ಬಳ್ಳಾರಿ: ಕೇಂದ್ರ ಸರ್ಕಾರದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿ ಸಿ ತಾಲೂಕಿನ ಕೊರ್ಲಗುಂದಿ, ಶ್ರೀಧರಗಡ್ಡೆ, ಕೋಳೂರು ಗ್ರಾಮಗಳಲ್ಲಿ ಕಾರ್ಪೋರೇಟ್ ಕಂಪನಿಗಳನ್ನು ಓಡಿಸಿ ಕೃಷಿಯನ್ನು ಉಳಿಸಿ ಸಂಪೂರ್ಣ ಕ್ರಾಂತಿ ದಿನದ ನಿಮಿತ್ತ ರೈತ ಕೃಷಿ, ಕಾರ್ಮಿಕ ಸಂಘಟನೆ (ಎಐಕೆಕೆಎಂಎಸ್) ವತಿಯಿಂದ ತಿದ್ದುಪಡಿ ಕಾಯ್ದೆಗಳ ಪ್ರತಿಯನ್ನು ದಹನ ಮಾಡಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಕಳೆದ ವರ್ಷ ಇದೇ ದಿನ ಅಂದರೆ 2020ರ ಜೂನ್ 5ರಂದು ಬಿಜೆಪಿಯ ಮೋದಿ ಸರ್ಕಾರವು ಕೃಷಿ, ರೈತರ ಹಾಗೂ ದೇಶದ ಜನಸಾಮಾನ್ಯರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಎಪಿಎಂಸಿ, ಭೂಸುಧಾರಣೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳನ್ನು ಹಠಾತ್ತಾಗಿ ಸುಗ್ರೀವಾಜ್ಞೆ ಹೊರಡಿಸಿ ತಂದಿತು. ಈ ಸುಗ್ರೀವಾಜ್ಞೆಗಳಿಗೆ ನಂತರದಲ್ಲಿ ಮೂರು ಕರಾಳ ಕೃಷಿ ಕಾಯ್ದೆಗಳ ರೂಪ ಕೊಡಲಾಯಿತು.
ಅದರ ವಿರುದ್ಧ ನಾವೆಲ್ಲ ಒಂದಾಗಿ ಸಂಯುಕ್ತ ಕಿಸಾನ್ ಮೋರ್ಚಾ ಪತಾಕೆಯಡಿ ಹೋರಾಡುತ್ತಿದ್ದೇವೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು. ಈ ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಾಗಿನಿಂದ ನಮ್ಮ ಸಂಘಟನೆ ಆಲ್ ಇಂಡಿಯಾ ಕಿಸಾನ್ ಖೆತ್ ಮಜ್ದೂರ್ ಸಂಘಟನ್ (ಎಐಕೆಕೆಎಂಎಸ್-ಕರ್ನಾಟಕದಲ್ಲಿ ಆರ್‌ಕೆಎಸ್) 21 ರಾಜ್ಯಗಳಲ್ಲಿ ರೈತ ಚಳವಳಿಗಳ ಮಧ್ಯೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ನಮ್ಮ ಸಂಘಟನೆಯು 1974-75ರಲ್ಲಿ ನಡೆದ ಜೆಪಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು.
2017ರಿಂದಲೂ ನಾವು ಚಳವಳಿಯ ಜಂಟಿ ವೇದಿಕೆ ಮತ್ತು ಈಗ ಸಂಯುಕ್ತ ಕಿಸಾನ್ ವೋರ್ಚಾದ (ಎಐಕೆಕೆಎಂ) ಮುಖ್ಯ ಭಾಗವಾಗಿರುವ ಎಐಕೆಎಂಸಿಸಿಯಲ್ಲಿ ಪ್ರಮುಖ ಭಾಗಿದಾರರಾಗಿದ್ದೇವೆ ಎಂದು ಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ಕೈಬಿಡಬೇಕು ಎಂವರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಆರ್‌ಕೆಎಸ್ ಜಿಲ್ಲಾ ಕಾರ್ಯದರ್ಶಿ ಇ. ಹನುಮಂತಪ್ಪ, ಜಿಲ್ಲಾ ಮುಖಂಡ ಗೋವಿಂದ್ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ಬಸಣ್ಣ, ಪಂಪಾಪತಿ ಮತ್ತು ಇತರರು ಇದ್ದರು.