Advertisement

ಪೋಷಕರಲ್ಲಿ 3ನೇ ಅಲೆ ಆತಂಕ ಬೇಡ: ಡಾ|ಯೋಗಾನಂದರೆಡ್ಡಿ

10:18 PM Jun 16, 2021 | Team Udayavani |

ಬಳ್ಳಾರಿ: ಮೆಡಿಕಲ್‌ ಸರ್ವಿಸ್‌ ಸೆಂಟರ್‌ ರಾಜ್ಯ ಸಮಿತಿಯು ಕೋವಿಡ್‌ 3ನೇ ಅಲೆ ಮತ್ತು ಮಕ್ಕಳ ಮೇಲಾಗುವ ಪರಿಣಾಮಗಳ ಕುರಿತು ಈಚೆಗೆ ಆನ್‌ಲೈನ್‌ನಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಐಎಂಎ ಮಾಜಿ ರಾಜ್ಯಾಧ್ಯಕ್ಷ, ಖ್ಯಾತ ಮಕ್ಕಳ ತಜ್ಞ ಡಾ| ಯೋಗಾನಂದರೆಡ್ಡಿ ಮಾತನಾಡಿ, ಹಿಂದೆ ಆಗಿಹೋದ ಸಾಂಕ್ರಾಮಿಕ ಅಲೆಗಳನ್ನು ಅಭ್ಯಾಸಿಸಿ ಮತ್ತು ಪ್ರಸಕ್ತ ಕೋವಿಡ್‌ ಸಾಂಕ್ರಾಮಿಕವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಹೇಳುವುದಾದರೆ, 3ನೇ ಅಲೆ ಬಗ್ಗೆ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಈಗಾಗಲೇ ಮೊದಲನೆ ಮತ್ತು ಎರಡನೇ ಅಲೆಯಲ್ಲಿ ಅಂದಾಜು ಶೇ.24 ಮಕ್ಕಳಿಗೆ ಕೊರೊನಾ ಸೋಂಕು ಬಂದು ಹೋಗಿದೆ. ತೀವ್ರ ತರವಾದ ರೋಗ ಅವರಲ್ಲಿ ಕಂಡುಬಂದಿಲ್ಲ.

ಮಕ್ಕಳ ತಜ್ಞರ ಅಭಿಪ್ರಾಯವೂ ಸಹ ಇದೇ ಆಗಿದೆ. ಆದರೂ, ಸರ್ಕಾರ ಮತ್ತು ಆರೋಗ್ಯ ಇಲಾಖೆ ತನ್ನ ತಯಾರಿಯನ್ನು ಮಾಡಿಕೊಳ್ಳಬೇಕು. ಸಾರ್ವಜನಿಕರು, ಪೋಷಕರು ಈಗಾಗಲೇ ತಿಳಿದಿರುವ ಮುಂಜಾಗ್ರತಾ ಕ್ರಮಗಳನ್ನು ಮುಂದುವರಿಸಬೇಕು. ಸರ್ಕಾರವು ಕೈಗೊಳ್ಳುವ ತಯಾರಿಯು ಕೇವಲ ಈಗಿನ ಸಾಂಕ್ರಾಮಿಕತೆಗಷ್ಟೇ ಸೀಮಿತಗೊಳಿಸದೆ, ದೂರದೃಷ್ಟಿ ಇಟ್ಟುಕೊಂಡು, ಮುಂದಿನ ಕನಿಷ್ಟ 10 ವರ್ಷವನ್ನು ಗಮನದಲ್ಲಿ ಇಟ್ಟುಕೊಂಡು ತಯಾರಿ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಸಾಂಕ್ರಾಮಿಕ ರೋಗತಜ್ಞ ಡಾ| ಕೆ.ಪ್ರಕಾಶ್‌ ಮಾತನಾಡಿ, ಈ ಅಲೆಗಳು ಬರುವ ಪ್ರಕ್ರಿಯೆ ಮತ್ತು 3ನೇ ಅಲೆ ನಿಭಾಯಿಸುವುದು ಹೇಗೆ ಎಂಬುದರ ಕುರಿತು ವಿವರಿಸಿದರು. ವೈರಾಣುವಿನ ಸಾಂಕ್ರಾಮಿಕ ಅಲೆಗಳಲ್ಲಿ ಬರುತ್ತವೆ. ಅತಿಹೆಚ್ಚು ಜನರು ಸೋಂಕಿತರಾದಾಗ ಅದು ಅಲೆಯಾಗುತ್ತದೆ. 3ನೇ ಅಲೆಯನ್ನು ನಿಭಾಯಿಸುವುದಕ್ಕೆ ಸರಿಯಾದ ತಯಾರಿ ಅವಶ್ಯಕವಾಗಿದೆ. ಆಸ್ಪತ್ರೆಗಳಲ್ಲಿ ಮಕ್ಕಳ ವಾರ್ಡ್‌, ಮಕ್ಕಳ ಐಸಿಯು, ಅವರ ವಯಸ್ಸಿಗೆ ಬೇಕಾದ ಸಾಮಗ್ರಿ ಹಾಗೂ ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ಕೊರತೆಯಾಗದ ಹಾಗೆ ಸಿದ್ಧತೆ ಮಾಡಿಕೊಂಡಿರಬೇಕು.

ಜನರು ಮುಂಜಾಗ್ರತಾ ಕ್ರಮಗಳಲ್ಲಿ ಸಡಿಲತೆ ತೋರಿಸದೆ ಮುಂದುವರಿಸಬೇಕು. ಜನರ ಸಾರ್ವಜನಿಕ ಸಭೆ ಸಮಾರಂಭಗಳು, ಜನಜಂಗುಳಿಗಳನ್ನು ತಡೆಯಬೇಕು ಎಂದು ತಿಳಿಸಿದರು. ಆನ್‌ಲೈನ್‌ ವಿಚಾರ ಸಂಕಿರಣದಲ್ಲಿ ಎಂಎಸ್‌ಸಿಯ ರಾಜ್ಯ ಜಂಟಿ ಕಾರ್ಯದರ್ಶಿ ಡಾ| ಬಿ.ಎನ್‌.ಹೇಮಾದೇವಿ ನಡೆಸಿಕೊಟ್ಟರು. ಡಾ| ವಿದ್ಯಾ, ಕಚೇರಿ ಕಾರ್ಯದರ್ಶಿ ಡಾ| ಸುರೇಶ್‌ ಹೆಗಡೆ ಸೇರಿ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next