Advertisement

ಹೆಚ್ಚಾಯ್ತು ಬೇಡಿಕೆ; ಆಗ್ತಿಲ್ಲ ಪೂರೈಕೆ

10:07 PM Jun 16, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿ ವರ್ಷದಿಂದ ವರ್ಷಕ್ಕೆ ಮೆಣಸಿನಕಾಯಿ ಬೆಳೆಯುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಮೆಣಸಿನಕಾಯಿ ಬೆಳೆಯುವ ಪ್ರದೇಶ ಹೆಚ್ಚಳವಾಗಿದ್ದು, ಪ್ರಸಕ್ತ ವರ್ಷ ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ.

ಹೆಚ್ಚು ಇಳುವರಿ, ಅಧಿಕ ಲಾಭವನ್ನು ತಂದುಕೊಡುತ್ತಿರುವುದು ರೈತರು ಮೆಣಸಿನಕಾಯಿ ಬೆಳೆಯಲು ಮುಂದಾಗುತ್ತಿರುವುದು ಪ್ರಮುಖ ಕಾರಣವಾಗಿದೆ. ಬಳ್ಳಾರಿ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಣಿಜ್ಯ ಬೆಳೆ ಹತ್ತಿ ಮತ್ತು ನೀರಾವರಿ ಸೌಲಭ್ಯ ಇರುವ ಕಾರಣ ಅಷ್ಟೇ ಪ್ರಮಾಣದಲ್ಲಿ ಭತ್ತವನ್ನೂ ಬೆಳೆಯಲಾಗುತ್ತಿತ್ತು.

ಆದರೆ, ಕಾಲುವೆ ಕೊನೆ ಭಾಗಕ್ಕೆ ಸಮರ್ಪಕ ನೀರು ದೊರೆಯದ ಹಿನ್ನೆಲೆಯಲ್ಲಿ ಹಾಗೂ ಭತ್ತಕ್ಕೆ ಬೆಂಬಲ ಬೆಲೆಯ ಸಮಸ್ಯೆಯಿಂದಾಗಿ ಭತ್ತದ ರೈತರು ಮತ್ತು ಪ್ರತಿವರ್ಷ ಬೆಲೆಯ ಏರಿಳಿತದಿಂದಾಗಿ ಹತ್ತಿ ಬೆಳೆಯುವ ರೈತರು ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮೆಣಸಿನಕಾಯಿ ಬೆಳೆಯತ್ತ ವಾಲುತ್ತಿದ್ದಾರೆ. ಭತ್ತಕ್ಕೆ ಬೇಕಾದಷ್ಟು ನೀರಿನ ಅಗತ್ಯವೂ ಮೆಣಸಿನಕಾಯಿ ಬೆಳೆಗೆ ಬೇಕಿಲ್ಲ. ಎಕರೆಗೆ 10ಕ್ಕೂ ಹೆಚ್ಚು ಕ್ವಿಂಟಲ್‌ ಇಳುವರಿ ದೊರೆಯುವುದರ ಜೊತೆಗೆ ಮಾರುಕಟ್ಟೆಯಲ್ಲೂ ಹೆಚ್ಚು ಬೆಲೆ ದೊರೆಯಲಿದೆ. ಹಾಗಾಗಿ ನಿರೀಕ್ಷಿತ ಪ್ರಮಾಣದಷ್ಟು ಲಾಭ ದೊರೆಯದಿದ್ದರೂ ನಷ್ಟದ ಸುಳಿಗಂತೂ ಸಿಲುಕುವುದಿಲ್ಲ ಎಂಬ ವಿಶ್ವಾಸದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮೆಣಸಿನಕಾಯಿ ಬೆಳೆಯತ್ತ ವಾಲುತ್ತಿದ್ದಾರೆ.

ದುಪ್ಪಟ್ಟಾದ ಮೆಣಸಿನಕಾಯಿ ಪ್ರದೇಶ:ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳು ನೀರಾವರಿ ಸೌಲಭ್ಯವನ್ನು ಹೊಂದಿವೆ. ಬಳ್ಳಾರಿ ತಾಲೂಕು ರೂಪನಗುಡಿ ಹೋಬಳಿ, ಕೊಳಗಲ್ಲು, ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲೂಕುಗಳ ಕಾಲುವೆ ಕೊನೆಯ ಭಾಗದ ರೈತರು, ಸಮರ್ಪಕ ನೀರು ದೊರೆಯದ ಹಿನ್ನೆಲೆಯಲ್ಲಿ ಮೆಣಸಿನಕಾಯಿ ಬೆಳೆಯತ್ತ ವಾಲುತ್ತಿದ್ದಾರೆ. ತೋಟಗಾರಿಕೆ ಇಲಾಖೆ ಅಧಿ ಕಾರಿಗಳ ಮಾಹಿತಿಯಂತೆ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಮೆಣಸಿನಕಾಯಿ ಬೆಳೆಯನ್ನು ಕೇವಲ 18-20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. 2019ರಲ್ಲಿ 30 ಸಾವಿರ ಹೆಕ್ಟೇರ್‌ಗೆ, 2020ರಲ್ಲಿ 42 ಸಾವಿರ ಹೆಕ್ಟೇರ್‌ಗೆ ಹೆಚ್ಚಳವಾಯಿತು. ಪ್ರಸಕ್ತ 2021ರಲ್ಲೂ ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ರೈತರಿಂದ ಹೆಚ್ಚು ಬೇಡಿಕೆಯಿದ್ದು, ಈಗಾಗಲೇ 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ನಾಟಿಮಾಡುವಷ್ಟು ಬೀಜವನ್ನು ಖಾಸಗಿ ಕಂಪನಿಯಿಂದ ವಿತರಣೆಯಾಗಿದೆ.

Advertisement

ಇನ್ನೂ ನೂರಾರು ರೈತರು ಮೆಣಸಿನಕಾಯಿ ಬೀಜಕ್ಕಾಗಿ ಪ್ರತಿದಿನ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ. ಒಟ್ಟಾರೆ ಪ್ರಸಕ್ತ ವರ್ಷ 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯುವ ಸಾಧ್ಯತೆಯಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮೆಣಸಿನಕಾಯಿ ಬೆಳೆಯುವ ಪ್ರದೇಶ ಎರಡೂವರೆ ಪಟ್ಟು ಹೆಚ್ಚಳವಾಗಿದೆ. ಬೆಳೆಗೆ ತಕ್ಕಂತೆ ಬೆಲೆ: ಮೆಣಸಿನಕಾಯಿ ಬೆಳೆ ಬೆಳೆಯಲು 120 ಗ್ರಾಂ ಬೀಜವನ್ನು ನರ್ಸರಿಯಲ್ಲಿ ಬೆಳೆಸಿದಾಗ 16-18 ಸಾವಿರ ಸಸಿಗಳು ಬರಲಿವೆ. ಈ ಸಸಿಗಳನ್ನು ಎಕರೆಗೆ 16 ಸಾವಿರದಂತೆ ನಾಟಿ ಮಾಡಲಾಗುತ್ತದೆ. ಗೊಬ್ಬರ, ಔಷಧ ವೆಚ್ಚ ಸೇರಿ ಎಕರೆಗೆ ಒಂದೂವರೆ ಲಕ್ಷ ರೂ.ಗಳವರೆಗೆ ಖರ್ಚು ಬರಲಿದೆ.

ಬೆಳೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿದಲ್ಲಿ ಇಳುವರಿಯೂ 25-35 ಕ್ವಿಂಟಲ್‌ ವರೆಗೂ ಇಳುವರಿ ಬರಲಿದೆ. ಕೊನೆಪಕ್ಷ 20-25 ಕ್ವಿಂಟಲ್‌ ಇಳುವರಿಯಾದರೂ ಕೈಗೆಟುಕಲಿದೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿಯ ಗುಣಮಟ್ಟ ಮತ್ತು ಬಣ್ಣಕ್ಕೆ ತಕ್ಕಂತೆ ಬೆಲೆಯೂ ಸಿಗಲಿದೆ. ಪ್ರತಿ ಕ್ವಿಂಟಲ್‌ಗೆ 10 ರಿಂದ 14-16 ಸಾವಿರ ರೂ. ವರೆಗೂ ಬೆಲೆ ದೊರೆಯಲಿದೆ. ಹಾಗಾಗಿ ಹೆಚ್ಚು ಲಾಭ ಸಿಗದಿದ್ದರೂ ಮೆಣಸಿನಕಾಯಿ ಬೆಳೆಯಿಂದ ನಷ್ಟವಂತೂ ಆಗಲ್ಲ. ಆದರೆ ಭತ್ತಕ್ಕೆ ಎಕರೆಗೆ 10-15 ಸಾವಿರ ರೂ. ಲಾಭ ನಿರೀಕ್ಷಿಸಬಹುದು. ಕೆಲವೊಮ್ಮೆ ಬೆಂಬಲ ಬೆಲೆಯೂ ಸಿಗುವುದು ಕಷ್ಟವಾಗಲಿದೆ. ಹಾಗಾಗಿ ಹೆಚ್ಚಿನ ರೈತರು ಮೆಣಸಿನಕಾಯಿ ಬೆಳೆಯತ್ತ ವಾಲುತ್ತಿದ್ದಾರೆ ಎಂದು ಚರಕುಂಟೆ ಗ್ರಾಮದ ಮೆಣಸಿನಕಾಯಿ ಬೆಳೆಯ ರೈತ ನಾಗರಾಜ್‌ ತಿಳಿಸಿದರು.

5531ಗೆ ಹೆಚ್ಚಿದ ಬೇಡಿಕೆ: ರೈತರಲ್ಲಿ ವಿಶ್ವಾಸ ಮೂಡಿಸಿರುವ ಖಾಸಗಿ ಕಂಪನಿಯ 5531 ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ತಾಲೂಕಿನ ರೈತರಲ್ಲಿ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. 5531 ಬೀಜದಷ್ಟೇ ಇಳುವರಿ ನೀಡುವ ಇತರೆ ಲಕೀÒ$¾, ಇಂಡಮ್‌, ಐಟಿಸಿ, ರವಿ ಸೇರಿ ಇನ್ನಿತರೆ ಒಳ್ಳೆಯ ಕಂಪನಿಗಳ ಬಿತ್ತನೆ ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಬೀಜಗಳು ಸಹ ಅಷ್ಟೇ ಪ್ರಮಾಣದಲ್ಲಿ ಇಳುವರಿ ನೀಡಲಿವೆ. 5531 ಕಂಪನಿಯ 2043 ಬೀಜವೂ ಲಭ್ಯವಿದೆ. ಆದರೂ ರೈತರು 5531 ಬೀಜಕ್ಕೆ ಹೆಚ್ಚು ಅಲೆದಾಡುತ್ತಿದ್ದಾರೆ. ರೈತರು ಈ ಬಗ್ಗೆ ಗಮನ ಹರಿಸಬೇಕು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಮೆಣಸಿನಕಾಯಿ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2019ರಲ್ಲಿ ಕೇವಲ 30 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುತ್ತಿದ್ದ ಮೆಣಸಿನಕಾಯಿ ಬೆಳೆಯನ್ನು ಪ್ರಸಕ್ತ ವರ್ಷ ಈಗಾಗಲೇ ಸುಮಾರು 70 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯುವಷ್ಟು ಬಿತ್ತನೆ ಬೀಜವನ್ನು ಖಾಸಗಿಯವರಿಂದ ರೈತರಿಗೆ ವಿತರಣೆಯಾಗಿದೆ. ಒಟ್ಟಾರೆ ಪ್ರಸಕ್ತ ವರ್ಷ ಸುಮಾರು 80 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇಶದಲ್ಲಿ ನಾಟಿಯಾಗುವ ಸಾಧ್ಯತೆಯಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಮೆಣಸಿಕಾಯಿ ಬೆಳೆಯುವ ಪ್ರದೇಶ ದುಪ್ಪಟ್ಟು ಜಾಸ್ತಿಯಾಗಿದೆ.

ಶರಣಪ್ಪ ಪಿ.ಬೋಗಿ,

ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next