಯ ರೈತ ಸಂಘ ಹಸಿರುಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ರೈತ ದಲಿತ, ಕಾರ್ಮಿಕ ಸಂಘಟನೆಗಳ ಸಂಯುಕ್ತ ಐಕ್ಯ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರು ನಗರದ ಬೈಪಾಸ್ ರಸ್ತೆ ಬಳಿ ರಾಜ್ಯ ಹೆದ್ದಾರಿ,
ಜಿಲ್ಲೆಯ ಕುರುಗೋಡು ತಾಲೂಕು ಕೋಳೂರು ಕ್ರಾಸ್ ಬಳಿ ರಾಜ್ಯ ಹೆದ್ದಾರಿ, ಹೊಸಪೇಟೆಯ ಅನಂತಶಯನ ಗುಡಿ ಬಳಿಯ ರಾಜ್ಯ ಹೆದ್ದಾರಿ,
ಹೊಸಪೇಟೆ ತಾಲೂಕು ಡಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ನ್ನು ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಈ ವೇಳೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಬೈಪಾಸ್ ರಸ್ತೆ ಬಳಿ ನಿಗದಿತ ಸಮಯಕ್ಕೆ ಮುಂಚೆಯೇ ರಾಜ್ಯ ಹೆದ್ದಾರಿಯಲ್ಲಿ ನೂರಾರು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದ ರೈತರು, ಕೆಲವೇ ನಿಮಿಷಗಳಲ್ಲಿ ಮುಗಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ, ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ರೈತರು ಕಳೆದ ಎರಡು ತಿಂಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೊರೆಯುವ ಚಳಿ, ಬಿಸಲನ್ನು ಲೆಕ್ಕಿಸದೇ ಹೋರಾಟ ನಡೆಸುತ್ತಿರುವ ರೈತರಿಗೆ ಕೇಂದ್ರ ಸರ್ಕಾರದಿಂದ ಈವರೆಗೂ ಯಾವುದೇ ಸ್ಪಂದನೆ ಲಭಿಸುತ್ತಿಲ್ಲ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ರೈತ ವಿರೋ ಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರವಾಗಿ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು
ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸಂಗನಕಲ್ಲು ಕೃಷ್ಣ, ಶಿವಶಂಕರಗೌಡ, ಹೊನ್ನೂರಸ್ವಾಬ್, ಗಂಗಾ ಧಾರವಾಡ್ಕರ್, ಎರ್ರಿಸ್ವಾಮಿ, ವಿರೂಪಾಕ್ಷಿ ಸೇರಿದಂತೆ ಇನ್ನಿತರರು ಇದ್ದರು.
ಓದಿ :
ಕಾಯ್ದೆ ತಿದ್ದುಪಡಿ ವಿರೋಧಿಸಿ ಹೆದ್ದಾರಿ ತಡೆ: ರೈತರು-ಕರವೇ ಕಾರ್ಯಕರ್ತರ ಬಂಧನ