Advertisement

ಖಾಸಗಿ ಕನ್ನಡ ಶಾಲೆಗಳಿಗೆ ವೇತನಾನುದಾನ ನೀಡಿ

04:43 PM Jan 29, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ 1995ರಿಂದ 2015ರೊಳಗೆ ನೋಂದಣಿಯಾದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರಿಗೆ ವೇತನಾನುದಾನ ನೀಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಜ.31ರಂದು ಬೆಂಗಳೂರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಬೃಹತ್‌ ಸಭೆ ಏರ್ಪಡಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವಿಭಾಗೀಯ ಸಂಚಾಲಕ ಸುನೀಲ ಹುಡಗಿ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಗೆ ಸರ್ಕಾರ ಅನುದಾನ ನೀಡುವುದು ವಾಡಿಕೆ. ಈಗ 1995ರಿಂದ ಸರ್ಕಾರ ವೇತನಾನುದಾನವನ್ನೇ ನೀಡಿಲ್ಲ. ಇದರಿಂದ ಶಿಕ್ಷಣ ಸಂಸ್ಥೆಗಳ ಆರ್ಥಿಕ ಹೊರೆ ಹೆಚ್ಚಾಗಿ, ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳ ಬಗ್ಗೆ ಸರ್ಕಾರ ಕಾಳಜಿ ತೋರಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರಲು ಸಭೆ ಆಯೋಜಿಸಲಾಗಿದ್ದು, ಈ ಭಾಗದ 700ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಲಿದ್ದಾರೆ ಎಂದರು.

ಶಿಕ್ಷಕರ ವೇತನಾನುದಾನ ಬಿಡುಗಡೆ ಮಾಡಬೇಕೆಂದು ರಾಜ್ಯದ ಎಲ್ಲ ಭಾಗದಿಂದ ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ. ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು ಈ ಕುರಿತಂತೆ ಹೋರಾಟ ನಡೆಸುತ್ತಿದ್ದಾರೆ. ಆದರೆ, ಸರ್ಕಾರ 2000ನೇ ಇಸ್ವಿಯ
ವರೆಗೂ ಮಾತ್ರ ಅನುದಾನ ಕೊಡುವುದಾಗಿ ಹೇಳುತ್ತಿದೆ. 2015ರ ವರೆಗೆ ವೇತನಾನುದಾನ ನೀಡಲು ಮೂರ್‍ನಾಲ್ಕು ಸಾವಿರ ಕೋಟಿ ರೂ. ಅನುದಾನ ಬೇಕಾಗುತ್ತದೆ ಎಂದು ಹೇಳಿ ಹಣಕಾಸು ಕೊರತೆ ನೆಪವೊಡ್ಡುತ್ತಿದೆ. ವಾಸ್ತವವಾಗಿ ಅಷ್ಟು ಕೋಟಿ ಅನುದಾನದ ಅಗತ್ಯವೇ ಬೀಳುವುದಿಲ್ಲ ಎಂದು ಹೇಳಿದರು.

ಕನ್ನಡ ಮಾಧ್ಯಮ ಶಾಲೆಗಳಿಗೆ ಮಾತ್ರ ವೇತನಾನುದಾನ ನೀಡುವ ಅವಕಾಶ ಇದೆ. ಈಗಾಗಲೇ ಶೇ.100 ಕನ್ನಡ ಶಾಲೆಗಳಲ್ಲಿ ಶೇ. 50 ಶಾಲೆಗಳು ಆಂಗ್ಲ ಮಾಧ್ಯಮಕ್ಕೆ ಪರಿವರ್ತನೆಯಾಗಿವೆ. ಉಳಿದ ಶೇ.25 ಶಾಲೆಗಳು ಮುಚ್ಚಿವೆ. ಈಗ ಶೇ. 25 ಮಾತ್ರ ಕನ್ನಡ ಮಾಧ್ಯಮ ಶಾಲೆಗಳು ಉಳಿದಿವೆ. ಹೀಗಾಗಿ ಸರ್ಕಾರ ಸಮೀಕ್ಷೆ ನಡೆಸಿ, ಅನುದಾನ ನೀಡಬೇಕೆಂದು ಆಗ್ರಹಿಸಿದರು.

ಸರ್ಕಾರಕ್ಕೆ ನಿಜವಾಗಿ ಆರ್ಥಿ ಕ ಹೊರೆಯಾದರೆ, ವಿವಿಧ ಯೋಜನೆಗಳಿಗಾಗಿ ಜಿಲ್ಲೆಗಳಿಗೆ ಬಿಡುಗಡೆ ಮಾಡುವ ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋಗುತ್ತದೆ. ಇದೇ ಅನುದಾನವನ್ನು ಆಯಾ ಜಿಲ್ಲೆಗಳ ಶಾಲೆಗಳಿಗೆ ವೇತನಾನುದಾನವಾಗಿ ನೀಡಲಿ. ಇದರಿಂದ ಕನ್ನಡವೂ ಬೆಳೆದಂತೆ ಆಗುತ್ತದೆ. ಖಾಸಗಿ ಕನ್ನಡ ಶಾಲೆಗಳಿಗೆ ರಕ್ಷಣೆ ನೀಡಿದಂತೆ ಆಗುತ್ತದೆ. ಈ ಕುರಿತು ಮೂರು ದಿನಗಳಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಒಕ್ಕೂಟದ ಜಿಲ್ಲಾ ಸಂಚಾಲಕ ಅರುಣಕುಮಾರ ಪೋಚಾಲ, ಚನ್ನಬಸಪ್ಪ ಗಾರಂಪಳ್ಳಿ, ರಾಜಶೇಖರ ಮರಡಿ, ಮಹೇಶ ಧರಿ ಇದ್ದರು.

Advertisement

ಓದಿ :  ಪಲ್ಸ್‌ ಪೋಲಿಯೋ ಅಭಿಯಾನ ಯಶಸ್ಸಿ ಗೆ ಕರೆ

Advertisement

Udayavani is now on Telegram. Click here to join our channel and stay updated with the latest news.

Next