ಬಳ್ಳಾರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಳ್ಳಾರಿ ನಗರ ಮತ್ತು ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಈ ವರ್ಷ 10 ಸಾವಿರ ಸಸಿಗಳನ್ನು ನೆಡುವ ಗುರಿ ಹಾಕಿಕೊಳ್ಳಲಾಗಿದ್ದು, ಆದ್ಯತೆ ಮೇರೆಗೆ 5 ಸಾವಿರ ಸಸಿಗಳನ್ನು ನೆಡಲಾಗುತ್ತದೆ ಎಂದು ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಹೇಳಿದರು.
ವಿಶ್ವ ಪರಿಸರದ ದಿನದ ಪ್ರಯುಕ್ತ ಜಿಲ್ಲಾಡಳಿತ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ವಾಲ್ಮೀಕಿ ಅಭಿವೃದ್ಧಿ ನಿಗಮದ ಎದುರುಗಡೆಯಿರುವ ಪಾರ್ಕ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ನಂತರ ಮಾತನಾಡಿದರು.
ನಾವು ಇಂದು ನೆಟ್ಟ ಗಿಡ ಮುಂದಿನ ಪೀಳಿಗೆಗೆ ಆಮ್ಲಜನಕ ನೀಡುವ ಕೆಲಸ ಮಾಡುತ್ತದೆ. ಕೊರಾನಾ ಸಮಯದಲ್ಲಿ ಆಕ್ಸಿಜನ್‌ಗಾಗಿ ಪರದಾಡಿದ ಘಟನೆ ನಡೆಯಿತು. ಮುಂದೆ ಇಂಥ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಬೇಕು. ನಗರದ ಎಲ್ಲ ಪಾರ್ಕ್‌ಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲರೂ ಕೈಜೋಡಿಸಿ ಪ್ರತಿ ಮನೆಗಳ ಮುಂದೆ ಗಿಡ ಬೆಳೆಸಿ ಅದು ಮುಂದೆ ಹೆಮ್ಮರವಾಗಿ ಬೆಳೆದು ಎಲ್ಲ ಜನರಿಗೆ ಉಪಯೋಗವಾಗುತ್ತದೆ ಎಂದು ಅವರು ಹೇಳಿದರು.
ಮನೆಗೆ ಬಂದು ನೋಡುವೆ: ಅರಣ್ಯ ಇಲಾಖೆ ವತಿಯಿಂದ ವಾರ್ಡ್‌ನ ಸಾರ್ವಜನಿಕರಿಗೆ ಶಾಸಕ ನಾಗೇಂದ್ರ ಅವರು ಸಸಿಗಳನ್ನು ವಿತರಿಸಿದರು. ಕೇವಲ ಗಿಡ ನೆಡುವುದು ಒಂದು ದಿನಕ್ಕೆ ಸೀಮಿತವಾಗದೆ ಅದನ್ನು ಬೆಳೆಸಿ, ಕಾಪಾಡಿಕೊಂಡು ಹೋಗಬೇಕು. ಮುಂದೊಂದು ದಿನ ನಾನೇ ಸ್ವತಃ ನಿಮ್ಮ ಮನೆಗಳಿಗೆ ಬಂದು ನೀವು ನೆಟ್ಟ ಗಿಡಗಳನ್ನು ನೋಡುವೆ ಎಂದರು.
ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹೊÉàಟ್ ಮಾತನಾಡಿ, ನಗರ ವ್ಯಾಪ್ತಿಯ ಶಾಲೆ-ಕಾಲೇಜು, ಪಾರ್ಕ್ ಮತ್ತು ಪಾಲಿಕೆಯ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡಲಾಗುತ್ತದೆ. ಅರಣ್ಯ ಇಲಾಖೆಯ ಸಹಯೋಗದೊಂದಿಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಈ ವರ್ಷದಲ್ಲಿ 10 ಸಾವಿರ ಸಸಿಗಳನ್ನು ನೆಡುವ ಗುರಿ ಇಟ್ಟುಕೊಳ್ಳಲಾಗಿದೆ. ಈ ಗಿಡಗಳು ಮುಂದಿನ ದಿನಮಾನಗಳಲ್ಲಿ ಹೆಮ್ಮರವಾಗಿ ಬೆಳೆದು ಹೆಚ್ಚಿನ ಆಕ್ಸಿಜನ್ ನೀಡುವ ಮೂಲಕ ಮುಂದಿನ ಪೀಳಿಗೆಗೆ ಉಸಿರಾಡಲು ಶುದ್ಧವಾದ ಗಾಳಿ ನೀಡಲಿ ಎಂದರು.
ಪರಿಸರ ಬೆಳೆಸುವುದರಿಂದ ಮುಂದಿನ ದಿನದಲ್ಲಿ ನಗರದಲ್ಲಿ ಸ್ವತ್ಛ ಮತ್ತು ಸುಂದರ ಪರಿಸರ ನಿರ್ಮಾಣವಾಗುತ್ತದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಸೈದುಲು ಅಡಾವತ್, ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾಮಪ್ಪ ಚಳಕಾಪುರೆ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ವಾರ್ಡ್‌ನ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.