ಸಿರುಗುಪ್ಪ: ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಮಹಿಳಾ ಕಾರ್ಮಿಕರಿಗೆ ಮತ್ತು ಕುಂಟೆ ಹರಗಲು ಹಾಗೂ ಬಿತ್ತನೆ ಮಾಡಲು, ಭತ್ತದ ಗದ್ದೆ ನಾಟಿಗೆ ಭೂಮಿಯನ್ನು ಸಮತಟ್ಟು ಮಾಡಲು ಎತ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಸುಮಾರು 53 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಇದರಲ್ಲಿ ಸುಮಾರು 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ, ಬೆಳೆಯನ್ನು ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿದ್ದು, ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದ್ದು, ಕೃಷಿ ಇಲಾಖೆ ಇಟ್ಟುಕೊಂಡಿದ್ದ ಗುರಿಯನ್ನು ಮೀರಿ ಹತ್ತಿ ಬೆಳೆಯನ್ನು ಬೆಳೆಯಲಾಗಿದೆ.
ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಒಣ ಮೆಣಸಿನಕಾಯಿ ಬೆಳೆ ಬೆಳೆಯುವ ಗುರಿಯನ್ನು ರೈತರು ಹೊಂದ್ದಿದ್ದು, ಇಲ್ಲಿವರೆಗೆ ಸುಮಾರು 1500 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ನಾಟಿಯಾಗಿರುತ್ತದೆ. ಸೂರ್ಯಕಾಂತಿ, ಸಜ್ಜೆ, ಮೆಕ್ಕಜೋಳ, ಭತ್ತನಾಟಿಗೆ ಬೇಕಾದ ಭತ್ತದ ಸಸಿಯಲ್ಲಿ ಕಳೆ ಕೀಳಲು ರೈತರು ಮುಂದಾಗಿರುವುದರಿಂದ ಮಹಿಳಾ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ.
ಈಗಾಗಲೇ ಬಿತ್ತನೆ ಮಾಡಿರುವ ಹತ್ತಿ ಹೊಲದಲ್ಲಿ ಕಳೆ ತೆಗೆಯಲು ಎತ್ತುಗಳ ಬಳಕೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಎತ್ತುಗಳ ಬಾಡಿಗೆಯೂ ಹೆಚ್ಚಾಗಿದ್ದು, ಹತ್ತಿ, ಸಜ್ಜೆ, ಒಣಮೆಣಸಿನಕಾಯಿ, ಮೆಕ್ಕೆಜೋಳ ಬೆಳೆಗಳಲ್ಲಿ ಕುಂಟೆ ಹರಗಲು ಒಂದು ದಿನಕ್ಕೆ ಎತ್ತುಗಳ ಭಾಡಿಗೆಯನ್ನು ರೂ.1 ಸಾವಿರ ನಿಗದಿ ಮಾಡಲಾಗಿದೆ. ಬೆಲೆ ಹೆಚ್ಚಾದರೂ ರೈತರು ಎತ್ತುಗಳಿಂದಲೇ ಕುಂಟೆ ಹರಗುವ ಕಾರ್ಯದಲ್ಲಿ ತೊಡಗಿದ್ದಾರೆ.
ಬೆಳೆದ ಬೆಳೆಗಳಲ್ಲಿ ಎತ್ತುಗಳು ಓಡಾಡುವುದರಿಂದ ಉತ್ತಮ ಇಳುವರಿ ಬರುತ್ತದೆ ಎನ್ನುವ ನಂಬಿಕೆ ಇಲ್ಲಿನ ರೈತರಲ್ಲಿ ಬಲವಾಗಿ ಬೇರೋರಿದೆ.