Advertisement

ಮೆಣಸಿನಕಾಯಿ ಬೀಜಕ್ಕಾಗಿ ರೈತರ ಅಲೆದಾಟ

09:26 PM Jun 13, 2021 | Team Udayavani

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ಸಿಂಜೆಂಟಾ ಕಂಪನಿಯ ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಅಲೆದಾಡುತ್ತಿರುವ ರೈತರ ಪರದಾಟ ತಾಲೂಕಿನಲ್ಲಿ ಇನ್ನು ಮುಂದುವರೆದಿದೆ. ನಗರದ ತೋಟಗಾರಿಕೆ ಇಲಾಖೆ ಬಳಿ ರೈತ ಸಂಪರ್ಕ ಕೇಂದ್ರಕ್ಕೆ ಬೀಜಕ್ಕಾಗಿ ನಿರೀಕ್ಷೆಗೂ ಮೀರಿ ಬಂದಿದ್ದ ರೈತರು ಮುಗಿಬಿದ್ದ ಹಿನ್ನೆಲೆಯಲ್ಲಿ ಬೀಜ ವಿತರಣೆಯನ್ನೇ ಸ್ಥಗಿತಗೊಂಡಿದ್ದು, ನಿರೀಕ್ಷೆಯಿಂದ ಬಂದಿದ್ದ ರೈತರು ನಿರಾಶೆಯಿಂದ ಹಿಂತಿರುವಂತಾಗಿದೆ. ಆದರೆ, ಬೇಕಾದವರಿಗೆ ಅಧಿಕ ಬೆಲೆಗೆ ಬೀಜ ದೊರೆಯಲಿದೆ ಎಂಬ ಆರೋಪವೂ ಕೇಳಿಬರುತ್ತಿದೆ.

ರೈತರ ವಿಶ್ವಾಸವನ್ನು ಗಳಿಸಿರುವ ಸಿಂಜೆಂಟಾ ಕಂಪನಿ ಮೆಣಸಿನಕಾಯಿ ಬಿತ್ತನೆ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ಬೀಜಕ್ಕಾಗಿ ರೈತರು, ಕೃಷಿ, ತೋಟಗಾರಿಕೆ, ಡಿಸ್ಟ್ರಿಬ್ಯೂಟರ್‌, ಡೀಲರ್‌ಗಳ ಮಳಿಗೆಗಳಿಗೆ ಅಲೆಯುತ್ತಿದ್ದಾರೆ. ಕಂಪನಿಯಿಂದ ಈಗಾಗಲೇ ಸರಬರಾಜಾಗಿರುವ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ಆದರೂ, ಬೇಡಿಕೆ ಕಡಿಮೆಯಾಗಿಲ್ಲ. ವಿವಿಧ ಗ್ರಾಮಗಳ ನೂರಾರು ರೈತರು ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಸಮರ್ಪಕವಾಗಿ ಸಿಗದ ಬೀಜಕ್ಕಾಗಿ ಅಲೆದು ಅಲೆದು ಬೇಸತ್ತಿರುವ ರೈತರು ಕಳೆದ ವಾರ ಪ್ರತಿಭಟನೆ ನಡೆಸಿ ಜಿಲ್ಲಾ ಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಗಮನ ಸೆಳೆದಿದ್ದರು.

ಸ್ಟಾಕ್‌ ಬಂದಾಕ್ಷಣ ವಿತರಿಸಲಾಗುತ್ತದೆ ಎಂದು ಅಧಿಕಾರಿಗಳು ರೈತರನ್ನು ಸಮಾಧಾನಪಡಿಸಿ ಕಳುಹಿಸಿದ್ದರು. ಅದರಂತೆ ಶನಿವಾರ ವಿತರಿಸಲಿದ್ದಾರೆ ಎಂಬ ಮಾಹಿತಿ ತಿಳಿದ ರೈತರು ತಾಲೂಕಿನ ಸಂಗನಕಲ್ಲು, ಕೊಳಗಲ್ಲು ಸೇರಿ ಹಲವಾರು ಗ್ರಾಮಗಳ ಮಹಿಳೆಯರು ಸೇರಿ ಕೇಂದ್ರದ ಬಳಿ ಸರತಿ ಸಾಲಲ್ಲಿ ಕಾದು ನಿಂತಿದ್ದರು. ಆದರೆ, ಬೀಜಕ್ಕಾಗಿ ರೈತರು ಮುಗಿಬಿದ್ದು, ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಡಿಸ್ಟ್ರಿಬ್ಯೂಟರ್‌ಗಳು ಬೀಜ ವಿತರಣೆಯನ್ನೇ ಸ್ಥಗಿತಗೊಳಿಸಿದ್ದಾರೆ. ಇದರಿಂದ ಬೀಜ ದೊರೆಯುವ ನಿರೀಕ್ಷೆಯಿಂದ ಬಂದಿದ್ದ ರೈತರಿಗೆ ಮತ್ತೂಮ್ಮ ನಿರಾಸೆಯಿಂದ ವಾಪಸ್‌ ತೆರಳುವಂತಾಗಿದೆ.

ಬಂದಿದ್ದು 40 ಕೆಜಿಯಷ್ಟೇ!: ರೈತರಲ್ಲಿ ಬೇಡಿಕೆ ಹೆಚ್ಚಿರುವ ಸಿಂಜೆಂಟಾ ಕಂಪನಿಯ ಮೆಣಸಿನಕಾಯಿ ಬಿತ್ತನೆ ಬೀಜವನ್ನು ಈಗಾಗಲೇ ಕಂಪನಿಯಿಂದ 200 ಕೆಜಿಯಷ್ಟು ರೈತರಿಗೆ ವಿತರಿಸಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುವಂತೆ ಕಳೆದ ವರ್ಷ ಬಳ್ಳಾರಿ, ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲೂಕುಗಳಲ್ಲಿ 35 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆ ಬಿತ್ತನೆಯಾಗಿತ್ತು. ಆದರೆ, ಪ್ರಸಕ್ತ ವರ್ಷ ಈಗಾಗಲೇ 50 ಸಾವಿರ ಹೆಕ್ಟೇರ್‌ ನಲ್ಲಿ ಬಿತ್ತನೆಯಾಗುವಷ್ಟು ಬೀಜ ವಿತರಣೆಯಾಗಿದೆ.

Advertisement

ಆದರೂ, ಇನ್ನು ನೂರಾರು ರೈತರು ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಸದ್ಯ ಕಂಪನಿಯಿಂದ ಕೇವಲ 40 ಕೆಜಿ ಬೀಜ ಮಾತ್ರ ಸರಬರಾಜಾಗಿದೆ. 10 ಗ್ರಾಂ ಪ್ಯಾಕೆಟ್‌ 600 ರೂ, 10 ಪಾಕೇಟ್‌ವುಳ್ಳ ಬಾಕ್ಸ್‌ನ್ನು 6 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬೀಜಕ್ಕಾಗಿ ರೈತರ ಸಾಲನ್ನು ನೋಡಿದರೆ, 40 ಕೆಜಿಯನ್ನು ಯಾರಿಗೆ ಕೊಡಬೇಕೊ ಎಂಬುದೇ ಗೊತ್ತಾಗುತ್ತಿಲ್ಲ. ಸಿಂಜೆಂಟಾ ಕಂಪನಿಯ ಬೇರೆ ಬೀಜವನ್ನು ನೀಡುತ್ತೇವೆ ಎಂದರೂ ರೈತರು ಕೇಳುತ್ತಿಲ್ಲ ಎಂದು ಕಂಪನಿ ಡಿಸ್ಟ್ರಿಬ್ಯೂಟರ್‌ ಸಿದ್ದಪ್ಪ ತಿಳಿಸುತ್ತಾರೆ.

ಕಡಿಮೆ ನಷ್ಟ ಹೆಚ್ಚಿದ ವಿಶ್ವಾಸ: ಸಿಂಜೆಂಟಾ ಕಂಪನಿಯ ಮೆಣಸಿನಕಾಯಿ ಬಿತ್ತನೆ ಬೀಜದಿಂದ ಉತ್ತಮ ಫಸಲು ದೊರೆಯುವುದರ ಜತೆಗೆ ನಷ್ಟದ ಸುಳಿಗೆ ಸಿಲುಕಿಸುವುದಿಲ್ಲ ಎಂಬುದು ರೈತರು ಕಂಪನಿ ಮೇಲೆ ವಿಶ್ವಾಸ ಬೆಳೆಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಸಿಂಜೆಂಟಾ ಕಂಪನಿ ಬೀಜವನ್ನು ಬಿತ್ತನೆ ಮಾಡಿದರೆ ಅ ಧಿಕ ಮಳೆ ಬಂದರೂ ಫಸಲು ಕೆಡುವುದಿಲ್ಲ. ಮೆನಸಿನಕಾಯಿಗಳ ಮೇಲೆ ಕಪ್ಪುಚುಕ್ಕೆಗಳು ಜಾಸ್ತಿ ಬೀಳುವುದಿಲ್ಲ. ಬಿಸಿಲು ಬೀಳುತ್ತಿದ್ದಂತೆ ನೆಲದಲ್ಲಿ ತೇವಾಂಶ ಕಡಿಮಯಾಗುತ್ತಿದ್ದಂತೆ ಪುನಃ ಚಿಗುರೊಡೆಯಲಿದೆ. ಹಾಗಾಗಿ ಈ ಕಂಪನಿಯ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ರೈತರು ಪರದಾಡುತ್ತಿದ್ದಾರೆ.

ಆದರೆ, ಬೇರೆ ಕಂಪನಿ ಬೀಜ ಹಾಗಲ್ಲ. ಜಾಸ್ತಿ ಮಳೆಯಾದರೆ ಕಾಯಿಗಳ ಮೇಲೆ ಕಪ್ಪುಚುಕ್ಕೆ ಬಂದು, ಗಿಡಗಳೆಲ್ಲವೂ ಬಾಡಲಿವೆ ಎನ್ನುತ್ತಾರೆ ಬೀಜಕ್ಕಾಗಿ ಗಂಟೆಗಟ್ಟಲೆ ಸಾಲಲ್ಲಿ ನಿಂತಿದ್ದ ಕೊಳಗಲ್ಲು, ಸಂಗನಕಲ್ಲು ಗ್ರಾಮಗಳ ರೈತರು. ಆರೋಪ: ಸಿಂಜೆಂಟಾ ಕಂಪನಿ ಮೆಣಸಿನಕಾಯಿ ಬೀಜಕ್ಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಡಿಸ್ಟ್ರಿಬ್ಯೂಟರ್‌ಗಳು, ತಮಗೆ ಬೇಕಾದವರಿಗೆ, ಪರಿಚಿತರಿಗೆ ಅ ಧಿಕ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

ಇದನ್ನು ನಿಯಂತ್ರಿಸುವ ಸಲುವಾಗಿ ಮಳಿಗೆಗಳ ಮೇಲೆ ದಾಳಿ ನಡೆಸಿದ್ದ ತೋಟಗಾರಿಕೆ, ಕೃಷಿ ಇಲಾಖೆ ಅಧಿ ಕಾರಿಗಳು, ಡಿಸ್ಟ್ರಿಬ್ಯೂಟರ್‌ಗಳ ಸಮ್ಮುಖದಲ್ಲೇ ಡೀಲರ್‌ಗಳು ರೈತರಿಗೆ ಬೀಜವನ್ನು ವಿತರಿಸಬೇಕು ಎಂದು ತಾಕೀತು ಮಾಡಿದ್ದರು. ಆದರೆ, ಬೀಜಕ್ಕಾಗಿ ರೈ‌ರು ಮುಗಿಬಿದ್ದ ಹಿನ್ನೆಲೆಯಲ್ಲಿ ಬೀಜ ವಿತರಣೆಯನ್ನೇ ಸ್ಥಗಿತಗೊಂಡಿದ್ದು, ರೈತರ ಪರದಾಟ ಯಾವಾಗ ಸ್ಥಗಿತಗೊಳ್ಳಲಿದೆ ಕಾದು ನೋಡಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next