ಬಳ್ಳಾರಿ: ಕೋವಿಡ್ ಸೋಂಕಿತರು ಎದುರಿಸುತ್ತಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಡಾ| ಸೈಯದ್ ನಾಸೀರ್ ಹುಸೇನ್ ಅವರು ಉಚಿತವಾಗಿ ತೆರೆದಿರುವ ಆಕ್ಸಿಜನ್ ಬ್ಯಾಂಕ್ ಮತ್ತು ನಗರದಲ್ಲಿ ಸಿಂಪಡಿಸಲು ವ್ಯವಸ್ಥೆ ಮಾಡಿರುವ ಸ್ಯಾನಿಟೈಸರ್ ಟ್ಯಾಂಕ್‌ನ್ನು ಕಾಂಗ್ರೆಸ್‌ನ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಅವರು ಶಾದಿಮಹಲ್ ಸಭಾಂಗಣದಲ್ಲಿ ಸೋಮವಾರ ಚಾಲನೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಡಾ| ಸೈಯದ್ ನಾಸೀರ್ ಹುಸೇನ್ ಅವರು, ಬಳ್ಳಾರಿಯಲ್ಲಿ ವ್ಯಾಪಕವಾಗಿ ಹರಡಿದ್ದ ಕೋವಿಡ್ ಸೋಂಕು ಸದ್ಯ ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಹಾಗಂತ ಪೂರ್ಣವಾಗಿ ನಿರ್ಮೂಲನೆಯಾಗಿಲ್ಲ. ಮೊದಲನೇ ಅವಧಿಗಿಂತ ಎರಡನೇ ಅಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಸಾವು-ನೋವು ಸಂಭವಿಸಿವೆ. ಸಕಾಲಕ್ಕೆ ಆಕ್ಸಿಜನ್ ಸಿಗದೆ ಸಾಕಷ್ಟು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಕೋವಿಡ್ ಸಾವಿನಲ್ಲಿ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನದಲ್ಲಿತ್ತು.
ಇದೀಗ ಮೂರನೇ ಅಲೆ ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂದೆಯೂ ಆಕ್ಸಿಜನ್ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಈ ಆಕ್ಸಿಜನ್ ಬ್ಯಾಂಕ್ ತೆರೆಯಲಾಗಿದೆ. ಇದಕ್ಕಾಗಿ ಒಂದು ಕಾನ್ಸಂಟ್ರೇಟ್, ಜಂಬೊ ಸಿಲಿಂಡರ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇಬ್ಬರು ತಂತ್ರಜ್ಞರುಳ್ಳ ತಾಂತ್ರಿಕ ತಂಡ ಇದನ್ನು ನಿರ್ವಹಿಸಲಿದ್ದಾರೆ.
ಕೋವಿಡ್ ಸೋಂಕು ಸಾರ್ವಜನಿಕವಾಗಿ ಹಬ್ಬದಂತೆ ಸ್ಯಾನಿಟೈಸರ್ ಸಿಂಪಡಿಸಲು ಒಂದು ಸ್ಯಾನಿಟೈಸರ್ ಟ್ಯಾಂಕರ್‌ನ್ನು ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್ ಮತ್ತು ಸ್ಯಾನಿಟೈಸರ್ ಸಾರ್ವಜನಿಕರಿಗೆ ಉಚಿತವಾಗಿ ಲಭಿಸಲಿದ್ದು, 9888114888 ಸಂಖ್ಯೆಗೆ ಕರೆ ಮಾಡಿದಲ್ಲಿ ನಮ್ಮ ತಂಡದವರು ತಂದು ನಿರ್ವಹಿಸಲಿದ್ದಾರೆ ಎಂದ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ಮುಖಂಡರ ಸಲಹೆ, ಸೂಚನೆಗಳ ಮೇರೆಗೆ ಈ ಆಕ್ಸಿಜನ್ ಬ್ಯಾಂಕ್ ತೆರೆದು, ಸ್ಯಾನಿಟೈಸರ್ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ ಎಂದವರು ವಿವರಿಸಿದರು.
ನಗರದ 39 ವಾರ್ಡ್‌ಗಳಿಗೂ ನೂತನ ಪಾಲಿಕೆ ಸದಸ್ಯರ ನೆರವಿನಿಂದ 3.60 ಲಕ್ಷ ಕೆಜಿಯಷ್ಟು 60 ಸಾವಿರ ತರಕಾರಿ ಕಿಟ್‌ಗಳನ್ನು ಬಡಜನರಿಗೆ ವಿತರಿಸಲಾಗಿದೆ. ಪ್ರತಿದಿನ ಸುಮಾರು 2 ಸಾವಿರಕ್ಕೂ ಹೆಚ್ಚು ಊಟದ ಪಾಕೇಟ್‌ಗಳನ್ನು ವಿತರಿಸಲಾಗಿದೆ ಎಂದವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ನಗರ ಜಿಲ್ಲಾಧ್ಯಕ್ಷ ಜಿ.ಎಸ್. ಮಹಮ್ಮದ್ ರμàಕ್, ಜಿಪಂ ಸದಸ್ಯ ಮುಂಡ್ರಿಗಿ ನಾಗರಾಜ್, ಜೆ.ಎಸ್. ಆಂಜನೇಯಲು ಮಾತನಾಡಿದರು. ಬುಡಾ ಮಾಜಿ ಅಧ್ಯಕ್ಷರಾದ ನಿರಂಜನ ನಾಯ್ಡು, ಹುಮಾಯೂನ್ ಖಾನ್, ಪಕ್ಷದ ಮುಖಂಡರಾದ ಅಸುಂಡಿ ನಾಗರಾಜಗೌಡ, ಕಲ್ಲುಕಂಬ ಪಂಪಾಪತಿ, ಅಯಾಜ್ ಅಹಮ್ಮದ್, ಅಸುಂಡಿ ವನ್ನೂರಪ್ಪ, ವೆಂಕಟೇಶ್ ಹೆಗಡೆ, ಯತೀಂದ್ರಗೌಡ, ಅರುಣ್ ಕುಮಾರ್, ಎಲ್. ಮಾರೆಣ್ಣ ಇದ್ದರು.