ಬಳ್ಳಾರಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸದಸ್ಯರನ್ನು ನೇಮಕ ಮಾಡದೆ ರಾಜ್ಯಸರ್ಕಾರ ಯೋಜನಾ ಸಚಿವ ನಾರಾಯಣಗೌಡ ಅವರಿಂದ ಪ್ರಗತಿ ಪರಿಶೀಲನೆ ಸಭೆ ನಡೆಸುವ ಮೂಲಕ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಿದೆ. ಇದನ್ನು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ತೀವ್ರವಾಗಿ ವಿರೋಧಿಸುತ್ತಿದ್ದು, ಕೂಡಲೇ ಸಭೆಯನ್ನು ರದ್ದುಗೊಳಿಸಬೇಕು ಎಂದು ಸಮಿತಿ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನಾರಾಜ್ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕಲ್ಯಾಣ ಕರ್ನಾಟಕ ಭಾಗಕ್ಕೆ 371 (ಜೆ) ಅಡಿ ವಿಶೇಷ ಸ್ಥಾನಮಾನ ಲಭಿಸಿದ್ದು, ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ರಚನೆ ಮಾಡಲಾಗಿದೆ. ಇದಕ್ಕೆ ಸಂವಿಧಾನದ ಮಾನ್ಯತೆಯೂ ಇದೆ. ಸರ್ಕಾರದಿಂದ ಯಾವುದೇ ಆದೇಶಗಳನ್ನು ಹೊರಡಿಸಿದರೂ ಅನುಷ್ಠಾನದ ಹಕ್ಕನ್ನು ರಾಜ್ಯಪಾಲರೊಬ್ಬರೇ ಹೊಂದಿರುತ್ತಾರೆ.
ಮಂಡಳಿಯ ಅಧ್ಯಕ್ಷ ಸ್ಥಾನದ ನಿಯಮವನ್ನು ಬದಲಿಸಿರುವ ಬಿಜೆಪಿ ಸರ್ಕಾರ ಸಚಿವರ ಬದಲಿಗೆ ಶಾಸಕರಿಗೆ ಅಧ್ಯಕ್ಷ ಸ್ಥಾನವನ್ನು ನೀಡಿ ಸದಸ್ಯರನ್ನೇ ನೇಮಕ ಮಾಡಿಕೊಳ್ಳದೆ ಇದೀಗ ಯೋಜನಾ ಸಚಿವ ನಾರಾಯಣಗೌಡರಿಂದ ಜುಲೆ„ 13 ರಂದು ಮಂಡಳಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಂಡಳಿಯಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಿದೆ. ಕೂಡಲೇ ಸಭೆಯನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಮಂಡಳಿಗೆ ಕೂಡಲೇ ಸದಸ್ಯರನ್ನು ನೇಮಕ ಮಾಡಬೇಕು. ಈ ಹಿಂದಿನಂತೆ ಅಧ್ಯಕ್ಷರನ್ನಾಗಿ ಸಚಿವರನ್ನೇ ನೇಮಕ ಮಾಡಬೇಕು. ಮಂಡಳಿಗೆ ಪ್ರತ್ಯೇಕ ಕಾರ್ಯದರ್ಶಿಯನ್ನು ನೇಮಕ ಮಾಡಬೇಕು. ಮಂಡಳಿಗೆ ನೀಡುವ ವಾರ್ಷಿಕ ಅನುದಾನ 1500 ಕೋಟಿ ರೂಗಳನ್ನು 2500 ಕೋಟಿ ರೂ.ಗಳಿಗೆ ಹೆಚ್ಚಿಸಬೇಕು. ಸಚಿವ ಗೋವಿಂದ ಕಾರಜೋಳ ಅಧ್ಯಕ್ಷರಾಗಿರುವ ಸಂಪುಟ ಉಪಸಮಿತಿಯನ್ನು ಪುನರ್ ರಚಿಸಬೇಕು. ಕಲ್ಯಾಣ ಕರ್ನಾಟಕ ಭಾಗ ಹೊರತುಪಡಿಸಿ ರಾಜ್ಯಮಟ್ಟದಲ್ಲಿ 371(ಜೆ) ಯಾವ ರೀತಿ ಅನುಷ್ಠಾನವಾಗಿದೆ ಎಂಬುದನ್ನು ತಿಳಿಯಲು ಅನುಷ್ಠಾನ ಆಯೋಗ ರಚಿಸಬೇಕು.
ಸಂಪುಟ ಉಪಸಮಿತಿ ಹಿಂದಿನ ಅಧ್ಯಕ್ಷ ಎಚ್.ಕೆ.ಪಾಟೀಲ್ ಮಾಡಿದ್ದ 25 ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಬೇಕು. ಕೆಕೆ ಭಾಗದವರಿಗೆ ರಾಜ್ಯದ 24 ಜಿಲ್ಲೆಗಳಲ್ಲಿ 371(ಜೆ) ಮೀಸಲಾತಿ ಶೇ. 8ನ್ನು ಶೇ.20ಕ್ಕೆ ಹೆಚ್ಚಿಸಬೇಕು ಸೇರಿದಂತೆ ಇನ್ನಿತರೆ ನಿರ್ಣಯ ಕೈಗೊಂಡಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದವರು ತಿಳಿಸಿದರು. ಟಿ.ಜಿ.ವಿಠಲ್ ಇದ್ದರು.