ಕೂಡ್ಲಿಗಿ: ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ವಿತರಿಸಿರುವ ಸೂರ್ಯಕಾಂತಿ ಬಿತ್ತನೆಬೀಜ ಖರೀದಿಸಿ ಬಿತ್ತನೆ ಮಾಡಿದ್ದರೂ ಎರಡು ವಾರ ಕಳೆದರೂ ಮೊಳಕೆಯೊಡೆಯದೇ ಇರುವುದರಿಂದ ನಷ್ಟ ಅನುಭವಿಸಿರುವ ಅನ್ನದಾತರು ಪಟ್ಟಣದ ರೈತ ಸಂಪರ್ಕ ಕೇಂದ್ರದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಯ ಹತ್ತಾರು ಹಳ್ಳಿಗಳ ರೈತರು, ರೈತ ಸಂಪರ್ಕ ಕೇಂದ್ರದ ಬಳಿ ಜಮಾಯಿಸಿ ಕೃಷಿ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ “ಬೀಜರಾಜ’ ಹೆಸರಿನ ಸೂರ್ಯಕಾಂತಿ ಬಿತ್ತನೆ ಬೀಜವನ್ನು ಕೃಷಿಕರು ಖರೀದಿಸಿ ಬಿತ್ತನೆ ಮಾಡಿದ್ದಾರೆ. ಈ ಸೂರ್ಯಕಾಂತಿ ಬಿತ್ತನೆ ಬೀಜವನ್ನು ಕರ್ನಾಟಕ ಬೀಜ ನಿಗಮ ಪೂರೈಸಿದ್ದನ್ನು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ವಿತರಿಸಿದ್ದಾರೆ.
ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಪೂರೈಕೆ ಮಾಡಿದ ಬಿತ್ತನೆ ಬೀಜವು ಮೊಳಕೆಯೊಡೆಯದೇ ಇರುವುದರಿಂದ ರೈತರು ನಷ್ಟ ಅನುಭವಿಸಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲೂ ಭೂಮಿಯನ್ನೇ ನಂಬಿದ ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಿಸಿರುವುದರಿಂದ ರೈತರೆಲ್ಲ ಮಾತಾಡಿಕೊಂಡು ರೈತ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಹೋಬಳಿ ವ್ಯಾಪ್ತಿಯ ಹುಲಿಕೆರೆ, ಕಾನಹೊಸಹಳ್ಳಿ, ಆಲೂರು, ಕಾನಮಡುಗು, ಜುಟ್ಟಲಿಂಗನಹಟ್ಟಿ, ಇಮಡಾಪುರ, ಬಯಲು ತುಂಬರಗುದ್ದಿ, ರಂಗನಾಥನಹಳ್ಳಿ ಸೇರಿ ಅನೇಕ ಹಳ್ಳಿಗಳಿಂದ ಆಗಮಿಸಿದ್ದ ನೂರಾರು ರೈತರು ಕೃಷಿ ಇಲಾಖೆಯಿಂದ ವಿತರಿಸಿದ ಕಳಪೆ ಬಿತ್ತನೆ ಬೀಜದಿಂದ ರೈತರಿಗೆ ಮೋಸವಾಗಿದೆ. ಒಂದು ವರ್ಷದ ಹಳೆಯ ಬೀಜದ ಪ್ಯಾಕೇಟ್ ಮೇಲಿನ ದಿನಾಂಕವನ್ನು ತಿದ್ದಿ ರೈತರಿಗೆ ವಿತರಣೆ ಮಾಡಲಾಗಿದೆ.
ಇದರಿಂದ ಅನ್ನದಾತರಿಗೆ ಆಗಿರುವ ನಷ್ಟಕ್ಕೆ ಒಂದು ವರ್ಷದ ಬೆಳೆಯ ಪರಿಹಾರ ನೀಡಬೇಕು, ಪುನಃ ಉಚಿತವಾಗಿ ಬಿತ್ತನೆ ಬೀಜ ವಿತರಿಸಬೇಕು. ಇನ್ಮುಂದೆ ಹೀಗಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಬಳ್ಳಾರಿಯ ಎಜಿಎಂ ನಾಗರಾಜ ನಾಯ್ಕ, ಜಿಎಂ ನಿತ್ಯಾನಂದ, ತಹಶೀಲ್ದಾರ್ ಟಿ.ಜಗದೀಶ್, ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೊಳ್ಳಿ, ನಾಡ ಕಚೇರಿ ಉಪ ತಹಶೀಲ್ದಾರ್ ಚಂದ್ರ ಮೋಹನ್, ಪಿಎಸ್ ಐಗಳಾದ ತಿಮ್ಮಣ್ಣ ಚಾಮನೂರು, ನಾಗರತ್ನಮ್ಮ, ರೈತರಾದ ರುದ್ರಪ್ಪ, ಕೆ.ಜಿ.ಈಶ್ವರಗೌಡ, ಎನ್. ಬಿ. ಗಿರೀಶ್, ರುದ್ರಮುನಿಯಪ್ಪ, ಕೆ.ಸುಭಾಷ್ ಚಂದ್ರ, ಕೆಂಚಪ್ಪ ಮೇಷ್ಟ್ರು, ಚನ್ನಬಸಪ್ಪ, ರಾಜಶೇಖರ್, ಮಲ್ಲಪ್ಪ, ಹೇಮಂತಕುಮಾರ್, ಶರಣಮ್ಮ, ಗ್ರಾಪಂ ಸದಸ್ಯ ಎಂ.ಹೊನ್ನೂರುಸ್ವಾಮಿ ಸೇರಿ ನೂರಾರು ಜನರು ಇದ್ದರು.