ಬಳ್ಳಾರಿ: ನಾಡೋಜ ಡಾ| ಸಿದ್ದಲಿಂಗಯ್ಯನವರು ನಮ್ಮನ್ನು ಅಗಲಿದರೂ ಅವರ ಕಾವ್ಯಗಳ ಮೂಲಕ ಸದಾ ಅಮರರಾಗಿದ್ದಾರೆ. ಅವರ ಅಂತಃಕರಣವು ಕಲ್ಯಾಣ ರಾಜ್ಯದ ಹಣತೆ ಅವರ ಅಗಲಿಕೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರು ಯಾವ ಸ್ಥಾನಮಾನದಲ್ಲಿದ್ದರೂ ಕವಿ ವ್ಯಕ್ತಿತ್ವವನ್ನು ಎಂದೂ ಕಳೆದುಕೊಳ್ಳದೆ, ಆ ಅಸ್ಮಿತೆಯನ್ನೇ ಉಳಿಸಿಕೊಂಡಿದ್ದರು ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ| ಸಿದ್ದು ಪಿ. ಆಲಗೂರ ಅಭಿಪ್ರಾಯ ಪಟ್ಟರು.
ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಮತ್ತು ವಿವೇಕ ವೇದಿಕೆ ವತಿಯಿಂದ ಬುಧವಾರ ಆನ್‌ಲೈನ್‌ನಲ್ಲಿ ಆಯೋಜಿಸಲಾಗಿದ್ದ ನಾಡೋಜ ದಿ. ಡಾ| ಸಿದ್ದಲಿಂಗಯ್ಯ ಅವರಿಗೆ ನುಡಿನವåನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡೋಜ ಸಿದ್ದಲಿಂಗಯ್ಯನವರು ತಮ್ಮ ಚಿಂತನೆಯಲ್ಲಿ ಹೊಸತನವನ್ನು ಪ್ರಯೋಗಿಸಿ ಸಾಮಾಜಿಕವಾಗಿ ನೊಂದ ಜನರ ದನಿಯಾಗಿ ಬದುಕಿದ್ದರು ಎಂದರು.
ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ ಅವರು, ಸಿದ್ದಲಿಂಗಯ್ಯನವರ ಬರಹಗಳು ಕಾಲಘಟ್ಟಗಳ ಪ್ರತಿನಿಧಿಯಾಗಿದ್ದವು ಮತ್ತು ಅಂಥ ಸನ್ನಿವೇಶ ಬಂದಾಗ ಮತ್ತೆ ಮತ್ತೆ ಅಸ್ತಿತ್ವ ಉಳಿಸಿಕೊಳ್ಳುವ ಸಾಮರ್ಥ್ಯವುಳ್ಳವಾಗಿದ್ದವು. ತೀರ ಶೋಷಿತ ಸಮಾಜದ ಹಿನ್ನೆಲೆಯಲ್ಲಿ ಬೆಳೆದು ಬಂದ ಅವರು ಸಮಾಜಕ್ಕೆ ವಿಶೇಷ ಸಾಹಿತ್ಯ ರಚನೆ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೊಸ ರೂಪದಲ್ಲಿ ಕೊಡುಗೆ ನೀಡಿದರು.
ಸಮಾಜವು ಅವರಿಗೆ ಸಾಹಿತ್ಯ ಕ್ಷೇತ್ರದ ಉನ್ನತ ಗೌರವ ಸ್ಥಾನ ಮಾನವನ್ನು ನೀಡಿತು. ಸಮಾಜಕ್ಕೆ ಸಾಹಿತ್ಯದ ಕೊಡುಗೆ ನೀಡಿ ಸಾರ್ಥಕವಾಗಿ ಬಾಳಿದರು ಆದರೆ ಕೆಲವು ಮನಸುಗಳು ಅವರನ್ನು ದಲಿತ ಕವಿ ಎಂದು ಸೀಮಿತಗೊಳಿಸುವುದು ವಿಪರ್ಯಾಸ ಎಂದರು. ವರ್ಷದಿಂದ ಸಾಮರಸ್ಯದ ಕಡೆಗೆ ಪ್ರಯಾಣ ಮಾಡಿದ ಕಾವ್ಯಗಳು ಸಿದ್ದಲಿಂಗಯ್ಯನವರು ಸಾಹಿತಿಯಾಗಿ ಮತ್ತು ಚಳುವಳಿಗಾರರಾಗಿ ರಾಷ್ಟ್ರೀಯವಾದಿಯಾಗಿ ಮುನ್ನೆಡೆದರು. ರಕ್ತ ದೇಹದ ಹೊರಗೆ ಹರಿದರೆ ಮರಣ, ರಕ್ತವು ದೇಹದ ಒಳಗೆ ಹರಿದರೆ ಜೀವನ, ಸಿದ್ದಲಿಂಗಯ್ಯನವರ ಕಾವ್ಯ ಜೀವನ ರೂಪಿಸಲು ಸಹಕಾರಿ.
ದಲಿತರ ಮಾತು ಕಳ್ಳು-ಬಳ್ಳಿಯ ಅಂತಃಕರಣವನ್ನು ಪ್ರತಿನಿ ಸುತ್ತದೆ. ಸಿದ್ದಲಿಂಗಯ್ಯನವರ ಕಾವ್ಯವು ದಲಿತರ ಕಾವ್ಯವೆಂದು ಬಲಿತರು ಓದದೇ ಇದ್ದದೆ ಅದು ಬಲಿತರಿಗೆ ಅನ್ಯಾಯವೇ ಹೊರತು ದಲಿತರಿಗಲ್ಲ. ದಾರಿಯಾವುದು ಎಂಬ ಹುಡುಕಾಟದ ದಾರಿಯನ್ನು ಹುಡುಕಿ ಅಂತಿಮವಾಗಿ ಬುದ್ದನೆಡೆಗೆ ಬಂದರು ಎಂದು ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ| ಶಶಿಕಾಂತ ಉಡಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಮಂಜುನಾಥ್ ನುಡಿನಮನ ಗೀತೆಯನ್ನು ಹಾಡಿದರು. ಡಾ| ಕೆ.ಸಿ. ಪ್ರಶಾಂತ್ ವಂದಿಸಿದರು. ಡಾ| ಕುಮಾರ್ ನಿರ್ವಹಿಸಿದರು. ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರರು ವಿವಿ ವ್ಯಾಪ್ತಿಯ ಕಾಲೇಜುಗಳ ಬೋಧಕರು, ವಿದ್ಯಾರ್ಥಿಗಳು ಸೇರಿದಂತೆ ಆನ್‌ಲೈನ್ ನಲ್ಲಿ ಸುಮಾರು 600ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.