Advertisement
ಬಳ್ಳಾರಿ: ಮುಂಗಾರು ಹಂಗಾಮು ಆರಂಭವಾಗಿದ್ದು, ಎಲ್ಲೆಡೆ ಮಳೆ ಸುರಿಯಲಾರಂಭಿಸಿದೆ. ಕಳೆದ ವರ್ಷದಂತೆ ಈ ಬಾರಿಯೂ ಪ್ರವಾಹ ಬಂದಲ್ಲಿ ನಿಭಾಯಿಸಲು ಅಗತ್ಯ ಸಿದ್ದತೆಗಳನ್ನು ಕೈಗೊಂಡಿರುವ ಜಿಲ್ಲಾಡಳಿತ, ಪ್ರವಾಹ ಪೀಡಿತ ತಾಲೂಕು, ಗ್ರಾಮಗಳಲ್ಲಿನ ಮೀನುಗಾರರಿಗೆ, ಯುವಕರಿಗೆ ತರಬೇತಿ ನೀಡಿದ್ದು, ಸೋಂಕಿನ ಲಕ್ಷಣಗಳುಳ್ಳವರಿಗೆ ಪ್ರತ್ಯೇಕ ಕಾಳಜಿ ಕೇಂದ್ರಗಳನ್ನು ತೆರೆದು ಆರೈಕೆ ಮಾಡಲು ಸನ್ನದ್ಧವಾಗಿದೆ.
Related Articles
Advertisement
64 ಕಾಳಜಿ ಕೇಂದ್ರ: ರೋಗ ಲಕ್ಷಣವುಳ್ಳವರಿಗೆ ಪ್ರತ್ಯೇಕ: ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಈ ಗ್ರಾಮಗಳಲ್ಲಿನ ಜನರನ್ನು ತಾತ್ಕಾಲಿಕವಾಗಿ ಸ್ಥಳೀಯ ಶಾಲಾ ಕಟ್ಟಡ ಸೇರಿ ಇನ್ನಿತರೆ ಸಾರ್ವಜನಿಕ ಸ್ಥಳಗಳಿಗೆ ಸ್ಥಳಾಂತರಿಸಿ ಆರೈಕೆ ಮಾಡುವ ಸಲುವಾಗಿ 64 ಕಾಳಜಿ ಕೇಂದ್ರಗಳನ್ನು ತೆರೆಯಲಾಗುತ್ತದೆ. ಕಳೆದ ಬಾರಿಯಂತೆ ಈ ಬಾರಿಯೂ 32 ಕಾಳಜಿ ಕೇಂದ್ರ ತೆರೆಯುವುದರ ಜತೆಗೆ ಕೋವಿಡ್ ಸೋಂಕು ಇರುವುದರಿಂದ ಎಲ್ಲರನ್ನೂ ಒಂದೇ ಕಡೆ ಸೇರಿಸುವ ಬದಲಿಗೆ ರೋಗ ಲಕ್ಷಣಗಳುಳ್ಳವರಿಗಾಗಿ ಪ್ರತ್ಯೇಕವಾಗಿ 32 ಕಾಳಜಿ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಒಟ್ಟು 64 ಕಾಳಜಿ ಕೇಂದ್ರಗಳನ್ನು ಗುರುತಿಸಿ ಅವುಗಳಲ್ಲಿ ಶೌಚಾಲಯ, ವಿದ್ಯುತ್, ಕುಡಿವ ನೀರಿನ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಇನ್ನು ರಸ್ತೆ, ಮನೆ ದುರಸ್ತಿಗೆ ಸಂಬಂ ಧಿಸಿದಂತೆ ಸಹಾಯಕ ಆಯುಕ್ತರು, ತಹಶೀಲ್ದಾರ್, ಪಿಆರ್‌ಇಡಿ ಇಂಜಿನಿಯರ್ ಅವರುಗಳುಳ್ಳ ಸಮಿತಿ ರಚಿಸಲಾಗಿದೆ.
ಯುವ ಮೀನುಗಾರರಿಗೆ ತರಬೇತಿ: ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ರಕ್ಷಣೆ ಮಾಡಲು ಗುರುತಿಸಲಾದ ಗ್ರಾಮಗಳಲ್ಲಿನ ಯುವ ಮೀನುಗಾರರಿಗೆ, ಸ್ವಯಂ ಸೇವಕರಿಗೆ ಹೇಗೆ ರಕ್ಷಣೆ ಮಾಡಬೇಕು ಎಂಬುದರ ಕುರಿತು ಸೂಕ್ತ ತರಬೇತಿ ನೀಡಲಾಗಿದೆ. ಜತೆಗೆ ನದಿ ನಡುಗಡ್ಡೆಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ನಾಲ್ಕು ಬೋಟ್‌ಗಳನ್ನು ಸಿದ್ಧಪಡಿಸಲಾಗಿದ್ದು, ಪ್ರವಾಹ ಪೀಡಿತ ತಾಲೂಕುಗಳಾದ ಹಡಗಲಿ, ಹರಪನಹಳ್ಳಿ, ಸಿರುಗುಪ್ಪ ಮತ್ತು ಬಳ್ಳಾರಿ ತಾಲೂಕುಗಳಲ್ಲಿ ತಲಾ ಒಂದು ಮೀಸಲಿಡಲಾಗಿದೆ. ಜಾನುವಾರುಗಳಿಗೆ ಮೇವು ಸಂಗ್ರಹಿಸಲಾಗಿದ್ದು, ಸದ್ಯ ಜಿಲ್ಲೆಯಾದ್ಯಂತ 1,37,842 ಟನ್ ದಾಸ್ತಾನಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಕೃಷಿ ಚಟುವಟಿಕೆ ಬಿರುಸು: ಪ್ರಸಕ್ತ ವರ್ಷ ಮುಂಗಾರು ಹಂಗಾಮು ಈಗಾಗಲೇ ಆರಂಭವಾದ ಹಿನ್ನೆಲೆಯಲ್ಲಿ ಉಭಯ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ. ಏಕದಳ, ದ್ವಿದಳ, ಎಣ್ಣೆಕಾಳು, ವಾಣಿಜ್ಯ ಬೆಳೆ ಸೇರಿ ಒಟ್ಟು 4,23,365 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೆ ಕೃಷಿ ಇಲಾಖೆ ಗುರಿ ಹೊಂದಿದೆ. ಈ ಕುರಿತು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭತ್ತ, ಜೋಳ, ರಾಗಿ, ಮುಸುಕಿನಜೋಳ, ಸಜ್ಜೆ, ತೊಗರಿ, ಹೆಸರು, ಅವರೆ, ವಾಣಿಜ್ಯ ಬೆಳೆ ಬಿತ್ತನೆ ಕಾರ್ಯ ನಡೆಯುತ್ತಿದೆ. ಈ ಪೈಕಿ ಏಕದಳ 4160 ಹೆಕ್ಟೇರ್, ದ್ವಿದಳ 354 ಹೆಕ್ಟೇರ್, ಎಣ್ಣೆಕಾಳು 1469 ಹೆಕ್ಟೇರ್, ವಾಣಿಜ್ಯ ಬೆಳೆ 4767 ಹೆಕ್ಟೇರ್ ಸೇರಿ ಒಟ್ಟು 10750 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಇನ್ನು ಉಭಯ ಜಿಲ್ಲೆಗಳಲ್ಲಿ ಭತ್ತ, ಹೆ„ಭತ್ತ, ಜೋಳ, ರಾಗಿ ಸೇರಿ ವಿವಿಧ ಬೆಳಗಳ ಒಟ್ಟು 11196.72 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದ್ದು, ಈ ಪೈಕಿ 1807.35 ಕ್ವಿಂಟಲ್ ಬೀಜವನ್ನು ರಿಯಾಯಿತಿಯಲ್ಲಿ ವಿತರಿಸಲಾಗಿದೆ. 9389.37 ಕ್ವಿಂಟಲ್ ಬೀಜ ಸದ್ಯ ದಾಸ್ತಾನಿದೆ. ರಸಗೊಬ್ಬರ ದಾಸ್ತಾನು: ಮುಂಗಾರು ಹಂಗಾಮು ಏಪ್ರಿಲ್ ತಿಂಗಳಿಂದ ಸೆಪ್ಟೆಂಬರ್‌ವರೆಗೆ ಇರಲಿದ್ದು, ಅಲ್ಲಿವರೆಗೆ ಯೂರಿಯಾ, ಡಿಎಪಿ, ಎಂಒಪಿ, ಎನ್‌ಪಿಕೆ, ಎಸ್‌ಎಸ್‌ಪಿ, ಅಮೋನಿಯಂ ಸಲ್ಫೆಟ್ ಸೇರಿ ಒಟ್ಟು 2,02,359 ಮೆಟ್ರಿಕ್ ಟನ್ ಬೇಡಿಕೆಯಿದೆ.
ಸದ್ಯ ಏಪ್ರಿಲ್-ಜೂನ್ ತಿಂಗಳವರೆಗೆ 97381 ಮೆಟ್ರಿಕ್ ಟನ್ ಬೇಡಿಕೆಯಿದ್ದು, ಈ ಪೈಕಿ ಈಗಾಗಲೇ 81194 ಮೆಟ್ರಿಕ್ ಟನ್ ಸರಬರಾಜಾಗಿದೆ. 34973.5 ಮೆಟ್ರಿಕ್ ಟನ್ ವಿತರಿಸಲಾಗಿದ್ದು, 46220.5 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ ಎಂದು ಕೃಷಿ ಇಲಾಖೆಯ ಅಂಶಗಳು ಸ್ಪಷ್ಟಪಡಿಸುತ್ತವೆ.