Advertisement

ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಕೈಬಿಡಿ

01:14 PM Feb 03, 2021 | Team Udayavani |

ಬಳ್ಳಾರಿ: ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಣಯವನ್ನು ಕೈಬಿಡಬೇಕು. ಲಾಭಾಂಶವನ್ನು ಶೇ.20ಕ್ಕೆ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದಿಂದ ಮಂಗಳವಾರ ಪ್ರತಿಭಟಿಸಲಾಯಿತು.

Advertisement

ರಾಜ್ಯ ಸರ್ಕಾರ ಆನ್‌ಲೈನ್‌ ಮೂಲಕ ಮದ್ಯವನ್ನು ಮಾರಾಟಕ್ಕೆ ಮುಂದಾಗುತ್ತಿದೆ. ಈ ಕುರಿತು ಪ್ರಸ್ತಾವನೆ ಸರ್ಕಾರದ ಮುಂದಿದೆ. ಇದರಿಂದ ಮದ್ಯದ ಅಂಗಡಿಗಳಿಗೆ ನಷ್ಟವಾಗಲಿದೆ. ಹೀಗಾಗಿ ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಕೂಡಲೇ ಕೈಬಿಡಬೇಕು. ಆನ್‌ಲೈನ್‌ನಲ್ಲಿ ಮದ್ಯ ಮಾರಾಟದಿಂದ ಕಾಲಮಿತಿ ಇಲ್ಲದೇ ಅಪಾಯ ಮತ್ತು ಅಕ್ರಮ ಮಾರಾಟದ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಕೂಡಲೇ ಆನ್‌ಲೈನ್‌ ಮದ್ಯ ಮಾರಾಟ ಪ್ರಸ್ತಾವನೆ ಕೈಬಿಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಈ ಮೊದಲು ಮದ್ಯ ಮಾರಾಟದಲ್ಲಿ ಶೇ. 20ರಷ್ಟು ಲಾಭಾಂಶ ಲಭಿಸುತ್ತಿತ್ತು. ಆದರೆ, ಈ ಹಿಂದೆ ಕಟ್ಟಾ ಸುಬ್ರಹ್ಮಣ್ಯಂ ನಾಯ್ಡು ಸಚಿವರಾಗಿದ್ದಾಗ ಎಂಎಸ್‌ಐಎಲ್‌ ಅಂಗಡಿಗಳನ್ನು ತೆರೆದು ಖಾಸಗಿ ಮದ್ಯದ ಅಂಗಡಿಗಳಿಗೆ ಲಭಿಸುತ್ತಿದ್ದ ಶೇ. 20ರ ಲಾಭಾಂಶವನ್ನು ಶೇ.10ಕ್ಕೆ ಕಡಿತಗೊಳಿಸಲಾಯಿತು. ಇದರಿಂದ ನಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಹಿಂದಿನಂತೆ ಲಾಭಾಂಶವನ್ನು ಶೇ.20ಕ್ಕೆ ಹೆಚ್ಚಿಸಬೇಕು. ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಬಳಿ ಲಾಡ್ಜ್ ಎಂದು ತೋರಿಸಿ ಲಿಕ್ಕರ್‌ ಶಾಪ್‌ ತೆರೆಯಲು ಅವಕಾಶ ಕಲ್ಪಿಸಿದೆ. ಈ ಆದೇಶ ರದ್ದುಗೊಳಿಸಬೇಕು. ಕಾರಣ ಸುಪ್ರೀಂಕೋರ್ಟ್‌ ರಾಷೀಯ ಹೆದ್ದಾರಿ ಬಳಿ ಲಿಕ್ಕರ್‌ ಶಾಪ್‌ಗ್ಳು ಇರುವುದು ಸರಿಯಲ್ಲ ಎಂದು ಹೇಳಿದೆ. ಸಿ.ಎಲ್‌-7 ಸನ್ನದುಗಳನ್ನು 2018ರ ಪೂರ್ವದಲ್ಲಿ ಇದ್ದ ಪ್ರವಾಸೋದ್ಯಮ ನೀತಿ ಪ್ರಕಾರ ಮಾತ್ರ ನೀಡಬೇಕು. ಹೊಸದಾಗಿ ಎಂ.ಎಸ್‌.ಐ.ಎಲ್‌ ಗೆ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು. ಕೊರೊನಾದಿಂದ ಸಾಕಷ್ಟು ನಷ್ಟವಾಗಿದೆ. ಹೀಗಿದ್ದರೂ ಹೆಚ್ಚುವರಿ ಅಬಕಾರಿ ಶುಲ್ಕ ವಿ ಧಿಸಿದ್ದು ಇದನ್ನು ಹಿಂದಕ್ಕೆ ಪಡೆಯಬೇಕು. 2009ರ ಪೂರ್ವದಲ್ಲಿ ಶೇ. 20 ಲಾಭಾಂಶ ನೀಡುತ್ತಿತ್ತು. ಆದರೆ ಅದನ್ನ ಶೇ. 10ಕ್ಕಿಳಿಸಿದೆ. ಈಗ ಖರ್ಚುವೆಚ್ಚ ಹೆಚ್ಚಿದ್ದು ಲಾಭ ಕಡಿಮೆಯಾಗಿದೆ. ಅದಕ್ಕಾಗಿ ಲಾಭಾಂಶವನ್ನು ಶೇ.20ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಉಪಾಧ್ಯಕ್ಷ ಕೆ.ಪಿ. ರಾಮಿರೆಡ್ಡಿ, ಕಾರ್ಯದರ್ಶಿ ಸಿ.ಎಚ್‌. ಬಸವಲಿಂಗಾರೆಡ್ಡಿ, ಸಹ ಕಾರ್ಯದರ್ಶಿ ಪಿ. ಲಕ್ಷ್ಮೀ ರೆಡ್ಡಿ, ಸದಸ್ಯರಾದ ಎ. ಗುರುಮೂರ್ತಿ, ಜಿ. ಸತೀಶ್‌ಶೆಟ್ಟಿ, ಎಸ್‌.ಮಾರುತಿ, ಶಾಂತರಾಮ್‌ ಶೆಟ್ಟಿ, ಗುರುಪ್ರಸಾದ್‌, ಶ್ರೀಮನ್ನಾನಾರಯಣ, ಪ್ರಸಾದ್‌, ವಿಜಯಕುಮಾರ್‌, ಮಂಜುನಾಥ್‌, ಆಂಜಿನೇಯ ಇದ್ದರು.

ಓದಿ : ಗುಡ್‌ ನ್ಯೂಸ್‌ ಏನೂ ಇಲ್ವಾ ?

Advertisement
Advertisement

Udayavani is now on Telegram. Click here to join our channel and stay updated with the latest news.

Next